ಪುಟ:ಕ್ರಾಂತಿ ಕಲ್ಯಾಣ.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೮

ಕ್ರಾಂತಿಕಲ್ಯಾಣ

"ಇವರಿಗೆ ಮಠದ ಹಿಂಭಾಗದ ಅತಿಥಿಶಾಲೆಯಲ್ಲಿ ಸ್ಥಳ ಮಾಡಿಕೊಡು. ಉಣ್ಣುವುದಾದರೆ ಅಲ್ಲಿಯೇ ಊಟ ಕಳುಹಿಸುವಂತೆ ತಮ್ಮಡಿಗೆ ಹೇಳು. ಇಲ್ಲವೆ ಅಡಿಗೆಗೆ ಬೇಕಾದ ಸರಂಜಾಮುಗಳನ್ನು ಕೊಡು. ಇವರು ಇಲ್ಲಿರುವ ವಿಚಾರ ಯಾರಿಗೂ ತಿಳಿಯಬಾರದು ಜೋಕೆ!" ಎಂದು ಸ್ವಾಮಿಗಳು ಅಪ್ಪಣೆ ಮಾಡಿದರು.

ಸಮಸ್ಯೆ ಇಷ್ಟು ಸುಲಭವಾಗಿ ಪರಿಹಾರವಾಗುವುದೆಂದು ಬೊಮ್ಮರಸನು ಭಾವಿಸಿರಲಿಲ್ಲ. ಕಾರ್ಯಕರ್ತನ ಹಿಂದೆ ಹೋಗುತ್ತಿದ್ದಂತೆ ಮೆಚ್ಚಿಗೆಯಿಂದ ಅವನು ಮೃದುವಾಗಿ ಬ್ರಹ್ಮಶಿವನ ಬೆನ್ನು ತಟ್ಟಿದನು.

ಮದ್ಯದ ಅಮಲಿಳಿದು ಭಟರು ನಿದ್ರೆಯಿಂದೆದ್ದಾಗ ಬೆಳಗಿನ ಮೊದಲ ಪ್ರಹರ ಮುಗಿಯುತ್ತ ಬಂದಿತ್ತು. ಪಾಂಥನಿವಾಸದ ಉಪಾಹಾರ ಘಟ್ಟಿಸಿ, ಬಂಧಿಸಲೆಳಸಿದ್ದ ಪ್ರವಾಸಿಗಳ ಸಾಮಾನು ಸರಂಜಾಮುಗಳನ್ನು ಗಾಡಿಯಲ್ಲಿ ತುಂಬಿಕೊಂಡು ಅವರು ಧರ್ಮಾಧಿಕರಣಕ್ಕೆ ಹೋದರು. ಪಾಂಥನಿವಾಸದ ಕಾರ್ಯಕರ್ತನಿಗೆ ಅವರನ್ನು ತಡೆಯುವ ಧೈರ್ಯವಿರಲಿಲ್ಲ. ಬೊಮ್ಮರಸನ ಗಾಡಿ ಮತ್ತು ಎತ್ತು ಮಾತ್ರ ಅಲ್ಲಿಯೇ ಉಳಿಯಿತು. ಸಂಗಡ ಬಂದಿದ್ದ ಆಳು ಭಟರನ್ನು ಕಂಡಾಗಲೇ ಪರಾರಿಯಾಗಿದ್ದ.

ಆ ದಿನ ಮಧ್ಯಾಹ್ನ ತಮ್ಮಡಿ ತಂದುಕೊಟ್ಟ ಊಟದ ತಟ್ಟೆಗಳನ್ನು ಬರಿದು ಮಾಡಿ ಬ್ರಹ್ಮಶಿವ ಬೊಮ್ಮರಸರು ಅತಿಥಿಶಾಲೆಯ ಕೊಠಡಿಯಲ್ಲಿ ಕುಳಿತು ಮೆಲ್ಲನೆ ಮಾತಾಡುತ್ತಿದ್ದರು.

"ಈಗ ನಾನು ಪೇಟೆಯ ಕಡೆಗೆ ಹೋಗಿ ಬರುವೆ, ಬೊಮ್ಮರಸರೆ. ಏನಾದರೂ ಹಣವಿದ್ದರೆ ಕೊಡಿರಿ" ಬ್ರಹ್ಮಶಿವನೆಂದನು.

"ಹಣವೇಕೆ? ಪೇಟೆಯಲ್ಲೇನು ಕೆಲಸ?"
"ನಮಗೆ ಬೇಕಾದ ಉಡಿಗೆ ತೊಡಿಗೆಗಳನ್ನು ಕೊಂಡುಕೊಳ್ಳಬೇಡವೆ?"
"ನಿಜ. ನಡೆ, ನಾನೂ ಸಂಗಡ ಬರುತ್ತೇನೆ."

"ನೀವು ಬಂದರೆ ಅಪಾಯವಿದೆ, ಬೊಮ್ಮರಸರೆ. ನಿಮ್ಮನ್ನು ನೋಡಿದವರು ಬ್ರಹ್ಮರಾಜ ಸೇಟರೆಂದು ಗುರುತಿಸಬಹುದು. ಭಟರು ನಮ್ಮನ್ನು ಇನ್ನೂ ಹುಡುಕುತ್ತಿರಬೇಕು!"

"ನೀನು ಹೋಗುವುದರಲ್ಲಿ ಅಪಾಯವಿಲ್ಲವೆ?"

"ಕಲ್ಯಾಣದಲ್ಲಿ ನನ್ನಂಥವರು ಹತ್ತು ಸಾವಿರ ಜನರಿದ್ದಾರೆ. ಹೊಯ್ಸಳ ಮಾದರಿಯಲ್ಲಿ ಧೋತ್ರ ಉಟ್ಟು ತಲೆಗೆ ಪಾಗು ಸುತ್ತಿಕೊಂಡರೆ ನನ್ನನ್ನು ಗುರುತಿಸಲು ನಿಮಗೂ ಕಷ್ಟವಾಗಬಹುದು."