ಪುಟ:ಕ್ರಾಂತಿ ಕಲ್ಯಾಣ.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದ ರಹಸ್ಯ

೪೭

ಯಾರಿಗೂ ತಿಳಿಯಕೂಡದು, ಎಚ್ಚರವಿರಲಿ. ನೀನು ಶುಶ್ರೂಷೆ ಮಾಡುತ್ತ ಕುಳಿತಿರು," ಎಂದನು.

"ಕ್ರಮಿತನಿಗೆ ಈ ದಿನ ನಾನೊಂದು ಓಲೆ ಕಳುಹಿಸಿದ್ದೇನೆ. ಬೇಟೆಯಿಂದ ಹಿಂದಿರುಗಿದ ಮೇಲೆ ನನ್ನನ್ನು ನೋಡಲು ಬರುತ್ತಾನೆ. ಪ್ರೇಮಾರ್ಣವನ ಪಟ್ಟಾಭಿಷೇಕದ ವಿಚಾರ ಪ್ರಸ್ತಾಪ ಮಾಡಬಹುದು. ನಿಮ್ಮ ಉತ್ತರವನ್ನು ಮೊದಲೇ ಯೋಚಿಸಿದ್ದರೆ ಒಳ್ಳೆಯದು." ಎಂದು ಹೇಳಿ ಅಗ್ಗಳನು ಶೈತ್ಯೋಪಚಾರಕ್ಕೆ ಆರಂಭಿಸಿದನು. ಸವಾರರು ಹತ್ತಿರ ಬಂದಾಗಲು ಅದು ನಡೆಯುತ್ತಿತ್ತು.

ಕೆಲವು ಕ್ಷಣಗಳ ಮೇಲೆ ಜಗದೇಕಮಲ್ಲನು ಕಣ್ಣೆರೆದು ಸವಾರರನ್ನು ನೋಡಿ ಕಿಟ್ಟನೆ ಕಿರುಚಿ ಪುನಃ ಬಿದ್ದುಬಿಟ್ಟನು. ಬಾಯಿಂದ ನೊರೆ ನೊರೆಯಾಗಿ ಜೊಲ್ಲು ಸುರಿಯಲು ಮೊದಲಾಯಿತು.

"ಅರಸರಿಗೆ ಒಂದೊಂದು ಸಾರಿ ಹೀಗಾಗುತ್ತದೆ. ಭಯವೇನೂ ಇಲ್ಲ" ಎಂದು ಹೇಳಿ ಸವಾರರ ನಾಯಕನು ಭಲ್ಲೆಯಗಳನ್ನು ನೆಲದಲ್ಲಿ ನೆಟ್ಟು, ಮೇಲೆ ಬಟ್ಟೆ ಹರಡಿ ಜಗದೇಕಮಲ್ಲನಿಗೆ ಬಿಸಿಲು ಬೀಳದಂತೆ ಮಾಡಿದನು. ಕುದುರೆಯನ್ನು ಹುಡುಕಿ ತರಲು ಒಬ್ಬ ಸವಾರನನ್ನು ಕಳುಹಿಸಿದನು. ಇನ್ನೊಬ್ಬ ಸವಾರನು ಹೆಗ್ಗಡೆಗೆ ಸುದ್ದಿ ಕೊಡಲು ಹೋದನು.

ಇಂತಹ ಆಕಸ್ಮಿಕಗಳಿಗಾಗಿ ಮೇನೆಯೊಂದು ಶಿಬಿರದಲ್ಲಿ ಸಿದ್ಧವಾಗಿರುತ್ತಿತ್ತು. ಗಳಿಗೆಯ ಅನಂತರ ಮೇನೆಯೊಡನೆ ಹೆಗ್ಗಡೆ ಬಂದನು. ಆಗಲೂ ಜಗದೇಕಮಲ್ಲನಿಗೆ ಎಚ್ಚರವಾಗಿರಲಿಲ್ಲ. ಪ್ರಜ್ಞಾಶೂನ್ಯವಾಗಿ ಕದಲದೆ ಬಿದ್ದಿದ್ದನು. ಕಣ್ಣುಗಳ ಶೂನ್ಯ ದೃಷ್ಟಿ ಯಾವುದೋ ಅದೃಶ್ಯ ಜಗತ್ತಿನ ಪರಿಶೀಲನೆಯಲ್ಲಿ ಮಗ್ನವಾಗಿತ್ತು. ಬಾಯಿಂದ ಸುರಿದ ನೊರೆ ಗಲ್ಲದ ಮೇಲೆ ಹರಿದಿತ್ತು.

"ಕಳೆದ ಸಾರಿ ಹೀಗಾದಾಗ ಪ್ರಭುಗಳು ಪ್ರಹರಕಾಲವಾದರೂ ಏಳಲಿಲ್ಲ. ಎಚ್ಚರವಾಗುವವರೆಗೆ ಯಾರೂ ಪ್ರಭುಗಳನ್ನು ಮುಟ್ಟಬಾರದೆಂದು ವೈದ್ಯರು ಹೇಳಿದ್ದಾರೆ," -ಎಂದು ಹೆಗ್ಗಡೆ ಮೇನೆಯ ನೆರಳಲ್ಲಿ ತಾನೂ ಕುಳಿತನು.

"ನಿಮ್ಮ ರಕ್ಷಣೆಯ ಹೊಣೆ ಈಗ ಕಡಮೆಯಾಯಿತಲ್ಲವೆ?" ಸಮೀಪದಲ್ಲಿದ್ದ ಅಗ್ಗಳನೆಂದನು.

"ಕಡಿಮೆಯಾಗಲಿಲ್ಲ, ಇನ್ನಷ್ಟು ಹೆಚ್ಚಿತು, ಪಂಡಿತರೆ. ಪ್ರಭುಗಳು ರಾಜಗೃಹ ಸೇರುವವರೆಗೆ ನನ್ನ ಜೀವ ತಹತಹಿಸುತ್ತದೆ. ಅಸ್ವಸ್ಥತೆಯ ವಿಚಾರ ಬಿಜ್ಜಳರಾಯರಿಗೆ ತಿಳಿದರೆ, ವೈದ್ಯರ ಸಲಹೆ ತೆಗೆದುಕೊಳ್ಳದೆ ಬೇಟೆಗೇಕೆ ಹೋದಿರಿ ಎನ್ನುತ್ತಾರೆ. ಅವರಿಗೆ ಏನು ಉತ್ತರ ಹೇಳುವುದು ಎಂದು ಯೋಚಿಸುತ್ತಿದ್ದೇನೆ," -ಎಂದು