ಪುಟ:ಕ್ರಾಂತಿ ಕಲ್ಯಾಣ.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೭೮

ಕ್ರಾಂತಿ ಕಲ್ಯಾಣ

ಈ ಬಾಲಕನಿಗೆ ನೀವೇ ರಕ್ಷಕರು, ಅಣ್ಣ" ಎಂದು ನುಡಿದಳು.

ಅವಳ ನೊಂದ ನುಡಿ ಬಿಜ್ಜಳನ ಕಿವಿಗಳಲ್ಲಿ ಮಿಡಿದು ಅಂತರಂಗದಲ್ಲಿ ಕೋಪ ಕಳವಳಗಳ ಅಲೆಗಳನ್ನೆಬ್ಬಿಸಿತು.

ತನ್ನ ನ್ಯಾಯ ತೀರ್ಪಿನ ಬಗೆಗೆ ನೀಲಲೋಚನೆಯ ಅಸಮಾಧಾನ ತನ್ನನ್ನು ಕಂಡೊಡನೆ ಸಿಡಿದೇಳುವುದೆಂದು ಬಿಜ್ಜಳನು ಅರಿತಿದ್ದನು. ಆ ಸಂದರ್ಭದಲ್ಲಿ ರಕ್ಷಣೆಗಾಗಿಯೇ ಕಲಚೂರ್ಯ ವಂಶಕ್ಕೆ ದೂರದ ಬಂಧುವೂ ಕುಲವೃದ್ದನೂ ಆಗಿದ್ದ ಮಂಚಣ ನಾಯಕನನ್ನು ಸಂಗಡ ಕರೆತಂದಿದ್ದನು. ಆದರೂ ನೀಲಲೋಚನೆಯ ಮಾತಿನ ಹಿಂದಿದ್ದ ಕಟು ವಿಮರ್ಶೆಯನ್ನು ಕಂಡು ಬಿಜ್ಜಳನಿಗೆ ಅಸಮಾಧಾನವಾಯಿತು. ಸಂಯತ ಕೋಪದಿಂದ ಹಣೇ ಸುಕ್ಕುಗಟ್ಟಿತು. ತುಟಿಗಳು ಅದುರಿದವು.

ಇಂಗಿತವರಿತು ಮಂಚಣನಾಯಕನು, "ಇದೇನು ಹೀಗೆ ನುಡಿಯುತ್ತಿರುವೆ ನೀಲಾಂಬಿಕೆ? ಮನೆಗೆ ಬಂದ ಅಣ್ಣನನ್ನು ಸ್ವಾಗತಿಸುವ ಹೊಸ ವಿಧಾನವೋ ಇದು?” ಎಂದು ನಯವಾಗಿ ಎಚ್ಚರಿಸಿದನು. ನೀಲಲೋಚನೆ ಬೆದರಲಿಲ್ಲ. "ಧರ್ಮಾಧಿಕರಣದ ಆ ಅಧರ್ಮ ವ್ಯವಹಾರದಲ್ಲಿ ಭಾಗವಹಿಸಿದ್ದ ಮಂತ್ರಿಗಳಲ್ಲಿ ನೀವೂ ಒಬ್ಬರಲ್ಲವೆ, ಮಂಚಣನಾಯಕರೆ? ಅದಕ್ಕೆ ಸರಿಯಾಗಿ ಮಾತಾಡುತ್ತಿದ್ದೀರಿ,” ಎಂದಳು.

ಆಗ ನಾಗಲಾಂಬೆ ನಡುವೆ ಬಂದು, "ಇದೇನು ನೀಲಾ? ಈ ರೀತಿ ಸಮಯ ಸಂದರ್ಭಗಳನ್ನು ಮರೆತು ನುಡಿಯುವುದು ಶರಣರಿಗೆ ಸಲ್ಲ, ಪ್ರಭುಗಳ ಆಜ್ಞೆಯ ಧರ್ಮಾಧರ್ಮ ವಿವೇಚನೆಯನ್ನು ಲೋಕಕ್ಕೆ ಬಿಟ್ಟು ನಿರ್ಲಿಪ್ತನಾಗಿ ಬಸವಣ್ಣ ಸಂಗಮಕ್ಕೆ ಹೋದನು. ಅವನ ಅರ್ಧಾಂಗಿನಿಯಾದ ನೀನು ಅದಕ್ಕೆ ಸರಿಯಾಗಿ ನಡೆದುಕೊಳ್ಳಬೇಡವೆ?” ಎಂದು ಗದರಿ ನುಡಿದು,

ಬಿಜ್ಜಳನ ಕಡೆ ತಿರುಗಿ ಕೈಮುಗಿದು, "ನೀಲಲೋಚನೆಯ ಪರವಾಗಿ ನಾನು ಪ್ರಭುಗಳ ಮತ್ತು ಮಂಚಣನಾಯಕರ ಕ್ಷಮೆ ಬೇಡುತ್ತೇನೆ. ಪತಿಯನ್ನಗಲಿ ನೀಲಲೋಚನೆ ತುಂಬ ಕಳವಳಗೊಂಡಿದ್ದಾಳೆ. ಅವಳನ್ನು ಸಮಾಧಾನಗೊಳಿಸುವುದು ನಮಗೂ ಕಷ್ಟವಾಗಿದೆ, ಎಂದು ಬಿನ್ನವಿಸಿಕೊಂಡಳು.

"ಅಣ್ಣ ತಂಗಿಯರಲ್ಲಿ ಉಂಟಾಗುವ ಕ್ಷಣಿಕವಾದ ಮನಃಕ್ಷೇಶದಲ್ಲಿ ಮಧ್ಯೆ ಬರುವ ಇಚ್ಛೆ ನನಗಿಲ್ಲ. ಆದರೂ ಅದಕ್ಕಾಗಿ ಪ್ರಭುಗಳ ಕ್ಷಮೆ ಬೇಡುತ್ತೇನೆ,” ಎಂದರು ಚೆನ್ನಬಸವಣ್ಣನವರು.

ಈ ಮಾತುಗಳನ್ನು ನೀರವವಾಗಿ ನಿಂತು ಕೇಳುತ್ತಿದ್ದ ಬಾಲಕ ಸಂಗಮನಾಥನು, "ನೀನು ಹೇಳಿದಂತೆ ನಾನು ಅನಾಥನಲ್ಲ, ನೀಲಕ್ಕ. ಕೂಡಲ ಸಂಗಮದೇವನು