ಪುಟ:ಕ್ರಾಂತಿ ಕಲ್ಯಾಣ.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ

೭೩

ವಿಶಿಷ್ಟವಾಗಿ ಕಂಡರೂ ಅಸಹಜವಾಗಿರಲಿಲ್ಲ. ಪ್ರದರ್ಶನಕ್ಕಾಗಿಯೋ ವೈಯಕ್ತಿಕ ಅಭಿರುಚಿಯಿಂದಲೋ ವಿಚಿತ್ರ ಉಡಿಗೆ ತೊಡಿಗೆಗಳನ್ನು ಧರಿಸುತ್ತಿದ್ದ ಮಠಪತಿಗಳು ಆಗಲೂ ಇದ್ದರು.

ಮಾಚಿದೇವರು ತಾವೇ ಅವರಿದ್ದಲ್ಲಿಗೆ ಹೋಗಿ ವಂದಿಸಿ, "ಅಯ್ಯನವರು ಎಲ್ಲಿಂದ ಬಂದದ್ದು?" ಎಂದರು.

ಹಿರಿಯ ಜಂಗಮನು ಪ್ರತಿವಂದನೆ ಮಾಡಿದನು, ಮಾತಾಡಲಿಲ್ಲ. ಮಾಚಿದೇವರ ಪ್ರಶಾಂತ ಗಂಭೀರ ವ್ಯಕ್ತಿತ್ವದಿಂದ ಪ್ರಭಾವಿತನಾದಂತೆ ಕಂಡ ತರುಣ ಜಂಗಮನು ಕೈಯೆತ್ತಿ ನಮಸ್ಕಾರ ಮಾಡಿ ಬೆದರಿದ ನಮ್ರಕಂಠದಿಂದ, "ಇವರು ಬ್ರಹ್ಮೇಂದ್ರ ಶಿವಯೋಗಿಗಳು. ನಾನು ಅವರ ಅಂತೇವಾಸಿ ಹರೀಶರುದ್ರ. ಸೂರ್ಯಾಸ್ತದಿಂದ ಮರುದಿನ ಮಧ್ಯಾಹ್ನದವರೆಗೆ ಮೌನವಾಗಿರುವುದು ನಮ್ಮ ಗುರುಗಳ ನೇಮ. ಅವರ ಪರವಾಗಿ ನಾನು ಉತ್ತರ ಕೊಡುತ್ತಿದ್ದೇನೆ" ಎಂದು ಬಿನ್ನವಿಸಿಕೊಂಡನು.

ಮಾಚಿದೇವರು ಕುತೂಹಲದಿಂದ ಹರೀಶನ ಮುಖ ನೋಡಿದರು. "ನನ್ನ ಪ್ರಶ್ನೆಗೆ ನೀನು ಉತ್ತರ ಕೊಟ್ಟಿಲ್ಲ" ಎಂದು ಗಜರಿದಂತಿತ್ತು ಆ ದೃಷ್ಟಿ.

ಹರೀಶ ಪುನಃ ಹೇಳಿದನು: "ನಾವು ಶ್ರೀಶೈಲ ಯಾತ್ರೆಯಿಂದ ಹಿಂದಿರುಗುತ್ತಿದ್ದೆವು, ಅಯ್ಯನವರೆ. ದಾರಿಯಲ್ಲಿ ಬಸವೇಶ ದಂಡನಾಥರ ನಿರ್ವಾಸನದ ಸುದ್ದಿ ಕೇಳಿ ಕಲ್ಯಾಣಕ್ಕೆ ಬಂದೆವು."

"ನಿಮಗೆ ಆ ಸುದ್ದಿ ತಿಳಿದದ್ದು ಯಾವಾಗ?"
"ಎರಡು ದಿನಗಳ ಹಿಂದೆ, ನಾವು ಸುರಪುರದಲ್ಲಿದ್ದಾಗ."

"ಎರಡು ದಿನಗಳಲ್ಲಿ ಸುರಪುರದಿಂದ ಕಲ್ಯಾಣಕ್ಕೆ! ಅಶ್ವಾರೋಹಿ ಅವಸರದ ರಾಜಭಟರಿಗೂ ಅದು ಸಾಧ್ಯವಲ್ಲ. ಶ್ರೀಶೈಲ ಮಲ್ಲಿಕಾರ್ಜುನನು ನಿಮಗಾಗಿ ವಿಮಾನಗಳನ್ನು ಕಳುಹಿಸಿರಬೇಕು!"

ಮಾಚಿದೇವರ ನುಡಿಗಳ ಹಿಂದಿದ್ದ ತೀವ್ರ ವಿಡಂಬನೆಯನ್ನು ಕಂಡು ಬ್ರಹ್ಮಶಿವನು ಬೆದರಿದನು. ಈ ಚಾಣಾಕ್ಷ ವೃದ್ದ ಜಂಗಮನೆದುರು ತನ್ನ ಚತುರತೆ ವಿಫಲವಾಯಿತೆಂದು ಮರುಗಿದನು.

ಬೊಮ್ಮರಸನ ಮುಖ ಬೆವರಿತು. ಕೈಕಾಲುಗಳು ಕಂಪಿಸಿದವು. "ಈ ನಿಷ್ಠುರ ಜಂಗಮನು ನಮ್ಮನ್ನು ರಾಜಭಟರಿಗೊಪ್ಪಿಸಿದರೆ ಕರುಣೆಯಿಂದ ಹಾಗೆ ಮಾಡದಿದ್ದರೂ ಎಲ್ಲರೆದುರಿಗೆ ಗಡ್ಡ ಮೀಸೆ ಜಟೆಗಳನ್ನು ಕೀಳಿಸಿ, ಅಪಮಾನ ಮಾಡಿ ಕಳುಹಿಸುವುದು ಖಂಡಿತ. ಮತಾಂತರ ಹೊಂದಿದ ಈ ಭ್ರಷ್ಟನ ಮಾತು ಕೇಳಿ ನಾನು ಕೆಟ್ಟೆ" ಎಂದು ಭಾವಿಸಿ ಬ್ರಹ್ಮಶಿವನನ್ನು ನೂರು ಸಾರಿ ಶಪಿಸಿದನು.