ಪುಟ:ಕ್ರಾಂತಿ ಕಲ್ಯಾಣ.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ

೭೫

ಶೀವಯೋಗಿಗಳಿಗೆ ಸಲ್ಲುವ ಕಾಯಕ ಅದು. ಇನ್ನು ಆರು ದಿನವಿದೆ ವಿಷಯ ಸಂಗ್ರಹಕ್ಕೆ"

ಬೊಮ್ಮರಸನು ಪುನಃ ತಲೆಯಾಡಿಸಿದನು.

ಮಾಚಿದೇವರು ಬ್ರಹ್ಮಶಿವನ ಕಡೆ ತಿರುಗಿ, "ಇನ್ನು ನಿಮ್ಮ ಕಾಯಕ ಹರೀಶರುದ್ರ, ಪ್ರತಿದಿನ ನಗರಕ್ಕೆ ಹೋಗಿ ಮಹಮನೆಗೆ ಬೇಕಾಗುವ ಕಾಯಿ-ಸೊಪ್ಪುಗಳನ್ನು ತರುವ ಕಾಯಕ ನಿಮ್ಮಿಂದಾಗುವುದೇ?" ಎಂದರು.

"ನನಗೆ ನಗರದ ಪರಿಚಯವಿಲ್ಲ. ಮಹಮನೆಯ ಶೌಚಕೂಪಗಳನ್ನು ಸ್ವಚ್ಛಗೊಳಿಸಬೇಕಾಗುವುದು."

ವೃದ್ದನ ಮುಖದಲ್ಲಿ ಉಪಹಾಸದ ಗೆರೆ ಮೂಡಿದುದನ್ನು ಕಂಡು ಬ್ರಹ್ಮಶಿವನು, "ಅಯ್ಯನವರು ಬಟ್ಟೆ ಒಗೆಯುವ ಕಾಯಕ ಮಾಡುವಾಗ ನಾನು ಶೌಚ ಕೂಪಗಳನ್ನೇಕೆ ಸ್ವಚ್ಚಗೊಳಿಸಬಾರದು?" ಎಂದನು.

ಮಾಚಿದೇವರು ನಸುನಕ್ಕು, "ತಪ್ಪು ಮಾಡಿದವರಿಗೆ ಆ ಕಾಯಕ. ಸದ್ಯದಲ್ಲಿ ನೀವು ಸ್ನಾನಗೃಹವನ್ನು ಸ್ವಚ್ಚಗೊಳಿಸಿ ನೀರು ತುಂಬುವವನಿಗೆ ಸಹಾಯ ಮಾಡಿರಿ," ಎಂದರು.

ಬ್ರಹ್ಮಶಿವ ಬೊಮ್ಮರಸರ ಮಹಮನೆಯ ವಾಸ ಈ ರೀತಿ ನಾಟಕೀಯವಾಗಿ ಪ್ರಾರಂಭವಾಯಿತು. ಸ್ಪಷ್ಟವಾದಿಗಳೂ ನಿರ್ಭೀತರೂ ಆಗಿ ಸ್ಥಿತಪ್ರಜ್ಞರೆಂದು ಕರೆಸಿಕೊಳ್ಳುತ್ತಿದ್ದ ಮಾಚಿದೇವರು ತಿಳಿದೋ ತಿಳಿಯದೆಯೋ ಈ ವಂಚನೆಗೆ ಅನುಮೋದನೆಯಿತ್ತರು. ಅವರು ಹೀಗೇಕೆ ಮಾಡಿದರೆಂಬುದು ಅವರ ಇಷ್ಟದೈವ 'ಕಲಿದೇವರ ದೇವ'ರಿಗೂ ತಿಳಿದಿತ್ತೋ ಇಲ್ಲವೋ ನಾವರಿಯೆವು.

***

ಬೊಮ್ಮರಸನು ಜಂಗಮನಲ್ಲದಿದ್ದರೂ ಜನ್ಮತಃ ಶಿವಭಕ್ತನಾಗಿದ್ದನು. ಎರಡು ಸಾರಿ ಮತಾಂತರವಾಗಿದ್ದ ಬ್ರಹ್ಮಶಿವನಿಗೆ ಶರಣರ ಪೂಜಾನುಷ್ಠಾನಗಳು ತಿಳಿದಿದ್ದವು. ಮೌನವ್ರತದ ಬಗೆಗೆ ಬ್ರಹ್ಮಶಿವನ ಪ್ರಚಾರ ಬೊಮ್ಮರಸನಿಗೆ ಸಹಾಯಕವಾಯಿತು. ಪ್ರತಿನಿತ್ಯ ಪೂಜಾಪ್ರಸಾದಗಳು ಎಲ್ಲ ಜಂಗಮರೊಟ್ಟಿಗೆ ನಡೆಯುತ್ತಿದ್ದರೂ ಯಾರೂ ಬೊಮ್ಮರಸನನ್ನು ಮಾತಾಡಿಸುತ್ತಿರಲಿಲ್ಲ.

ಅನುಭವಮಂಟಪದ ಸರಸ್ವತೀ ಭಂಡಾರ ಮತ್ತು ತನ್ನ ಕುಶಾಗ್ರ ಬುದ್ಧಿ, ಇವೆರಡರ ಸಹಾಯದಿಂದ ಬ್ರಹ್ಮಶಿವನು ಆರು ದಿನಗಳು ಮುಗಿಯುವುದರೊಳಗೆ ಎರಡು ಪ್ರವಚನಗಳನ್ನು ಸಿದ್ಧಗೊಳಿಸಿದನು. ಅವುಗಳನ್ನು ಚೆನ್ನಾಗಿ ಅಭ್ಯಾಸಮಾಡಿ ಬೊಮ್ಮರಸನು ಅನುಭವಮಂಟಪದಲ್ಲಿ ತನಗೆ ಗೊತ್ತಾಗಿದ್ದ ಕಾಯಕವನ್ನು ದಕ್ಷತೆಯಿಂದ