ಪುಟ:ಕ್ರಾಂತಿ ಕಲ್ಯಾಣ.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ

೭೭

"ಶಂಕಿತರಾದವರು ಹಗ್ಗವನ್ನು ಕಂಡು ಹಾವೆಂದು ಹೆದರುತ್ತಾರೆ. ತಂಗಿಯ ದುಗುಡಕ್ಕೆ ಕಾರಣನಾದೆನೆಂಬ ಪಶ್ಚಾತ್ತಾಪ ಭೇಟಿಗೆ ಕಾರಣವಾಗಿರಬಹುದು. ನಾಳೆ ಬಂದಾಗ ಎಲ್ಲವೂ ಸ್ಪಷ್ಟವಾಗುವುದು. ಈಗಿನಿಂದ ಆ ವಿಚಾರ ನಾವೇಕೆ ಯೋಚಿಸಬೇಕು," ಎಂದು ಸಮಾಧಾನ ಹೇಳಿದ್ದಳು.

ಪೂರ್ವಾಹ್ನ ಮೊದಲ ಪ್ರಹರ ಮುಗಿಯುತ್ತಿದ್ದಂತೆ ಮುಚ್ಚಿದ ಎರಡು ಮೇನೆಗಳು ಮಹಮನೆಯ ಮಹಾದ್ವಾರವನ್ನು ದಾಟಿ ಅಂಗಳಕ್ಕೆ ಬಂದುನಿಂತವು. ಸಂಗಡಿದ್ದ ಎಂಟು ಮಂದಿ ಅಶ್ವಾರೋಹಿ ರಕ್ಷಕದಳ ಮಹಾದ್ವಾರದಲ್ಲಿ ಕಾವಲು ನಿಂತಿತು.

ಬಿಜ್ಜಳರಾಯನೂ ವೃದ್ಧಮಂತ್ರಿ ಮಂಚಣನೂ ಮೇನೆಗಳಿಂದಿಳಿದರು. ಚೆನ್ನಬಸವಣ್ಣನವರು ಅವರನ್ನು ಸ್ವಾಗತಿಸಿ ಸಿದ್ಧವಾಗಿದ್ದ ಸಭಾಂಗಣಕ್ಕೆ ಬಿಜಯ ಮಾಡಿಸಿ ಭದ್ರಾಸನಗಳಲ್ಲಿ ಕುಳ್ಳಿರಿಸಿದರು.

"ಮಂಚಣಮಂತ್ರಿಗಳು ನಮ್ಮ ನಿಮ್ಮ ಎರಡು ಮನೆಗಳಿಗೂ ಬಹಳ ಬೇಕಾದವರು, ಚೆನ್ನಬಸವಣ್ಣವವರೆ. ಅವರನ್ನು ನಮ್ಮ ಬಂಧುವೆಂದೇ ಸಂಗಡ ಕರೆತಂದಿದ್ದೇನೆ," ಎಂದು ಬಜ್ಜಳನು ಹೇಳಿದಾಗ, ಚೆನ್ನಬಸವಣ್ಣನವರು ಕೈಮುಗಿದು, "ಮಹಮನೆಯು ನಿಮ್ಮ ಮನೆ. ನಿಮ್ಮ ಇಷ್ಟಮಿತ್ರರಿಗೆ ಇಲ್ಲಿ ಯಾವಾಗಲೂ ಸುಸ್ವಾಗತವಿದೆ. ಮೇಲಾಗಿ ಮಂಚಣನವರು ನಮಗೂ ಹಿತಚಿಂತಕರು," ಎಂದು ಬಿನ್ನವಿಸಿಕೊಂಡರು.

ಅರ್ಘ್ಯಪಾದ್ಯಗಳ ಪ್ರಾಚೀನ ಪದ್ಧತಿ ಆಗಿನ ಶ್ರೀಮಂತ ಸಾಮಂತ ಸಮಾಜದಲ್ಲಿ ಇನ್ನೂ ಅಭ್ಯಾಸದಲ್ಲಿತ್ತು. ಆದರೆ ಬಸವಣ್ಣನವರು ಅದೊಂದು ವ್ಯರ್ಥವಿಡಂಬನೆಯೆಂದು ತಿಳಿದು ಜಂಗಮರ ಹೊರತಾಗಿ ಮತ್ತಾವ ಅತಿಥಿಯ,—ಅವನು ಎಷ್ಟೇ ಸನ್ಮಾನ್ಯನಾಗಿರಲಿ-ಪಾದಗಳನ್ನು ತೊಳೆಯಬಾರದೆಂಬ ಸಂಪ್ರದಾಯವನ್ನು ಶರಣರಲ್ಲಿ ಆಚರಣೆಗೆ ತಂದರು.

ಅದರಂತೆ ಬಿಳಿಯ ಸಮವಸ್ತ್ರಗಳನ್ನು ಧರಿಸಿದ್ದ ಇಬ್ಬರು ಬಾಲಕರು ಗಂಧ ಫಲಪುಷ್ಟ ತಾಂಬೂಲಗಳಿಂದ ತುಂಬಿದ ಹರಿವಾಣಗಳನ್ನು ತಂದು ಅತಿಥಿಗಳ ಮುಂದಿಟ್ಟು, ಗಂಧೋದಕವನ್ನು ಅವರ ಮೇಲೆ ಸಿಂಪಡಿಸಿ ಹೋಗುತ್ತಿದ್ದಂತೆ ನೀಲಲೋಚನೆ ನಾಗಲಾಂಬೆಯರು ಸಂಗಮನಾಥನನ್ನು ಕರೆದುಕೊಂಡು ಅಲ್ಲಿಗೆ ಬಂದರು.

ನೀಲಲೋಚನೆ ಬಿಜ್ಜಳನ ಕಾಲುಗಳನ್ನು ಮುಟ್ಟಿ ನಮಸ್ಕಾರಮಾಡಿ, ಸಂಗಮನಾಥನನ್ನು ಕಾಲುಗಳ ಮೇಲೆ ಹಾಕಿ, "ತಂದೆಯ ನಿರ್ವಾಸನದಿಂದ ಅರಕ್ಷಿತನಾದ