ಪುಟ:ಕ್ರಾಂತಿ ಕಲ್ಯಾಣ.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ

೬೧

ಯಾವುದೋ ಒಂದು ದೊಡ್ಡ ವಸ್ತುವನ್ನು ನಿಲ್ಲಿಸಿತ್ತು. ಕೈಯಿಂದ ಮುಟ್ಟಿನೋಡಿ ತಿಳಿದರು ಹುಲ್ಲು ತುಂಬಿದ ಗಾಡಿಯೆಂದು. ಮಂಟಪವನ್ನೆಲ್ಲ ಆಕ್ರಮಿಸಿಕೊಂಡಿತ್ತು ಆ ಗಾಡಿ. ಒಂದು ಕಡೆ ಮಾತ್ರ ಅದಕ್ಕೂ ಗೋಡೆಗೂ ನಡುವೆ ಸ್ವಲ್ಪ ಸ್ಥಳವಿತ್ತು. ಬ್ರಹ್ಮಶಿವನು ನುಸುಳಿಕೊಂಡು ಬಾಗಿಲ ಹತ್ತಿರ ಹೋಗಿ ನೋಡಿದನು. ಕದಗಳನ್ನು ಮುಚ್ಚಿ ಒಳಗೆ ತಾಪಾಳ ಹಾಕಿತ್ತು.

"ಬಾಗಿಲು ಹಾಕಿದೆ, ಬೊಮ್ಮರಸರೆ. ನಾವು ಈ ಗಾಡಿಯಲ್ಲಿ ಅಡಗಿ ಕುಳಿತು ರಾತ್ರಿ ಕಳೆಯಬೇಕು," ಸಮೀಪಕ್ಕೆ ಬಂದು ಬ್ರಹ್ಮಶಿವನೆಂದನು.

ಬಳಿಕ ಅವರು ಗಾಡಿಯ ಚಕ್ರ ಮತ್ತು ಮಂಟಪದ ಗೋಡೆಯ ಸಹಾಯದಿಂದ ಹುಲ್ಲಿನರಾಶಿಯ ಮೇಲೇರಿದರು. ಕೈಕೊಟ್ಟು ಮೇಲೆಳೆದುಕೊಳ್ಳುವ ಸಾಹಸದಲ್ಲಿ ಬ್ರಹ್ಮಶಿವನು ಬೊಮ್ಮರಸನಿಗೆ ಸಹಾಯ ಮಾಡಿದನು. ಇಬ್ಬರೂ ಹುಲ್ಲಿನ ನಡುವೆ ಸ್ಥಳಮಾಡಿಕೊಂಡು ಮಲಗಿದರು. ಇಷ್ಟೆಲ್ಲ ಕಾರ್ಯ ಸದ್ದಿಲ್ಲದೆ ಕೆಲವೇ ಕ್ಷಣಗಳಲ್ಲಿ ನಡೆಯಿತು. ಪ್ರಾಣಭೀತಿ ಅವರಿಗೆ ಅದ್ಭುತ ಶಕ್ತಿ ಕೊಟ್ಟಿತ್ತು. ಗೂಡೊಳಗಿನ ಹಕ್ಕಿಗಳಂತೆ ಅವರು ಹುಲ್ಲಿನ ನಡುವೆ ಬೆಚ್ಚಗೆ ಮಲಗಿ ಸಮಾಧಾನದಿಂದ ಉಸಿರಾಡಲು ಪ್ರಾರಂಭಿಸಿದಾಗ ಓಣಿಯ ತಿರುವಿನಲ್ಲಿ ಪಂಜಿನ ಬೆಳಕು ಕಾಣಿಸಿತು. ಭಟರು ರಸ್ತೆಯಲ್ಲಿ ಹುಡುಕಿ ಯಾರನ್ನೂ ಕಾಣದೆ ಮಠದ ಓಣಿಗೆ ಬಂದಿದ್ದರು. ಬ್ರಹ್ಮಶಿವನು ಕಂಪಿಸುತ್ತ, "ನಾವು ಸಿಕ್ಕಿಬಿದ್ದೆವು. ಬೊಮ್ಮರಸರೆ!" ಎಂದು ಗದ್ಗದಿಸಿ ನುಡಿದನು.

"ಸದ್ದು ಮಾಡಬೇಡ. ಈಗ ನಮ್ಮ ಪ್ರಾಣಗಳು ಶಿವನ ಕೈಯಲ್ಲಿ. ಕೊಂದರೆ ಕೊಲ್ಲಲಿ, ಉಳಿಸಿದರೆ ಉಳಿಸಲಿ," ಎಂದು ಬೊಮ್ಮರಸನು ಧೈಯ್ಯ ಹೇಳಿದನು.

ಭಟರು ಹೆಬ್ಬಾಗಿಲಿಗೆ ಬಂದು ಅಡ್ಡವಾಗಿ ನಿಲ್ಲಿಸಿದ್ದ ಹುಲ್ಲಿನ ಗಾಡಿಯನ್ನು ನೋಡಿದರು. ಭಟನೊಬ್ಬನು ಪಾರ್ಶ್ವದ ಸಂದಿನಲ್ಲಿ ನೋಡಿ ಬಂದು "ಬಾಗಿಲಾ ಒಳಗಿಂದ ಮುಚ್ಚೈತಿ," ಎಂದನು.

"ಹಂಗಾರ ಅವರು ಈ ಹುಲ್ಲು ಗಾಡಿಲೆಲ್ಲೋ ಅಡಗಿ ಕುಳಿತಿರಬೇಕು," ಎಂದು ನಾಯಕನು ಕತ್ತಿಯನ್ನೊರೆಗಳಚಿ ಹುಲ್ಲಿನ ರಾಶಿಯಲ್ಲಿ ಎರಡು ಮೂರು ಕಡೆ ಇರಿದು ನೋಡಿದನು.

"ಹುಲ್ಲಿನೊಳಗ ಇಬ್ಬರು ಕುಳ್ಳಿರಲಿಕ್ಕೆ ಸ್ಥಳಾನಾದರೂ ಎಲ್ಲೈತಿ, ಅಣ್ಣಾ. ಅವರಿದ್ರ ರಾಶೀಮೇಲೆ ಕುಂತಿರಬೇಕು," ಇನ್ನೊಬ್ಬ ಭಟನು ಹೇಳಿದನು.

ನಾಯಕನು ಪಂಜನ್ನು ಎತ್ತಿ ಹಿಡಿದು ನೋಡಿ "ಮಂಟಪದ ಮಾಳಗಿತನಕ ಅದ ಹುಲ್ಲಿನ ರಾಶಿ. ಎರಡು ಹಕ್ಕಿ ಅಡಗಿರಲಿಕ್ಕೆ ಸ್ಥಳಾನೂ ಇಲ್ಲ ಅಲ್ಲಿ," ಎಂದನು.