ಪುಟ:ಕ್ರಾಂತಿ ಕಲ್ಯಾಣ.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ

೫೯

ಮಾತುಗಳು ಅವರಿಗೆ ಚೆನ್ನಾಗಿ ಕೇಳುತ್ತಿತ್ತು. "ನಾವು ನಗರಕ್ಕೆ ಬಂದು ಇನ್ನೂಒಂದು ದಿನ ತುಂಬಿಲ್ಲ. ಅಷ್ಟರಲ್ಲಿ ಬಿಜ್ಜಳನ ಬೇಹುಗಾರರು ನಮ್ಮ ನೆಲೆ ಪತ್ತೆಹಚ್ಚಿದ್ದು ಹೇಗೆ? ಪಾಂಥ ನಿವಾಸದಲ್ಲಿದ್ದ ಅಗ್ಗಳನ ಗತಿಯೇನಾಯಿತು?” ಎಂದುತುಡುಕಿತು, ಅವರ ಮನಸ್ಸು. ಮರದ ಹಿಂದೆ ಕತ್ತಲಲ್ಲಿ ಅಡಗಿ ನಿಂತರು.

"ಓಡೇರು ಹೇಳಿದ್ದು ನೆನಪೈತಿ. ಆದರ ಪಾಂಥನಿವಾಸ ಯಾವ ಕಡೀಗದ ಎನ್ನೋದನ್ನ ಮರತೀನಿ,” ಎಂದು ತಲೆ ಕೆರೆದುಕೊಳ್ಳುತ್ತ ಪರಿತಪಿಸಿದನು ನಾಯಕ.

"ನಾವ್ ಹೋಗ್ತಿರೂದು ಅದರ ಕಡೀಗೇ ಅಲ್ಲೇನು?” -ಇನ್ನೊಬ್ಬ ಭಟ್ಟನ ಪ್ರಶ್ನೆ.

ದಿಕ್ಕು ದೆಸೆಗಳ ಜ್ಞಾನ ಇನ್ನೂ ಕೊಂಚ ಉಳಿದಿದ್ದ ಎರಡನೆಯ ಭಟನೆಂದನು:"ನಾವು ಹಿಂಗೇ ಹೋದ್ರ ತ್ರಿಪುರಾಂತರ ಕೆರೆ ಸಿಗತೈತಿ, ಪಾಂಥನಿವಾಸ ಇರೋದು ನಮ್‌ಬೆನ್ನಿನ ಕಡಿ.

ಆಗ ಅವರಿಗೆ ತಮ್ಮ ತಪ್ಪಿನ ಅರಿವಾಯಿತು. ಹಿಂದಕ್ಕೆ ತಿರುಗಿ ಪಾಂಥನಿವಾಸದ ಕಡೆ ಹೊರಟರು. ಬೊಮ್ಮರಸ ಬ್ರಹ್ಮಶಿವರ ಜೀವ ಹೋಗಿಬಂದಂತಾಯಿತು.

ಕೊಂಚಹೊತ್ತಿನ ಮೇಲೆ ಬ್ರಹ್ಮಶಿವನು ಪಿಸುಮಾತಲ್ಲಿ, "ಈಗೇನು ಮಾಡುವುದು, ಬೊಮ್ಮರಸರೆ?” ಎಂದು ಮರುಗಿದನು. ಅವನ ನಾಲಿಗೆ ಒಣಗಿತ್ತು. ಕಾಲುಗಳು ಕುಸಿಯುತ್ತಿದ್ದವು. "ನಡೆಯಿರಿ, ಇಲ್ಲಿಂದ ತಪ್ಪಿಸಿಕೊಂಡರೆ ಉಳಿಯುವೆವು" ಎಂದು ಮತ್ತೆ ಮತ್ತೆ ಹೇಳಿದನು.

"ಇಲ್ಲಿಂದ ತಪ್ಪಿಸಿಕೊಂಡು ನಾವು ಎಲ್ಲಿಗೆ ಹೋಗುವುದು, ಬ್ರಹ್ಮಶಿವ?” ಬೊಮ್ಮಸರನೆಂದನು -ಈ ನಿಶೆಯಲ್ಲಿ ನಾವು ನೆಲೆ ಕಾಣದೆ ಬೀದಿ ಬೀದಿ ಅಲೆಯುತ್ತಿದ್ದರೆ ಖಂಡಿತವಾಗಿ ಬಿಜ್ಜಳನ ಭಟರಿಗೆ ಸಿಕ್ಕಿಬೀಳುವೆವು. ಇಲ್ಲಿಯೇ ಯಾವುದಾದರೊಂದು ಆಶ್ರಮ ಹುಡುಕಬೇಕು. ನಗರದ ಪರಿಚಯ ನನಗಿಂತ ನಿನಗೆ ಹೆಚ್ಚಾಗಿದೆ. ಯೋಚಿಸಿ ಹೇಳು, ಸಮೀಪದಲ್ಲಿ ಅಂತಹ ಸ್ಥಳ ಯಾವುದಿದೆ?"

ಬ್ರಹ್ಮಶಿವನು ಯೋಚಿಸಿ ಉತ್ತರಕೊಟ್ಟನು: "ಎದುರಿಗಿರುವ ಓಣಿಯಲ್ಲಿ ಸದಾಚಾರಿ ಮಠವಿದೆ. ಅದರ ಸ್ವಾಮಿಗಳು ಹಿಂದೆ ಸಾಮಂತಾಧಿಕಾರಿಯಾಗಿದ್ದು ಆಮೇಲೆ ಸನ್ಯಾಸ ತೆಗೆದುಕೊಂಡವರು. ಅವರು ನಮಗೆ ಆಶ್ರಯ ಕೊಟ್ಟರೂ ಕೊಡಬಹುದು. ಆದರೆ ಇಷ್ಟು ಹೊತ್ತಿನಲ್ಲಿ ಮಠದ ಬಾಗಿಲು ತೆಗೆದಿರುವುದೇ ಎಂದು ಸಂದೇಹ".

"ಹೋಗಿ ನೋಡಿದರೆ ಸಂದೇಹ ಪರಿಹಾರವಾಗುವುದು. ಜೀವ