ಪುಟ:ಕ್ರಾಂತಿ ಕಲ್ಯಾಣ.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೮

ಕ್ರಾಂತಿಕಲ್ಯಾಣ

"ಚಾಣಕ್ಯನಿಗೂ ನಮಗೂ ಏನು ಸಂಬಂಧ? ಏನಾಯಿತು ಸರಿಯಾಗಿ ಹೇಳು."

"ಕೊಂಬುಳ್ಳ ಪ್ರಾಣಿಗಳು, ಆಯುಧಪಾಣಿಗಳಾದ ಭಟರು, ಇವರಿಂದ ದೂರವಾಗಿರಬೇಕು ಎಂದು ಚಾಣಕ್ಯನ ಉಪದೇಶ, ಪಾನಶಾಲೆಯಿಂದ ಹೊರಗೆ ಬಂದ ಆ ನಾಲ್ವರು ಭಟರನ್ನು ನೋಡಲಿಲ್ಲವೆ ನೀವು?"

"ನೋಡಿದೆ. ಅದರಿಂದೇನು? ಕಲ್ಯಾಣದ ಪಾನಶಾಲೆಗಳು ಈಗ ಸೈನಿಕರಿಗೆ, ರಾಜಭಟರಿಗೆ ಮೀಸಲಾಗಿವೆಯೆಂದು ಕೇಳಿದ್ದೇನೆ. ಶೈವಧರ್ಮದ ಪ್ರಭಾವದಿಂದ ನಗರದ ಸಾಮಾನ್ಯ ಜನರು ಕುಡಿಯುವುದನ್ನು ಬಿಟ್ಟಿದ್ದಾರೆ. ಸಾಮಂತ ಶ್ರೀಮಂತರು ತಮಗೆ ಬೇಕಾದ ಮದ್ಯವನ್ನು ಮನೆಗೇ ತರಿಸಿಕೊಳ್ಳುತ್ತಾರೆ. ಇನ್ನುಳಿದ ರಾಜಭಟರು ಮತ್ತು ಸೈನಿಕರು ಈಗ ಪಾನಶಾಲೆಗಳ ಮುಖ್ಯ ಗಿರಾಕಿಗಳು."

ಪಿಸುದನಿಯಲ್ಲಿ ಈ ಮಾತುಕತೆಗಳು ನಡೆಯುತ್ತಿದ್ದಂತೆ ರಾಜಭಟರು ರಸ್ತೆ ಯಗಲವೂ ತೂರಾಡಿ ನಡೆಯುತ್ತ ಬ್ರಹ್ಮಶಿವ ಬೊಮ್ಮರಸರು ಅವಿತುಕೊಂಡಿದ್ದ ಮರದೆದುರಿಗೆ ಬಂದು ನಿಂತರು.

ಭಟನೊಬ್ಬನು ಕೇಳಿದನು: "ನಾವು ಎಲ್ಲಿಗಾ ಹೋಗ್ತಿರೋದು?"
"ಎಲ್ಲಿಗೆ ಮತ್ತಾ? ಆ ಪಾಂಥಾಸಕ್ಕೆ."
"ಪಾಂಥಾಸಾ ಅಲ್ಲೋ ಬೆಪ್ತಕ್ಕಡಿ! ಪಾಂಥ ನಿವಾಸ ಅಂತ ಹೇಳು. ಆ ಊಟದ ಮನಿ ಹೆಸರದು." -ಒಂದಿಷ್ಟು ಓದು ಬರಹ ಕಲಿತಿದ್ದ ಮೂರನೆಯ ಭಟನೆಂದನು.
"ಹೌದಣ್ಣಾ, ಅಲ್ಲಿ ನಮ್ ಕೆಲಸ ಹಾಂಗೇ ಉಳದೈತಿ."

ಕೆಲಸದ ಹೆಸರೆತ್ತಿದ ಕೂಡಲೇ ಮೊದಲನೆಯ ಭಟನಿಗೆ ಅಳುಕಿತು. ಅಲ್ಲಿ ನಮ್ ಕೆಲಸ ಏನಪಾ! ನಾ ಪೂರ್ತಾ ಮರತೀನಿ" ಎಂದು ಮರುಗಿದನು.

"ನಾ ಬೇಡಾಂದ್ರೂ ಕೇಳಿಲ್ಲ. ನಮ್ಮೆಲ್ಲರಿಗಿಂತ ಹೆಚ್ಚಿಗೆ ಕುಡಿದಿ ನೀನು. ಅದಕಾ ಎಲ್ಲಾನೂ ಮರತಿದ್ದಿ" -ಓದುಬರಹ ಕಲಿತಿದ್ದ ಭಟನು ಆಕ್ಷೇಪಿಸಿದನು.

"ನಾ ಮರತರೇನಾಯ್ತಣ್ಣ ನಿಂಗೆ ನೆನಪಿದ್ರಾತು" ಎಂದನು ಮೊದಲ ಭಟ.

"ನಂಗೆ ನೆನಪಿರೋದರಿಂಧೆ ನಿಮ್ ನಾಯಕ ಆಗೀನಿ ನಾನು!" ಓದು ಬರಹ ಕಲಿತಿದ್ದ ಭಟ ದರ್ಪದಿಂದ ಹೇಳಿದ, "ಆ ಊಟದ ಮನೀಗ ಇಬ್ಬರು ಬರ್ತಾರ, ಬ್ರಹ್ಮರಾಜಸೇಟ, ಶಿವಗಣಭಂಡಾರಿ ಅಂತ. ಅವರನ್ನ ಹಿಡಕೊಂಡು ಬರಬೇಕು ಅಂತ ಒಡೇರು ಹೇಳಿದ್ದು?"

ಮರದಡಿಯಲ್ಲಿ ಬೊಮ್ಮರಸ ಬ್ರಹ್ಮಶಿವಪಂಡಿತರು ನಡುಗಿದರು. ಭಟರ