ಪುಟ:ಕ್ರಾಂತಿ ಕಲ್ಯಾಣ.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದ ರಹಸ್ಯ

೫೧

ಹೆಗ್ಗಡೆ ತಳಮಳಿದಿಂದ ಏದುತ್ತ ಹೇಳಿದನು: "ಬೇಟೆಯಿಂದ ಬಂದ ಮೇಲೆ ವಿಶ್ರಮಿಸಿಕೊಳ್ಳುತ್ತಿದ್ದ ಪ್ರಭುಗಳು ಕೊಂಚ ಹೊತ್ತಿನ ಮೊದಲು ನನಗೆ ಹೇಳಿ ಕಳುಹಿಸಿದರು. ಕೂಡಲೆ ಹೋಗಿ ಎದುರಿಗೆ ನಿಂತೆ. 'ರಾಜಪುರೋಹಿತ ನಾರಣ ಕ್ರಮಿತರನ್ನು ನೋಡಬೇಕಾಗಿದೆ,’ ಎಂದರು. 'ಧರ್ಮಾಧಿಕರಣಕ್ಕೆ ಸುದ್ದಿ ಕಳುಹಿಸುತ್ತೇನೆ' ಎಂದೆ ನಾನು. 'ಅವರು ಅಗ್ಗಳನ ವಾಸಗೃಹದಲ್ಲಿದ್ದಾರೆ ಕರೆದುಕೊಂಡು ಬಾ' ಎಂದರು ಪ್ರಭುಗಳು. ಅವರು ಬಂದಿದ್ದರೆ ನನಗೆ ತಿಳಿಯುತ್ತಿರಲಿಲ್ಲವೆ?’ ಎಂದೆ ನಾನು. ವಾಸ್ತವದಲ್ಲಿ ನೀವು ಬಂದ ವಿಚಾರ ನನಗೆ ತಿಳಿಯದು. ಇಷ್ಟಕ್ಕೇ ಪ್ರಭುಗಳು ಕೋಪಿಸಿಕೊಂಡು, 'ಹೇಳಿದಷ್ಟು ಮಾಡು, ಮುಠ್ಠಾಳ!” ಎಂದು ಬೈದರು. ಕೈಗೆ ಸಿಕ್ಕ ವಸ್ತುಗಳನ್ನು ನನ್ನ ಕಡೆಗೆಸೆಯಲು ಪ್ರಾರಂಭಿಸಿದರು. ನಾನು ಓಡುತ್ತ ಇಲ್ಲಿಗೆ ಬಂದೆ."

ಕ್ರಮಿತನು ಅಗ್ಗಳನ ಮುಖ ನೋಡಿದನು. 'ನೋಡಿದಿರಾ ನಿಮ್ಮ ಯೋಗಿಯ ವರ್ತನೆ!’ ಎನ್ನುವಂತಿತ್ತು ಆ ದೃಷ್ಟಿ.

"ನೀವು ಬಂದ ವಿಚಾರ ಪ್ರಭುಗಳಿಗೆ ತಿಳಿದದ್ದು ಆಶ್ಚರ್ಯವಲ್ಲವೆ?” ಎಂದನು ಅಗ್ಗಳ.

ಹೆಗ್ಗಡೆ ಅವರನ್ನು ಅಂತಃಪುರಕ್ಕೆ ಕರೆದುಕೊಂಡು ಹೋದಾಗ ಜಗದೇಕಮಲ್ಲನು ವಾಸಗೃಹದಲ್ಲಿ ಶತಪಥ ತಿರುಗಾಡುತ್ತಿದ್ದನು. ಗೃಹೋಪಕರಣಗಳು, ಅಲಂಕಾರ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕಣ್ಣುಗಳ ಕೆಂಪು ಆರಿರಲಿಲ್ಲ.

ಕ್ರಮಿತನನ್ನು ನೋಡುತ್ತಲೆ ಅವನು, "ನಾನು ಹುಚ್ಚು ಹಿಡಿಯದೆ ಇನ್ನೆರಡು ದಿನ ಬದುಕಿರುವುದು ಬಿಜ್ಜಳರಾಯರ ಇಚ್ಚೆಯಾದರೆ ಈ ತಿಳಿಗೇಡಿ ಹೆಗ್ಗಡೆ, ಅವನ ಸೂಳೆಯರ ತಂಡ, ಇವರನ್ನು ಇಲ್ಲಿಂದ ಹೊರಗೆ ಹಾಕಿರಿ, ಕ್ರಮಿತರೆ!” ಎಂದು ಗದರಿದನು.

"ಬಿಜ್ಜಳರಾಯರಿಗೆ ನಿಮ್ಮಿಚ್ಛೆಯೇನೆಂಬುದನ್ನು ತಿಳಿಸುತ್ತೇನೆ. ಇಂದಿನಿಂದ ಹೆಗ್ಗಡೆ ನಿಮಗೆ ಮುಖ ತೋರಿಸುವುದಿಲ್ಲ,” ಎಂದು ಕ್ರಮಿತನು ಸಮಾಧಾನ ಹೇಳಿದನು. ಇಂಗಿತವರಿತು ಹೆಗ್ಗಡೆಯೂ ಅಲ್ಲಿಂದ ಸರಿದನು. ತುಸು ಹೊತ್ತಿನ ಮೇಲೆ ಜಗದೇಕಮಲ್ಲನು ಶಾಂತನಾಗಿ ಸಹಜ ಕಂಠದಿಂದ, "ಕುಳಿತುಕೊಳ್ಳಿರಿ, ಕ್ರಮಿತರೆ, ನೀವು ಕೂಡ ಅಗ್ಗಳದೇವ, ನಿಮ್ಮ ಸಂಗಡ ಒಂದು ಮುಖ್ಯ ವಿಚಾರ ಮಾತಾಡಬೇಕಾಗಿದೆ,” ಎಂದನು.

"ಪ್ರಭುಗಳು ಕುಳಿತುಕೊಳ್ಳಬೇಕು,” ಎಂದು ಕ್ರಮಿತನು ವಿನಯವಾಡಿದನು. ಅವನ ಮನಸ್ಸು ನುಡಿಯುತ್ತಿತ್ತು, 'ಈ ಕ್ಷಣಿಕ ಪರಿವರ್ತನೆ ಉನ್ಮತ್ತನಿಗೆ ಸಾಧ್ಯವಲ್ಲ.