ಪುಟ:ಕ್ರಾಂತಿ ಕಲ್ಯಾಣ.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೮

ಕ್ರಾಂತಿ ಕಲ್ಯಾಣ

ಹೆಗ್ಗಡೆ ಪೇಚಾಡಿದನು.

ಸ್ವಲ್ಪ ಹೊತ್ತಿನ ಮೇಲೆ ಜಗದೇಕಮಲ್ಲನು ಎಚ್ಚೆತ್ತು ಎದ್ದು ಕುಳಿತು, ಹತ್ತಿರದ ಸವಾರನನ್ನು, "ಹೆಗ್ಗಡೆಯೆಲ್ಲಿ?" ಎಂದು ಕೇಳಿದನು.

ಹೆಗ್ಗಡೆ ಹತ್ತಿರ ಹೋಗಿ, "ಪ್ರಭುಗಳ ಆಜ್ಞೆಯೇನು?" ಎಂದನು.

"ಮೇನೆ ಸಿದ್ದವಾಗಿದೆಯೇ?"
"ಸಿದ್ದವಾಗಿದೆ."
"ತರುವಂತೆ ಹೇಳಿರಿ, ನಾನು ಕೂಡಲೇ ನಗರಕ್ಕೆ ಹಿಂದಿರುಗಬೇಕು."

ಪ್ರಾರಂಭವಾಗುವ ಮೊದಲೇ ಅಂದಿನ ಬೇಟೆ ಮುಗಿಯಿತು. ಮಧ್ಯಾಹ್ನದ ಹೊತ್ತಿಗೆ ಜಗದೇಕಮಲ್ಲನು ರಾಜಗೃಹಕ್ಕೆ ಹಿಂದಿರುಗಿದನು.

ಆ ದಿನ ಸಂಜೆ ಅಗ್ಗಳನು ಮಧ್ಯಾಹ್ನದ ಸುಖನಿದ್ರೆ ಮುಗಿಸಿ ವಾಸಗೃಹದಲ್ಲಿ ಕುಳಿತಿದ್ದಂತೆ ಭಟನೊಬ್ಬನು ನಾರಣಕ್ರಮಿತನನ್ನು ಕರೆದುಕೊಂಡು ಅಲ್ಲಿಗೆ ಬಂದನು.

"ನಿಮ್ಮ ಓಲೆ ನಿನ್ನೆಯೇ ತಲುಪಿತು, ಅಗ್ಗಳದೇವರಸರೆ. ಕಾರ್ಯಾವಸರದಲ್ಲಿ ನಿಮ್ಮನ್ನು ನೋಡಲಾಗಲಿಲ್ಲ. ನೀವು ಪ್ರಭುಗಳ ಸಂಗಡ ಬೇಟೆಗೆ ಹೋದಿರೆಂದು ಇಂದು ತಿಳಿಯಿತು. ಹಿಂದಿರುಗಿದ ಮೇಲೆ ನೋಡಬಹುದೆಂದು ಸುಮ್ಮನಾದೆ. ಅಷ್ಟರಲ್ಲಿ ಪ್ರಭುಗಳ ಅಸ್ವಸ್ಥದ ವಿಚಾರ ಕೇಳಿ ಕೂಡಲೇ ಬಂದೆ. ಈಗವರು ಹೇಗಿದ್ದಾರೆ?" -ಎಂದು ಕ್ರಮಿತನೇ ಪ್ರಾರಂಭಿಸಿದನು.

"ಮಧ್ಯಾಹ್ನ ಬೇಟೆಯಿಂದ ಹಿಂದಿರುಗಿದಾಗ ಸ್ವಸ್ಥರಾಗಿದ್ದರು," ಎಂದು ಅಗ್ಗಳನು ಉತ್ತರಿಸಿದನು.

"ನೀವು ಬೇಟೆಗೆ ಸಂಗಡ ಹೋದದ್ದು ಒಳ್ಳೆಯದೇ ಆಯಿತಲ್ಲವೆ?"

"ಹೌದು, ನೀವು ಹೇಳಿದ್ದ ಆ ವಿಚಿತ್ರ ರೋಗದ ಲಕ್ಷಣಗಳನ್ನು ಕಣ್ಣಾರೆ ಕಂಡೆ."

"ಅದರ ವಿಚಾರದಲ್ಲಿ ನಿಮ್ಮ ಅಭಿಪ್ರಾಯವೇನು?" –ಕ್ರಮಿತನ ಪ್ರಶ್ನೆಯಲ್ಲಿ ಕುತೂಹಲ ಎದ್ದು ಕಾಣುತ್ತಿತ್ತು.

"ನಾನು ವೈದ್ಯನಲ್ಲ. ಅನುಭವದಿಂದ ಇಷ್ಟು ಮಾತ್ರ ಹೇಳಬಲ್ಲೆ. ನೀವು ಭಾವಿಸಿದಂತೆ ಅದು ಮೂರ್ಛಾರೋಗವಲ್ಲ."

"ಹಾಗಾದರೆ........?"

"ಪ್ರಭುಗಳು ಕುದುರೆಯಿಂದ ಬಿದ್ದು ಎಚ್ಚರ ತಪ್ಪಿದಾಗ ನಾನೂ, ನಾಲ್ವರು ಸವಾರರೂ ಹತ್ತಿರಿದ್ದೆವು. ಅವರು ಕದಲದೆ ಬಿದ್ದಿದ್ದರು. ಬಾಯಲ್ಲಿ ನೊರೆ