ಪುಟ:ಕ್ರಾಂತಿ ಕಲ್ಯಾಣ.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ

೭೯

ನಮ್ಮೆಲ್ಲರ ರಕ್ಷಕನು," ಎಂದು ಹೇಳಿ, ಬಿಜ್ಜಳನ ಕಡೆ ತಿರುಗಿ ಮಿದುನಗೆ ಬೀರಿ, "ಅಕ್ಕ ತಿಳಿಯದೆ ಹೇಳಿದರೆ ನೀವೇಕೆ ಕೋಪಿಸಬೇಕು, ಮಾವಯ್ಯ?" ಎಂದನು. ಬಿಜ್ಜಳರಾಯನ ಮುಖ ಅರಳಿತು. ಸಂಗಮನಾಥನನ್ನು ಬರಸೆಳೆದು ಮುದ್ದಿಟ್ಟು ತೊಡೆಯ ಮೇಲೆ ಕುಳ್ಳಿರಿಸಿಕೊಂಡು, "ತಂದೆಗೆ ಸರಿಯಾದ ಮಗನು ನೀನು ಸಂಗಮನಾಥ. ಒಂದೇ ಮಾತಲ್ಲಿ ಅಣ್ಣ ತಂಗಿಯರಿಬ್ಬರ ಬಾಯನ್ನೂ ಮುಚ್ಚಿಸಿದೆ," ಎಂದನು.

ಬಳಿಕ ಅವನು ನೀಲಲೋಚನೆಯ ಕಡೆ ತಿರುಗಿ, "ಕಣ್ಣು ಕಿವಿಗಳೆರಡನ್ನೂ ಕಳೆದುಕೊಂಡ ಅಂಧಬಧಿರ ರಾಕ್ಷಸನಂತೆ ಈ ರಾಜಕೀಯ. ಅದರ ವಿನಾಶಕಾರಿ ಪ್ರಭಾವಕ್ಕೆ ಸಿಕ್ಕವರು ಬಂಧು ಬಳಗ, ಇಷ್ಟಮಿತ್ರ, ನೀತಿಧರ್ಮ ಎಲ್ಲವನ್ನೂ, ಎಲ್ಲರನ್ನೂ ಮರೆಯಬೇಕಾಗುತ್ತದೆ. ಚಾಲುಕ್ಯ ಸರ್ವಾಧಿಕಾರಿಯಾಗಿ ಸಂಪ್ರದಾಯ ಮೂಢರಾದ ಪ್ರಜಾವರ್ಗದ ರಂಜನೆಗಾಗಿ ನಾನು ಬಸವಣ್ಣನವರ ನಿರ್ವಾಸನಕ್ಕೆ ಆಜ್ಞೆ ಮಾಡಬೇಕಾಯಿತು. ಅದರಿಂದ ನನಗಾದ ಮನಃಕ್ಲೇಶವನ್ನು ನನ್ನ ಅಂತರ್ಯಾಮಿಯೊಬ್ಬನು ಬಲ್ಲನು.... ಈ ರಾಜಿಕದ ಮುಳ್ಳುಹಾಸಿಗೆಯನ್ನು ತ್ಯಜಿಸಲು ನಾನು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇನೆ, ತಂಗಿ. ಅದಕ್ಕೆ ಇನ್ನೆರಡು ತಿಂಗಳು ಗಡುವಿದೆ. ಮುಂದಿನ ಮಾಘದಲ್ಲಿ ಕುಮಾರ ಸೋಮೇಶ್ವರನ ಯುವರಾಜ ಪಟ್ಟಾಭಿಷೇಕ ಪೂರೈಸಿ, ರಾಜ್ಯಭಾರ ಸಮರ್ಪಣೆ ಮಾಡಿದರೆ ನನ್ನ ಹೊಣೆ ಮುಗಿಯುವುದು. ಅನಂತರ ಬಸವಣ್ಣನವರೊಡನೆ ಕೂಡಲಸಂಗಮದಲ್ಲಿ, ಗುರುಚರಣದಡಿಯಲ್ಲಿ ಮೋಕ್ಷಾರ್ಥಿಯಾಗಿ ವ್ರತಾನುಷ್ಠಾನಗಳಿಂದ ನನ್ನ ಕೊನೆಯ ದಿನಗಳನ್ನು ಕಳೆಯಲು ನಿರ್ಧರಿಸಿದ್ದೇನೆ. ಆಮೇಲೆ ಬಿಜ್ಜಳನ ಗುಣಾವಗುಣಗಳನ್ನು ನಿರ್ಣಯಿಸಲಿ ಈ ಲೋಕ," ಎಂದನು.

ನುಡಿಯುತ್ತಿದ್ದಂತೆ ಬಿಜ್ಜಳನ ಕಂಠ ಗಂಭೀರವಾಯಿತು, ಗದ್ಗದಿತವಾಯಿತು. ತುಂಬಿ ಹರಿದ ನದಿ ತನ್ನ ಪೂರ್ವಸ್ಥಿತಿಯನ್ನು ಪುನಃ ಪಡೆದು ಶಾಂತವಾದಂತೆ ಬಿಜ್ಜಳನು ಮೌನವಾಗಿ ಕುಳಿತನು.

ಆಗ ಅಲ್ಲಿದ್ದವರ ಮೇಲೆ ಬಿಜ್ಜಳನ ನುಡಿಗಳಿಂದಾದ ಪ್ರತಿಕ್ರಿಯೆ ವಿಭಿನ್ನವೂ ವಿಚಿತ್ರವೂ ಆಗಿದ್ದಿತು.

ಸರಳ ಹೃದಯರೂ, ಪ್ರಾಪಂಚಿಕ ವ್ಯವಹಾರಗಳ ಅನುಭವವಿಲ್ಲದವರೂ ಆದ ಚೆನ್ನಬಸವಣ್ಣನವರು, "ಈ ಪರಿವರ್ತನೆ ನಿಜವಾದರೆ ಮಾವನವರ ನಿರ್ವಾಸನ ವಿಫಲವಾಗಲಿಲ್ಲ," ಎಂದುಕೊಂಡರು.

ಜಗತ್ತನ್ನು ಅರಿತವಳೂ ಸರ್ವಜನ ಹಿತಾಕಾಂಕ್ಷಿಣಿಯೂ ಆದ ನಾಗಲಾಂಬೆ,