ಪುಟ:ಕ್ರಾಂತಿ ಕಲ್ಯಾಣ.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ

೭೧

ಪಡೆದಂತಿದೆ," ಎಂದು ನಗೆಯಾಡಿ ಬೊಮ್ಮರಸನನ್ನು ಎಚ್ಚರಗೊಳಿಸಿದನು. ಊಟ ಮುಗಿದ ಮೇಲೆ ರಾತ್ರಿ ಬಹಳ ಹೊತ್ತು ಅವರು ಮಾತಾಡುತ್ತಿದ್ದು ಆಮೇಲೆ ನಿದ್ದೆ ಹೋದರು.

***

ಬಸವಣ್ಣನವರು ನಿರ್ವಾಸಿತರಾಗಿ ಮಹಮನೆಯನ್ನು ಬಿಟ್ಟು ಹೋದ ನಾಲ್ಕನೆಯ ದಿನ ಅಂದು. ಬಿರುಗಾಳಿಗೆ ಸಿಕ್ಕ ಉಪವನದ ತರುಲತೆಗಳಂತಾಗಿತ್ತು ಅಲ್ಲಿಯ ಶರಣ ಶರಣೆಯರ ಸ್ಥಿತಿ. ಕಣ್ಣೀರನ್ನು ನೆಲಕ್ಕುರುಳಿಸದೆ ಬಸವಣ್ಣನವರನ್ನು ಬೀಳ್ಕೊಟ್ಟಿದ್ದ ನಾಗಲಾಂಬೆ ನೀಲಲೋಚನೆಯರು, ಮೂರು ದಿನಗಳಿಂದ ಪೂಜಾ ನಂತರ ನೈವೇದ್ಯಕ್ಕಿಟ್ಟ ಒಂದೊಂದು ಬಟ್ಟಲು ಹಾಲು ಕುಡಿದು ಜೀವ ಧರಿಸಿಕೊಂಡಿದ್ದರು.

ಇಂದು ನಿರ್ವಾಸಿತರ ಸಂಗಡ ಹೋಗಿದ್ದ ಶರಣನೊಬ್ಬನು ಹಿಂದಿರುಗಿ, "ಈಗ ಅವರು ಬಾಗೆವಾಡಿಯ ಹತ್ತಿರ ಹತ್ತಿರ ಹೋಗಿರಬೇಕು. ನಾಳೆ ನೇಸರು ಮುಳುಗುವ ಹೊತ್ತಿಗೆ ಸಂಗಮ ಸೇರುವರು. ಗಂಗಾಂಬಿಕೆಯರು ಎಂದಿನಂತೆ ಗೆಲುವಾಗಿದ್ದಾರೆ," ಎಂದು ಹೇಳಿದ ಮೇಲೆ ಬಾಲಕ ಸಂಗಮನ ಕಾಟ ತಡೆಯಲಾರದೆ ಅವರು ಪ್ರಸಾದ ತೆಗೆದುಕೊಂಡಿದ್ದರು.

ಬಸವಣ್ಣನವರನ್ನು ಬೀಳ್ಕೊಟ್ಟು ಮನೆಗೆ ಹಿಂದಿರುಗಿದ ಮಧುವರಸನು ಹಠಾತ್ತಾಗಿ ಅಸ್ವಸ್ಥನಾದನು. ನಾಲ್ಕು ದಿನಗಳಾದರೂ ಜ್ವರ ನಿಲ್ಲದಿರುವುದನ್ನು ಕಂಡು ಅವರ ಆಪ್ತ ಕಾರ್ಯದರ್ಶಿ ಆ ದಿನ ಪ್ರಾತಃಕಾಲ ಕೂರ್ಮದುರ್ಗಕ್ಕೆ ಲಾವಣ್ಯವತಿಯ ಬಳಿಗೆ ಅವಸರದ ದೂತನನ್ನು ಕಳುಹಿಸಿದ್ದನು. ಮಧುವರಸನನ್ನು ನೋಡಲು ಬಂದಿದ್ದ ಹರಳಯ್ಯ ಈ ಸುದ್ದಿ ಕೇಳಿದಾಗ ಮಗನು ಹಿಂದಿರುಗಬಹುದೆಂಬ ಆಸೆಯಿಂದ ಉತ್ಸಾಹಗೊಂಡಿದ್ದನು. ಬಸವಣ್ಣನವರ ನಿರ್ವಾಸನದಿಂದ ಆದ ಆಘಾತ ವ್ಯಾಧಿಗ್ರಸ್ಥರಾದ ಸಕಲೇಶ ಮಾದರಸರನ್ನು ತೀರ ದುರ್ಬಲರನ್ನಾಗಿ ಮಾಡಿತ್ತು. ಅವರ ಶುಶೂಷೆಗಾಗಿ ಯಾವಾಗಲೂ ಶರಣನೊಬ್ಬನು ಅವರ ಹತ್ತಿರ ಇರುತ್ತಿದ್ದನು. ಇನ್ನುಳಿದ ಶರಣರು ಶ್ರದ್ದಾಭಕ್ತಿ ವಿಶ್ವಾಸಗಳಲ್ಲಿ ಒಬ್ಬರಿಗೊಬ್ಬರು ಕಡಿಮೆಯಲ್ಲದಿದ್ದರೂ, ಮಾರ್ಗದರ್ಶನ ಮಾಡಬಲ್ಲ ನಾಯಕರಿಲ್ಲದೆ ಏನನ್ನು ಮಾಡಲೂ ಅಶಕ್ತರಾಗಿದ್ದರು. ಹೀಗಾಗಿ, ಮಹಮನೆ ಅನುಭವಮಂಟಪಗಳ ವ್ಯವಸ್ಥೆ ಮತ್ತು ದಿನಚರಿ ಕಾರ್ಯಗಳು ಮುಖ್ಯವಾಗಿ ಚೆನ್ನಬಸವಣ್ಣನವರ ಮತ್ತು ಮಾಚಿದೇವರ ಮೇಲೆ ಬಿದ್ದಿದ್ದವು. ಅನುಭವಮಂಟಪದ ವಿಚಾರಗೋಷ್ಠಿ ಪ್ರವಚನಗಳು ಎಂದಿನಂತೆ ಪ್ರತಿದಿನ