ಪುಟ:ಕ್ರಾಂತಿ ಕಲ್ಯಾಣ.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೨

ಕ್ರಾಂತಿಕಲ್ಯಾಣ

ನಡೆಯುತ್ತಿದ್ದವು. ಅದಕ್ಕಾಗಿ ಕಾರ್ಯಕ್ರಮವನ್ನು ನಿರ್ಧರಿಸುವುದು, ಭಾಷಣಗಳನ್ನು ರಚಿಸುವುದು, ವರದಿಗಳನ್ನು ಪರಿಷ್ಕರಿಸುವುದು, ಇವೇ ಮೊದಲಾದ ಕಾರ್ಯಗಳಲ್ಲಿ ಚೆನ್ನಬಸವಣ್ಣನವರ ಅರ್ಧದಿನ ಕಳೆಯುತ್ತಿತ್ತು. ಸರಸ್ವತೀ ಭಂಡಾರದ ಪುನರ್ವ್ಯವಸ್ಥೆಗೆ ಉಳಿದರ್ಧ ದಿನ ಮೀಸಲಾಗಿತ್ತು. ಆರು ವರ್ಷಗಳ ಪರಿಶ್ರಮದಿಂದ ಅಲ್ಲಿ ಸಂಗ್ರಹವಾಗಿದ್ದ ವೇದಶಾಸ್ತ್ರ ಪುರಾಣ ಆಗಮಗಳ ಹೊತ್ತಗೆಗಳು, ಪುರಾತನರ ವಚನ ಸಂಗ್ರಹಗಳು, ನೂತನ ವಚನಕಾರರ ರಚನೆಗಳು, ಅನುಭವ ಮಂಟಪದ ಚರ್ಚಾಗೋಷ್ಠಿಯ ಅಂದಂದಿನ ವರದಿಗಳು, ನಾಲ್ಕಾರು ಕೋಣೆಗಳಲ್ಲಿ ಅಸ್ತವ್ಯಸ್ತವಾಗಿ ಬಿದ್ದಿದ್ದವು. ಅವುಗಳ ವರ್ಗೀಕರಣದ ಕಾರ್ಯ ಓಲೆ ಶಾಂತಯ್ಯನವರಿಂದಾಗಲಿ, ಅವರ ನಾಲ್ಕುಮಂದಿ ಸಹಾಯಕರಿಂದಾಗಲಿ ನಡೆಯುವುದಿಲ್ಲವೆಂದು ತಿಳಿದು ಚೆನ್ನಬಸವಣ್ಣನವರು ಎರಡು ತಿಂಗಳ ಮೊದಲು ಆ ಕಾರ್ಯವನ್ನು ತಾವೇ ಪ್ರಾರಂಭಿಸಿದ್ದರು. ಈಗ ಅದನ್ನು ಅರ್ಧದಲ್ಲಿ ನಿಲ್ಲಿಸುವುದು ಅವರಿಗಿಷ್ಟವಿರಲಿಲ್ಲ.

ಬಸವಣ್ಣನವರ ನಿರ್ವಾಸನದ ಸುದ್ದಿ ಕೇಳಿ ಕಳವಳಗೊಂಡ ಸಮೀಪದ ಗ್ರಾಮಗಳ ಶರಣರು ಪ್ರತಿದಿನ ತಂಡ ತಂಡವಾಗಿ ಮಹಮನೆಗೆ ಬಂದುಹೋಗುತ್ತಿದ್ದರು. ಅವರ ವಸತಿ ದಾಸೋಹಗಳನ್ನು ನೋಡಿಕೊಳ್ಳಲು ನಾಲ್ಕು ಮಂದಿ ಕಾರ್ಯಕರ್ತರಿದ್ದರೂ ತಂಡದ ನಾಯಕರೊಡನೆ ಮಾತುಕತೆ, ಕಾರ್ಯಕ್ರಮಗಳನ್ನು ಕುರಿತ ನಿರ್ದೇಶನ, ಈ ಕೆಲಸಗಳು ಮಾಚಿದೇವರ ಮೇಲೆ ಬಿದ್ದಿದ್ದವು. ವಾರ್ಧಿಕ್ಯದಲ್ಲಿಯೂ ತರುಣರಂತೆ ಉತ್ಸಾಹಶೀಲರೂ, ವ್ಯವಹಾರ ಕುಶಲರೂ ಆಗಿದ್ದ ಮಾಚಿದೇವರು ಈ ಕಾರ್ಯಗಳನ್ನು ದಕ್ಷತೆಯಿಂದ ನಿರ್ವಹಿಸುತ್ತಿದ್ದರು.

ಎರಡು ಮೂರು ಗಾವುದಗಳ ದೂರ ಪ್ರದೇಶಗಳಿಂದ ಶರಣರು ಬರುವುದು ಆ ದಿನ ಆರಂಭವಾಗಿತ್ತು. ಪರಭಣಿ, ಸೋಲ್ಲಾಪುರ, ಭೂಸನೂರು, ಜೀವರಗಿ, ಚಿತ್ತಾಪುರ, ಈ ಕಡೆಗಳಿಂದ ಶರಣರು ಬಂದಿದ್ದರು. ಮಹಮನೆಯ ಅಂಗಳದಲ್ಲಿ ಅವರೊಡನೆ ಮಾತಾಡುತ್ತಿದ್ದ ಮಾಚಿದೇವರು, ತುಸು ದೂರದಲ್ಲಿ ಅಂದೇ ಬಂದ ಶರಣರಿಬ್ಬರು ಪ್ರತ್ಯೇಕವಾಗಿ ನಿಂತಿರುವುದನ್ನು ಕಂಡರು. ಅವರಲ್ಲಿ ಹಿರಿಯ ವ್ಯಕ್ತಿಯ ನೀಳವಾದ ಕಪನಿ, ಗಡ್ಡ ಮೀಸೆ ಜಟೆಗಳು, ಕೈಗಳಲ್ಲಿ ಹಿಡಿದಿದ್ದ ಕಮಂಡಲು ಯೋಗ ದಂಡಗಳು, ಪುರಾಣಗಳಲ್ಲಿ ವರ್ಣಿಸಲ್ಪಟ್ಟ ವಶಿಷ್ಠ ವಿಶ್ವಾಮಿತ್ರರನ್ನು ನೆನಪಿಗೆ ತರುತ್ತಿದ್ದವು. ಆ ಜಂಗಮನ ಹಿಂದೆ ಚೀವರಗಳ ಗಂಟು ಸಿಕ್ಕಿಸಿದ ದಂಡವನ್ನು ಹೆಗಲೇರಿಸಿ ನಿಂತಿದ್ದ ತರುಣನು ಆ ಜಂಗಮನ ಶಿಷ್ಯನೆಂದು ಸ್ಪಷ್ಟವಾಗಿ ಕಾಣುತ್ತಿತ್ತು.

ಅವರ ಉಡಿಗೆ ತೊಡಿಗೆಗಳು ಉಳಿದ ಜಂಗಮರ ಉಡಿಗೆಗಳಿಗಿಂತ ಸ್ವಲ್ಪ