ಪುಟ:ಕ್ರಾಂತಿ ಕಲ್ಯಾಣ.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ

೬೫

ಬಗೆಗೆ ತಾನು ಯೋಚಿಸಿದ್ದನ್ನು ಸಂಕೋಚವಿಲ್ಲದೆ ಧೈರ್ಯವಾಗಿ ಹೇಳಿದನು:

"ಇದುವರೆಗೆ ನೀವು ಉಜ್ಜಯಿನಿಯ ಶ್ರೀಮಂತ ವರ್ತಕರಾಗಿದ್ದೀರಿ. ನಾನು ನಿಮ್ಮ ಕರಣಿಕನಾಗಿದ್ದೆ. ವೃತ್ತಿಗೆ ತಕ್ಕಂತೆ ಬ್ರಹ್ಮರಾಜಸೇಟ್, ಶಿವಗಣ ಭಂಢಾರಿ ಎಂದು ಹೆಸರಿಟ್ಟುಕೊಂಡಿದ್ದೆವು. ಬಿಜ್ಜಳನ ಭಟರು ನಾವು ನಿಜವಾಗಿ ಆ ಹೆಸರಿನ ಹರದರೆಂದೇ ತಿಳಿದಿರಬಹುದು. ಅಥವಾ ನಮ್ಮ ನಿಜವಾದ ಹೆಸರು ಪೂರ್ವೋತ್ತರಗಳು ಅವರಿಗೆ ತಿಳಿದಿರಬಹುದು. ಅದೇನೇ ಇರಲಿ, ನಾಳಿನಿಂದ ಆ ಹೆಸರುಗಳು ಉಪಯೋಗವಿಲ್ಲ. ಋತು ಬದಲಾವಣೆಯಾದಂತೆ ಹೆಸರು ಬದಲಾಗಬೇಕು. ಉಡಿಗೆ ತೊಡಿಗೆಗಳು ಮಾರ್ಪಡಬೇಕು."

ಕತ್ತಲಲ್ಲಿ ಬೊಮ್ಮರಸನ ಮೊಗ ಮಿದುನಗೆಯಿಂದ ಅರಳಿತು. "ನಿಡುಗಲ್ಲು ದುರ್ಗದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ನನ್ನನ್ನು ಕರೆತಂದು ಚಾಲುಕ್ಯ ರಾಣಿಯ ಪ್ರತಿನಿಧಿಯಾಗಿ ಮಾಡಿದೆ. ಉತ್ತರಾಪಥದ ಹರದನ ವೇಷ ಹಾಕಿಸಿದೆ. ಈಗ ಮತ್ತಾವ ಹೆಸರಿಟ್ಟು ಬೇರೇನು ವೇಷ ಹಾಕಿಸುವೆಯೋ ಹಾಕಿಸು. ನಾನು ಎಲ್ಲಕ್ಕೂ ಸಿದ್ಧನಾಗಿದ್ದೇನೆ,” ಎಂದನು.

"ಈ ಸಾರಿಯ ನಮ್ಮ ವೇಷ ತೊಡಕಿನದಲ್ಲ, ಬೊಮ್ಮರಸರೆ. ನೀವು ಬ್ರಹೇಂದ್ರ ಶಿವಯೋಗಿ, ನಾನು ನಿಮ್ಮ ಅಂತೇವಾಸಿ ಹರೀಶ ರುದ್ರ, ಹೆಸರುಗಳು ಚೆನ್ನಾಗಿವೆಯಲ್ಲವೆ? ನಾಳೆ ಅದಕ್ಕೆ ತಕ್ಕ ವೇಷಭೂಷಣಗಳನ್ನು ಹೊಂಚಿಕೊಳ್ಳಬೇಕು."

"ಸದಾಚಾರಿ ಮಠದ ಸ್ವಾಮಿಗಳು ನಮ್ಮ ಕಥೆಯನ್ನು ನಂಬಿ ಆಶ್ರಯ ಕೊಟ್ಟರಲ್ಲವೆ ಆ ಮಾತು? ಒಂದು ವೇಳೆ ಅವರು ಸಂದೇಹದಿಂದ ನಮ್ಮನ್ನು ರಕ್ಷಕ ಭಟರಿಗೊಪ್ಪಿಸಿದರೆ?"

"ಶರಣಧರ್ಮದಲ್ಲಿ ನಿನ್ನ ಶ್ರದ್ಧೆ ಅದ್ಭುತವಾದದ್ದು, ಬ್ರಹ್ಮಶಿವ. ಆದರೂ ನೀನು....” ಬೊಮ್ಮರಸನು ಮಾತು ಮುಗಿಸಲಿಲ್ಲ.

ಬ್ರಹ್ಮಶಿವನು ಮೃದುವಾಗಿ ನಕ್ಕು ಹೇಳಿದನು: "ಹೌದು ಬೊಮ್ಮರಸರೆ, ನಾನು ಎರಡು ಸಾರಿ ಮತಾಂತರವಾದವನು. ಈಗ ನನಗನಿಸುತ್ತದೆ, ಅದೊಂದು ವಿವೇಕಶೂನ್ಯ ಡೊಂಬರಾಟವೆಂದು. ಜಗತ್ತಿನ ಜಂಜಡದಲ್ಲಿ ಸಿಲುಕಿ ಹುಳುವಿನಂತೆ ಬದುಕಿ ಸಾಯುವವರು ಯಾವ ಧರ್ಮದಲ್ಲಿದ್ದರೂ ಒಂದೇ. ಮೋಕ್ಷಾರ್ಥಿಯಾದವನಿಗೆ ಎಲ್ಲಾ ಧರ್ಮಗಳೂ ಸಮಾನ."

ಬೊಮ್ಮರಸನಿಗೆ ಆಶ್ಚರ್ಯವಾಯಿತು. "ನಿನಗೆ ಜ್ಞಾನೋದಯವಾದದ್ದು ಯಾವಾಗ, ಪಂಡಿತ?” ಎಂದು ಕೇಳಿದನು.

"ಹುಲ್ಲರಾಶಿಯಿಂದ ಕೋಳಿ ಹಾರಿಬಂದ ವಿಚಾರವಾಗಿ ನಿಮ್ಮ ವಿವೇಕದ