ಪುಟ:ಕ್ರಾಂತಿ ಕಲ್ಯಾಣ.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೦

ಕ್ರಾಂತಿಕಲ್ಯಾಣ

ಉಳಿಸಿಕೊಳ್ಳಲು ಏನಾದರೂ ದಾರಿಯಿದೆಯೇ ಎಂದು ತಿಳಿಯುವುದು. ಇಲಿಯೇ ಇದ್ದರೆ ಎರಡೂ ಇಲ್ಲ.” ಎಂದು ಬೊಮ್ಮರಸನು ರಸ್ತೆಯನ್ನು ದಾಟಿ ಆ ಪಾರ್ಶ್ವದ ಓಣಿಗೆ ಹೋಗಲು ಅನುವಾದನು.

ಪಾಂಥನಿವಾಸದ ಬಳಿಗೆ ಹೋದ ಭಟರು ಒಬ್ಬನನ್ನು ಹೊರಗೆ ಕಾವಲಿಟ್ಟು ಉಳಿದ ಮೂವರು ಒಳಗೆ ಹೋದರು. ಬ್ರಹ್ಮಶಿವ ಬೊಮ್ಮರಸರು ಆಶ್ರಯಿಸಿದ್ದ ಮರ ಕಾವಲು ನಿಂತಿದ್ದ ಭಟನಿಗೆ ಕಾಣುತ್ತಿತ್ತು. ಅವನ ಕಾಕದೃಷ್ಟಿಯಿಂದ ತಪ್ಪಿಸಿ ಕೊಳ್ಳಲು ಅವರು ಸಾಲುಮರಗಳ ಮರೆಯಲ್ಲಿ ಮುಂದೆ ಹೋಗಿ ಭಟನ ದೃಷ್ಟಿ ಬೀಳದ ಸ್ಥಳದಲ್ಲಿ ರಸ್ತೆಯನ್ನು ದಾಟಿ ಇನ್ನೊಂದು ಕಡೆಯ ಮರಗಳ ಮರೆಯಲ್ಲಿ ಎಚ್ಚರದಿಂದ ನಡೆಯುತ್ತ ಸದಾಚಾರಿಮಠವಿದ್ದ ಓಣಿಗೆ ಬರಲು ಸ್ವಲ್ಪ ಹೊತ್ತಾಯಿತು.

ಈ ಸಂಚಲನೆ ನಡೆಯುತ್ತಿದ್ದಂತೆ ಕಾವಲಿದ್ದ ಭಟನು ನಿಂತಲ್ಲಿಯೇ ಕುಳಿತು ಕೊಂಡನು. ತಲೆ ಪಾರ್ಶ್ವಕ್ಕೆ ಬಾಗಿತು. ತೂಕಡಿಸಿ ಕಣ್ಣು ಮುಚ್ಚಿದನು. ಮದ್ಯದ ಹುಳಿಯಿಂದ ನಾರುತ್ತಿತ್ತು ಅವನ ಬಾಯಿ. ಆ ವಾಸನೆ ಹಿಡಿದು ಬಂದ ಎರಡು ಸೊಳ್ಳೆಗಳು ಅವನ ಮೂಗಿನ ಮೇಲೆ ಕುಳಿತು ಬಲವಾಗಿ ಕಡಿದವು. ಭಟನು ತಟ್ಟನೆ ಎಚ್ಚೆತ್ತು ಕಣ್ಣೆರೆದು ರಾಜಮಾರ್ಗದ ಮೇಲೆ ದೃಷ್ಟಿ ಹಾಯಿಸಿದನು. ಮರಗಳ ಮರೆಯಲ್ಲಿ ಯಾರೋ ಸುಳಿಯುತ್ತಿರುವಂತೆ ಕಂಡಿತು. ಕಣ್ಣೂರಸಿಕೊಂಡು ಪುನಃ ನೋಡಿದನು, ಯಾರೂ ಇರಲಿಲ್ಲ.

ಅಷ್ಟರಲ್ಲಿ ನಾಯಕನು ಹೊರಗೆ ಬಂದು, "ಕಾವಲಿರು ಅಂದ್ರ ತೂಕಡಿಸ್ತಾ ಕುಂತಲ್ಲೊ!” ಎಂದು ಗದರಿಸಿದನು.

ಭಟನಿಗೆ ತಾನು ತೂಕಡಿಸಲಿಲ್ಲವೆಂದು ತೋರಿಸಿಕೊಳ್ಳಲು ಆತುರ. ಎದ್ದು ನಿಂತು ಕೈತೋರಿಸಿ, "ಆ ಮರಗಳ ಸನಿಯದಾಗ ಇಬ್ಬರು ಸುಳಿದಂಗಾತು,” ಎಂದನು.

"ಸರಿಯಾಗಿ ನೋಡಿದೆಯಾ?"
"ನೋಡಿದೆ ಅಣ್ಣ."

ನಾಯಕನು ತಾನೂ ನೋಡಿದನು. ಸಾಲು ಮರಗಳ ಕತ್ತಲ ಅಂಚುಗಳ ನಡುವೆ ರಾಜಮಾರ್ಗ ಮಸುಕಾಗಿ ಕಾಣುತ್ತಿತ್ತು.

"ಪಂಜು ಹಚ್ಕೊಂಡೇ ಹುಡುಕಬೇಕು" ಎಂದು ನಾಯಕನು ಪಾಂಥ ನಿವಾಸದ ಒಳಗೆ ಹೋದನು.

ಬ್ರಹ್ಮಶಿವ ಬೊಮ್ಮರಸರು ಓಣಿಯ ಕೊನೆಗೆ ಬಂದರು. ಮಠದ ಹೆಬ್ಬಾಗಿಲು, ಬಾಗಿಲ ಆಸರೆಗಾಗಿ ಕಟ್ಟಿದ ಮುಖಮಂಟಪ, ಕಾಣಿಸಿತು. ಬಾಗಿಲಿಗೆ ಅಡ್ಡವಾಗಿ