ಪುಟ:ಕ್ರಾಂತಿ ಕಲ್ಯಾಣ.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದ ರಹಸ್ಯ

೫೫

ಜಗದೇಕಮಲ್ಲನು ಕರೆದು ಪುನಃ ಹೇಳಿದನು: "ಆರು ವರ್ಷಗಳ ಹಿಂದೆ, ಅರಣ್ಯಮಧ್ಯದ ಶಿಬಿರದಲ್ಲಿ ನಾನು ಕಂಡ ಅಪ್ಪರೆಯೇ ಚಾಲುಕ್ಯರಾಣಿ ಕಾಮೇಶ್ವರಿ. ನಿಯೋಗ ವಿಧಿಯಿಂದ ನನ್ನನ್ನು ಬಯಸಿದ ಅವಳು, ಬಿಜ್ಜಳರಾಯರು ತಂದೊಡ್ಡಿದ ಅಡಚಣೆಯನ್ನು ದಾಟಿ ತನ್ನ ಇಷ್ಟಾರ್ಥವನ್ನು ಈಡೇರಿಸಿಕೊಂಡಳು. ಪ್ರೇಮಾರ್ಣವನು ನನ್ನ ಔರಸಪುತ್ರ. ನಾನು ಪುನಃ ಅವನನ್ನು ದತ್ತಸ್ವೀಕಾರಮಾಡುವ ಅಗತ್ಯವಿಲ್ಲ. ಚಾಲುಕ್ಯ ಅರಸೊತ್ತಿಗೆ ಅವನ ಕುಲಧನ. ಅವನ ಉತ್ತರಾಧಿಕಾರವನ್ನು ನಾನು ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ. ಅವನ ಪಟ್ಟಾಭಿಷೇಕಕ್ಕೆ ಏರ್ಪಡಿಸುವಂತೆ ಬಿಜ್ಜಳರಾಯರಿಗೆ ತಿಳಿಸಿರಿ."

ಕ್ರಮಿತನು ಸ್ಥಂಭಿತನಾದನು. ಈ ಅಂತಃಪುರ ರಹಸ್ಯ ಜಗದೇಕಮಲ್ಲನಿಗೆ ತಿಳಿದದ್ದು ಹೇಗೆ? ಅಗ್ಗಳನಿಂದಲೆ? ಅವನು ರಾಜಗೃಹದಲ್ಲಿದ್ದ ಹತ್ತು ದಿನಗಳೂ ಜಗದೇಕಮಲ್ಲನನ್ನು ರಹಸ್ಯವಾಗಿ ನೋಡುವ ಅವಕಾಶವಿರಲಿಲ್ಲವೆಂಬುದು ಕ್ರಮಿತನಿಗೆ ತಿಳಿದಿತ್ತು. ಆದರೆ ಬರೆದು ತಿಳಿಸುವ ಅವಕಾಶವಿತ್ತಲ್ಲವೆ? ಜಗದೇಕಮಲ್ಲನ ಮಾತುಗಳಿಂದ ತನ್ನಂತೆ ಅಗ್ಗಳನೂ ಸ್ತಂಭಿತನಾದಂತೆ ಕಂಡಿತು. ಈ ಎಲ್ಲ ಅಭಿನಯದ ರಹಸ್ಯವೇನು? ಎಂದು ಯೋಚಿಸುತ್ತ ಕ್ರಮಿತನು ಮೌನವಾಗಿ ಕುಳಿತಿದ್ದನು.

ಕ್ರಮಿತನು ಸುಮ್ಮನಿರುವುದನ್ನು ಕಂಡ ಜಗದೇಕಮಲ್ಲನು, "ನನ್ನ ನಿರ್ಧಾರದ ಬಗೆಗೆ ನೀವು ಸಂದೇಹ ಪಡುವ ಅಗತ್ಯವಿಲ್ಲ. ಕರಣಿಕನನ್ನು ಕರೆಸಿ ನಿರೂಪವನ್ನು ಬರೆಸಿ, ನಿಮ್ಮ ಸಮಕ್ಷಮ ಹಸ್ತಾಕ್ಷರ ಹಾಕುತ್ತೇನೆ," ಎಂದನು.

ಕಾರಣವೇನೇ ಇರಲಿ ಜಗದೇಕಮಲ್ಲನ ಪರಿವರ್ತನೆ ಬಿಜ್ಜಳರಾಯರಿಗೆ ಸಂತೋಷವುಂಟುಮಾಡುವುದೆಂದು ಭಾವಿಸಿ ಕ್ರಮಿತನು ಅರಮನೆಯ ಚಾವಡಿಯಿಂದ ಕರಣಿಕನನ್ನು ಕರೆಸಿದನು. ಚಾಲುಕ್ಯರಾಣಿ ಕಾಮೇಶ್ವರೀದೇವಿಯ ಪುತ್ರ ಪ್ರೇಮಾರ್ಣವನು ಚಾಲುಕ್ಯರಾಜ್ಯದ ಉತ್ತರಾಧಿಕಾರಿಯೆಂದು ಘೋಷಿಸಿ, ಅವನ ಯುವರಾಜ ಪಟ್ಟಾಭಿಷೇಕವನ್ನು ನಡೆಸಲು ಆಜ್ಞೆ ಮಾಡುವ ನಿರೂಪ ರಚಿತವಾಗಿ ಜಗದೇಕ ಮಲ್ಲನು ಹಸ್ತಾಕ್ಷರ ಹಾಕಿದನು.

ಬಿಜ್ಜಳನ ಆಜ್ಞೆಯಂತೆ ಮರುದಿನವೇ ಕಲ್ಯಾಣದಲ್ಲಿ ನಿರೂಪ ಪ್ರಕಟಿಸಲ್ಪಟ್ಟು ನಾಗರಿಕರಲ್ಲಿ ಆಶ್ಚರ್ಯ ಕುತೂಹಲಗಳನ್ನು ಹುಟ್ಟಿಸಿತು. ಚಾಲುಕ್ಯ ಕಲಚೂರ್ಯ ರಾಜವಂಶಗಳ ಭವಿಷ್ಯವನ್ನು ಕುರಿತ ವಿಚಿತ್ರ ಊಹಾಪೋಹಗಳಿಗೆ ಪ್ರಾರಂಭವಾಯಿತು. ನಿರೂಪದ ಪ್ರತಿಯನ್ನು ಬಿಜ್ಜಳನು ಕಾಮೇಶ್ವರೀದೇವಿಗೆ ಕಳುಹಿಸಿ, ಪ್ರೇಮಾರ್ಣವನನ್ನು ಕಲ್ಯಾಣಕ್ಕೆ ಕರೆದುಕೊಂಡು ಬಂದು ಯುವರಾಜ ಪಟ್ಟಾಭಿಷೇಕಕ್ಕೆ ಏರ್ಪಡಿಸಬೇಕೆಂದು ಸೂಚಿಸಿ ಓಲೆ ಬರೆದನು.