ಪುಟ:ಕ್ರಾಂತಿ ಕಲ್ಯಾಣ.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೨

ಕ್ರಾಂತಿಕಲ್ಯಾಣ

"ಯಾಕಿಲ್ಲ ಅಣ್ಣ? ಅವರು ಅಲ್ಲೇ ಅದಾರ. ನಾನು ಹತ್ತಿ ನೋಡ್ತೀನಿ," ಎಂದು ಮೊದಲಿನ ಭಟನು ಮುಂದಾದನು.

ಬೊಮ್ಮರಸನು ಕಂಪಿಸಿದನು. "ಇಷ್ಟು ದಿನಗಳ ಮೇಲೆ ಪುನಃ ಬಿಜ್ಜಳನ ಬಂದಿಯಾಗಿ ಕಟುಕನ ವಧಾಪೀಠದಲ್ಲಿ ಪಶುವಿನಂತೆ ಪ್ರಾಣ ಬಿಡಬೇಕೆ ನಾನು?" ಎಂದು ಮನದಲ್ಲಿ ಪರಿತಪಿಸಿದನು.

ಭಟನು ಗಾಡಿಯ ಚಕ್ರದ ಮೇಲೆ ಹತ್ತಿ ಮಂಟಪದ ಗೋಡೆಯ ಸಹಾಯದಿಂದ ಹುಲ್ಲಿನ ರಾಶಿಯ ಮೇಲೇರಲು ಹವಣಿಸಿದನು. ಇನ್ನೇನು ಅವನು ತುದಿಯನ್ನು ಮುಟ್ಟಬೇಕು, ಅಷ್ಟರಲ್ಲಿ ಹುಲ್ಲಿನ ನಡುವೆ ಮನೆ ಮಾಡಿಕೊಂಡಿದ್ದ ಒಂದು ಹೆಣ್ಣು ಕೋಳಿ ಗಟ್ಟಿಯಾಗಿ ಕೂಗುತ್ತ ಹೊರಗೆ ಬಂದಿತು. ಅದು ಹಾರಿದ ರಭಸಕ್ಕೆ ರೆಕ್ಕೆಗಳು ಮುಖಕ್ಕೆ ಬಡಿದು ಭಟನು ಆಯತಪ್ಪಿ ಕೆಳಗೆ ಬಿದ್ದನು. ಕೂಗುತ್ತ ಓಣಿಯ ಕಡೆ ಓಡಿತು ಕೋಳಿ, ಭಟರು ಗೊಳ್ಳೆಂದು ನಕ್ಕರು.

"ಮುಗೀತಾ ನಿನ್ನ ಹಾರಾಟ," ಎಂದು ನಾಯಕನು ಹಾಸ್ಯ ಮಾಡಿದನು.

"ತುಸು ಹೊತ್ತಿಗೆ ಮೊದಲು ಮನಸರು ಹುಲ್ಲಮೇಲೆ ಹತ್ತಿದ ಕೋಳಿ ಹಾಂಗೇ ಕೂತಿರೂದು ಸಾಧ್ಯಾನ ಹೇಳರಪ್ಪ! ರಾಶೀಮೇಲೆ ಯಾರೂ ಇಲ್ಲ ಅನ್ನೋದನ್ನ ನಾವು ಇದರಿಂದಾದ್ರೂ ತಿಳೀಬೋದು," ಎಂದು ಮತ್ತೊಬ್ಬನು ತರ್ಕವಾಡಿದನು.

ಕೊನೆಗವರು, "ಇದು ನಿನ್ನ ಹೆಡ್ಡತನ, ನೆರಳನ್ನ ಮನಸರು ಅಂತ ತಿಳಕೊಂಡು ನಮಗೀಸೊಂದು ತೊಂದರೆ ಕೊಟ್ಟೆ!" ಎಂದು ಕಾವಲಿದ್ದ ಭಟನನ್ನು ಮೂದಲಿಸಿ ಅಲ್ಲಿಂದ ಸರಿದರು.

ಅಪರಾಧಿಗಳ ಪರಿಶೋಧನೆಗೆ ಧರ್ಮಾಧಿಕರಣದ ವಿಶೇಷಾಜ್ಞೆಯಿಲ್ಲದೆ ಮಠ ಮಂದಿರಗಳನ್ನು ಪ್ರವೇಶಿಸಬಾರದೆಂಬ ನಿಬಂಧನೆ ಆಗ ಅನುಷ್ಠಾನದಲ್ಲಿದ್ದುದರಿಂದ ಮಠದ ಬಾಗಿಲು ತೆಗೆಸಿ ಒಳಗೆ ಹುಡುಕುವ ಧೈರ್ಯ ಅವರಿಗೆ ಉಂಟಾಗಲಿಲ್ಲ. ಭಟರು ಓಣಿಯ ತಿರುವನ್ನು ಮುಟ್ಟಿ ಪಂಜಿನ ಬೆಳಕು ಮರೆಯಾದಾಗ ಬೊಮ್ಮರಸನು, "ಶಿವನು ಬದುಕಿಸಿದನು, ಬ್ರಹ್ಮಶಿವ," ಎಂದು ಕೈಮುಗಿದನು. ಎದ್ದು ಕುಳಿತುಕೊಳ್ಳುವಷ್ಟು ಸ್ಥಳವಿರಲಿಲ್ಲ ಹುಲ್ಲುರಾಶಿಯ ಮೇಲೆ.

ತುಸುಹೊತ್ತಿನ ಮೇಲೆ ಬ್ರಹ್ಮಶಿವನು, "ನಾವು ಬಂದಾಗ ಎಲ್ಲಿಯೋ ಅಡಗಿದ್ದ ಕೋಳಿ, ಭಟನ ಮೇಲೆ ಹಾರಿಬಂದದ್ದು ಹೇಗೆ?" ಎಂದನು.

"ಅದನ್ನೇ ನಾವು ಶಿವನ ಕರುಣೆ, ದೈವಲೀಲೆ ಎಂದು ಕರೆಯುವುದು."

"ನನಗೆ ಆ ಮಾತುಗಳಲ್ಲಿ ನಂಬಿಕೆಯಿಲ್ಲ, ಬೊಮ್ಮರಸರೆ. ನಾವು ಎಚ್ಚರದಿಂದ