ಪುಟ:ಕ್ರಾಂತಿ ಕಲ್ಯಾಣ.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ

೬೯

ಬೊಮ್ಮರಸನು ನಡುವಿಗೆ ಕಟ್ಟಿದ್ದ ಚೀಲವನ್ನು ಬಿಚ್ಚಿ ಅದರಲ್ಲಿದ್ದ ಚಿನ್ನದ ನಾಣ್ಯಗಳನ್ನು ಕೆಳಗೆ ಸುರಿದು, "ನಿನಗೆ ಬೇಕಾದಷ್ಟು ತೆಗೆದುಕೋ," ಎಂದನು.

ಬ್ರಹ್ಮಶಿವನು ಹತ್ತು ವರಹಗಳನ್ನು ತೆಗೆದುಕೊಂಡು ಉಡುಗೆಯನ್ನು ಸರಿ ಕಂಡಂತೆ ಬದಲಾಯಿಸಿಕೊಂಡು, "ನಾನು ಕತ್ತಲಾದ ಮೇಲೆ ಹಿಂತಿರುಗುತ್ತೇನೆ. ಅಲ್ಲಿಯವರೆಗೆ ನೀವು ಬಾಗಿಲು ಹಾಕಿಕೊಂಡು ನಿದ್ರೆ ಮಾಡಿದರೆ ಒಳ್ಳೆಯದು. ಮಠದ ಜನರಿಗೂ ನಿಮ್ಮ ಪರಿಚಯವಿಲ್ಲದಂತೆ ನೋಡಿಕೊಳ್ಳಬೇಕು," ಎಂದು ಹೇಳಿ ಹೊರಗೆ ಹೋದನು.

ಈ ಮಧ್ಯಾಹ್ನದ ಮೇಲೆ ಮಠಕ್ಕೆ ಬಂದು ಹೋಗುವವರ ಸಂಖ್ಯೆ ಹೆಚ್ಚಿಗಿರುತ್ತಿದ್ದುದರಿಂದ ಅವನನ್ನು ಯಾರೂ ಗಮನಿಸಲಿಲ್ಲ. ಪಾಂಥನಿವಾಸದಲ್ಲಿದ್ದ ಅಗ್ಗಳನೇನಾದನು? ನಮ್ಮ ವಸ್ತುವಾಹನಗಳ ಗತಿಯೇನು? ಎಂಬ ಚಿಂತೆ ಅವನ ಮನದಲ್ಲಿ ಕುದಿಯುತ್ತಿತ್ತು. ಆದರೆ ಆ ಕಡೆ ತಿರುಗಿ ನೋಡುವ ಧೈರ್ಯವೂ ಇರಲಿಲ್ಲ. ಜನರೊಡನೆ ಬೆರೆತು ತ್ರಿಪುರಾಂತಕ ಕೆರೆಗೆ ಹೋಗುವ ಮಾರ್ಗದಲ್ಲಿ ಕೊಂಚ ದೂರ ಹೋಗಿ ಅಲ್ಲಿಂದ ನಗರದ ಮಧ್ಯಭಾಗಕ್ಕೆ ಹೋಗುವ ದಾರಿ ಹಿಡಿದನು.

ಕಲ್ಯಾಣದ ಮುಖ್ಯ ರಾಜಬೀದಿಯ ಹತ್ತಿರ ಜನನಿಬಿಡವಾದ ಒಂದು ಸಣ್ಣ ಓಣಿಯಲ್ಲಿ ಬಹುರೂಪಿ ಉದ್ದಾನಯ್ಯನ ಮನೆ. ದೊಡ್ಡಾಟದಲ್ಲಿ ಅವನ ಸೈಂಧವ ಮತ್ತು ಪರಶುರಾಮ ಪಾತ್ರಗಳು ಆಗ ಜನಪ್ರಿಯವಾಗಿದ್ದುವು. ಅಭಿನಯದಿಂದ ಸಾಕಾದಷ್ಟು ವರಮಾನವಿಲ್ಲದೆ ಅವನು ನಾಟ್ಯತಂಡಗಳಿಗೆ ಬೇಕಾಗುವ ಉಡಿಗೆ ತೊಡಿಗೆಗಳನ್ನು ಸಿದ್ಧಪಡಿಸಿ ಮಾರುವ ಉಪವೃತ್ತಿಯನ್ನು ನಡೆಸುತ್ತಿದ್ದನು.

ಆ ದಿನ ಅವನು ಅಪರಾಹ್ನದ ನಿದ್ರೆಯಿಂದೆದ್ದು ತಾಂಬೂಲ ಮೆಲ್ಲುತ್ತ ಮನೆಯಲ್ಲಿ ಗದ್ದಿಗೆಯ ಮೇಲೆ ಕುಳಿತಿದ್ದಂತೆ ಬ್ರಹ್ಮಶಿವನು ಅಲ್ಲಿಗೆ ಬಂದನು.

"ಓ! ಬ್ರಹಪ್ಪನೋರು! ಈಸು ದಿನವೂ ಕಾಣಲಿಲ್ಲ. ಎಲ್ಲಿಗೆ ಹೋಗಿದ್ದಿರಣ್ಣ?" ಎಂದು ಅವನು ಬ್ರಹ್ಮಶಿವನನ್ನು ಸ್ವಾಗತಿಸಿದನು.

ವ್ಯರ್ಥ ಸಂಭಾಷಣೆಯಲ್ಲಿ ಹೊತ್ತು ಕಳೆಯುವ ಇಷ್ಟವಿಲ್ಲದೆ ಬ್ರಹ್ಮಶಿವನು "ಗೋಕರ್ಣದ ಜಾತ್ರೇಲಿ ನಾಕು ನಾಟಕ ಆಡಿಸಿದೆ ಉದ್ದಾನಪ್ಪನೋರ. ಎರಡು ಕಾಸೂ ಸಿಕ್ಕಿತು. ನಾನೇ ಒಂದು ತಂಡ ಕಟ್ಟಬೇಕು ಅಂತ ಯೋಚಿಸಿದೆ. ನಿಮ್ಮಿಂದ ಒಂದಿಷ್ಟು ಸಾಮಾನು ಬೇಕಾಗಿದ್ದುವು," ಎಂದನು.

"ಕಿರೀಟ, ಭುಜಕೀರ್ತಿ, ಜರಿ, ಅಂಗರೇಕುಗಳು ಎಲ್ಲ ತಯಾರೈತಿ, ಬ್ರಹಪ್ಪ. ನಿಮಗೆ ಬೇಕಾದ್ದನ್ನು ಸಲೀಸು ಬೆಲೆಗೆ ಕೊಡುತ್ತೇನೆ," ಎಂದು ಉದ್ದಾನಯ್ಯ ವಾಣಿಜ್ಯದ ಮೆರಗು ಮಾತಾಡಿದನು.