ಪುಟ:ಕ್ರಾಂತಿ ಕಲ್ಯಾಣ.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದ ರಹಸ್ಯ

೪೫

ಕ್ರಮಿತನು ಹತ್ತು ದಿನಗಳಾದರೂ ನನ್ನನ್ನು ನೋಡದೆ ಇರುತ್ತಿರಲಿಲ್ಲ. ಒಳಸಂಚಿನ ವಿಚಾರ ತಿಳಿಯದಿರುವುದೇ ಅವನ ಉದಾಸೀನದ ಕಾರಣ."

ಜಗದೇಕಮಲ್ಲನು ಮತ್ತೆ ಚಿಂತಾಮಗ್ನನಾದನು. ಪ್ರಯಾಸದಿಂದ ಆಕಸ್ಮಿಕವಾಗಿ ದೊರಕಿದ ಅವಕಾಶ ವ್ಯರ್ಥವಾಗುತ್ತಿದೆಯೆಂದು ಅಗ್ಗಳನು ತಳಮಳಿಸಿದನು. ಚಿಂತೆಯಲ್ಲಿ ಕಳೆದ ಆ ಒಂದೊಂದು ಕ್ಷಣವೂ ಸವಾರರನ್ನು ಅವರಿದ್ದ ಸ್ಥಳಕ್ಕೆ ಹತ್ತಿರ ತರುತ್ತಿತ್ತು.

ಜಗದೇಕಮಲ್ಲನು ಹೇಳಿದನು: "ಎರಡು ವಾರಗಳ ಮೊದಲು ಬಿಜ್ಜಳನ ರಹಸ್ಯ ದೂತನು ನನ್ನ ಬಳಿಗೆ ಬಂದು, ರಾಣಿಯ ಮಗ ಪ್ರೇಮಾರ್ಣವನೆಂಬ ಹುಡುಗನನ್ನು ನಾನು ದತ್ತಸ್ವೀಕಾರ ಮಾಡಬೇಕೆಂದೂ, ನನ್ನ ಅನಂತರ ಅವನು ಚಾಲುಕ್ಯ ಅರಸನಾಗುವನೆಂದೂ ಹೇಳಿದನು. ಆ ವಿಚಾರವೇನು?"

"ನೀವು ಅದಕ್ಕೆ ಏನು ಉತ್ತರ ಕೊಟ್ಟಿರಿ?"

"ರಾಣಿಯ ಒಬ್ಬನೇ ಮಗನಾದ ಕೀರ್ತಿವರ್ಮನು ನನ್ನ ಬಂಧನದ ಅನಂತರ ಸತ್ತನೆಂದು ಕೇಳಿದ್ದೇನೆ. ಪ್ರೇಮಾರ್ಣವನ ವಿಚಾರ ನನಗೆ ತಿಳಿಯದು. ನಾನು ದತ್ತ ಸ್ವೀಕಾರ ಮಾಡುವುದಿಲ್ಲ-ಎಂದು ಹೇಳಿ ಕಳುಹಿಸಿದೆ."

"ಪ್ರೇಮಾರ್ಣವನು ಮಹಾರಾಣಿಯವರ ಕ್ಷೇತ್ರಜಪುತ್ರ, ಕೀರ್ತಿವರ್ಮನು ಮುಡುಪಿದ ಮೇಲೆ, ಚಾಲುಕ್ಯವಂಶ ಅಳಿಯದಿರಲೆಂದು ಮಹಾರಾಣಿಯವರು ನಿಯೋಗ ಪದ್ಧತಿಯಿಂದ ಪ್ರೇಮಾರ್ಣವನನ್ನು ಪಡೆದರು. ವಿಜಯಾರ್ಕನ ಅರಮನೆಯಲ್ಲಿ ಆರು ವರ್ಷಗಳಕಾಲ ರಹಸ್ಯವಾಗಿ ಸಲಹಿದರು. ಈಗೊಂದು ವರ್ಷದ ಹಿಂದೆ ಕರ್ಹಾಡದ ಚಾಲುಕ್ಯ ಭವನದಲ್ಲಿ ನಡೆದ ಸಭೆಯಲ್ಲಿ ಪ್ರೇಮಾರ್ಣವನ ಜನ್ಮ ವಿಚಾರ ಪ್ರಕಟಿಸಲ್ಪಟ್ಟಿತು."

"ಪ್ರೇಮಾರ್ಣವನ ತಂದೆ ಯಾರು?"

"ಆ ವಿಚಾರ ನನಗೆ ತಿಳಿಯದು. ಪ್ರೇಮಾರ್ಣವನ ದಮನಿಗಳಲ್ಲಿ ನೂರಕ್ಕೆ ನೂರು ಪಾಲು ಚಾಲುಕ್ಯ ರಕ್ತ ಹರಿಯುತ್ತಿದೆಯೆಂದು ಮಹಾರಾಣಿಯವರು ಹೇಳುತ್ತಾರೆ. ಅವನ ಜನ್ಮ ರಹಸ್ಯವನ್ನು ತಾವೇ ನಿಮಗೆ ತಿಳಿಸಬೇಕೆಂದು ಮಹಾರಾಣಿಯವರ ಇಚ್ಚೆ."

ಜಗದೇಕಮಲ್ಲನ ಹುಬ್ಬುಗಳು ಮುದುಡಿದವು. ಅವನು ಮತ್ತೆ ಯೋಚಿಸುತ್ತಿದ್ದನು. ಕ್ಷಣಗಳು ಯುಗಗಳಾದವು ಅಗ್ಗಳನಿಗೆ ಇನ್ನೇನು ಸವಾರರು ಬರುತ್ತಾರೆ ಎಂದುಕೊಂಡನು ತನ್ನಲ್ಲಿ ತಾನು.

ಕೊನೆಗೆ ಜಗದೇಕಮಲ್ಲನು, "ಇದು ಬಹಳ ಜಟಿಲವಾದ ವಿಚಾರ, ಅಗ್ಗಳ.