ಪುಟ:ಕ್ರಾಂತಿ ಕಲ್ಯಾಣ.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಿರಿಮನೆಯ ಕತ್ತಲೆಗೆ ಗುರುಮನೆಯ ದೀಪ

೮೧

ಆವೇಶದಿಂದ ಹಾಡುತ್ತಿದ್ದಾರೆ," -ಎಂದು ಉತ್ತರ ಕೊಟ್ಟಳು ನಾಗಲಾಂಬೆ.

ಬಿಜ್ಜಳನು ತುಸು ಹೊತ್ತು ಮೌನವಾಗಿ ಗೀತವನ್ನು ಕೇಳುತ್ತಿದ್ದು ಬಳಿಕ,

"ಸರಿಯಾಗಿ ಹೇಳಿದ್ದಾರೆ ಬಸವಣ್ಣನವರು, -ಭಕ್ತಿಯೆಂಬ ಭಾಂಡಕ್ಕೆ ಜಂಗಮವೇ ಸುಂಕಿಗ. ನನ್ನ ರಾಜಿಕದ ಭಾಂಡ ತುಂಬಿ ಹರಿಯಿತು, ಆದರೆ ಸುಂಕ ತೆತ್ತಿಲ್ಲ ನಾನಿನ್ನೂ. ಈ ಸಾಲ ತೀರಿಸಿ, ಭಕ್ತಿಯ ಭಾಂಡವನ್ನು ತುಂಬುವುದು ನನ್ನ ಉದ್ದೇಶ. ಮಹಮನೆಯ ಜಂಗಮದಲ್ಲಿ ವಯಸ್ಸಿನಿಂದ ಕಿರಿಯರಾದರೂ ಜ್ಞಾನದಿಂದ ಹಿರಿಯರಾದ ನೀವಲ್ಲದೆ ಆ ಪುಣ್ಯ ಕಾರ್ಯದಲ್ಲಿ ನಮಗೆ ಮತ್ತಾರು ನೆರವಾಗಬಲ್ಲರು, ಚೆನ್ನಬಸವಣ್ಣನವರೆ?" ಎಂದನು.

ಚೆನ್ನಬಸವಣ್ಣನವರು ಕ್ಷಣಕಾಲ ಅಪ್ರತಿಭರಾದರು. ಈ ಮಾತುಗಳ ಉದ್ದೇಶವೇನು? ಅದಕ್ಕೆ ನಾನೇನು ಉತ್ತರ ಹೇಳುವುದು? ಎಂದು ಅವರು ಯೋಚಿಸುತ್ತಿದ್ದಂತೆ ಬಿಜ್ಜಳನು ಮುಂದುವರಿದು ಹೇಳಿದನು:

"ರಾಜಕೀಯವೆಂದರೆ ಸಲ್ಲದ ಕಳ್ಳನಾಣ್ಯ. ಅದನ್ನು ಸಲ್ಲುವಂತೆ ಮಾಡುವ ಪ್ರಯತ್ನದಲ್ಲಿ ನಾನು ಬಾಳೆಲ್ಲ ಕಳೆದಿದ್ದೇನೆ. ಮಂಚಣನಾಯಕರಂತಹ ಅನುಭವ ವೃದ್ದರು, ಮಧುವರಸರಂತಹ ವ್ಯವಹಾರ ವೃದ್ದರು, ಬಸವಣ್ಣನವರಂತಹ ಜ್ಞಾನ ವೃದ್ದರು, ಇವರೆಲ್ಲರನ್ನು ಮಂತ್ರಿಮಂಡಲದಲ್ಲಿ ಸೇರಿಸಿಕೊಂಡು, ಪರಂಪರಾಗತವಾಗಿ ಬಂದ ರಾಜಿಕದ ಕೊಳಕನ್ನು ತೊಳೆದು ಹಾಕುವುದು ನನ್ನ ಉದ್ದೇಶವಾಗಿತ್ತು. ಆದರೆ ದುರ್ದೈವದಿಂದ ಅದು ಇದುವರೆಗೆ ಫಲಿಸಿಲ್ಲ. ಬಸವಣ್ಣನವರು ಆರು ವರ್ಷಗಳ ಹಿಂದೆ ತಾವಾಗಿ ಮಂತ್ರಿಮಂಡಲದಿಂದ ನಿವೃತ್ತರಾದರು. ಈಗ ಮಧುವರಸರು ಅಸ್ವಸ್ಥತೆಯ ಕಾರಣದಿಂದ ನಿವೃತ್ತರಾಗಲೆಣಿಸಿದ್ದಾರೆ. ವೃದ್ದರಾದ ಮಂಚಣನವರಿಗೆ ವಿಶ್ರಾಂತಿ ಕೊಡುವುದು ಅನಿವಾರ್ಯವಾಗಿದೆ. ಇಷ್ಟೆಲ್ಲ ಅಂತರಾಯಗಳೂ ಎದುರಿಗೆ ನಿಲ್ಲುತ್ತಿದ್ದರೂ ನಾನು ಮಾತ್ರ ನನ್ನ ಚಿರಸಾಧನೆಯನ್ನು ಬಿಟ್ಟಿಲ್ಲ. ಚೆನ್ನಬಸವಣ್ಣನವರು ಸಚಿವರಾಗಲು ಒಪ್ಪುವುದಾದರೆ, ಚಾಲುಕ್ಯ ರಾಜ್ಯಕ್ಕೆ ಆದರ್ಶವಾಗಬಲ್ಲ, ನನ್ನ ಅನಂತರವೂ ಆಡಳಿತವನ್ನು ಅಭ್ಯುದಯ ಪಥದಲ್ಲಿ ನಡೆಸಬಲ್ಲ ಮಂತ್ರಿಮಂಡಲವನ್ನು ರಚಿಸಬೇಕೆಂಬ ನನ್ನ ಹಿರಿಯಾಸೆ ಈಗಲೂ ಜಾಗೃತವಾಗಿದೆ. ಅದನ್ನು ಚರಿತಾರ್ಥಗೊಳಿಸುವುದಕ್ಕಾಗಿಯೇ ನಾನಿಂದು ಇಲ್ಲಿಗೆ ಬಂದದ್ದು."

ಈ ಸಾರಿ ಚೆನ್ನಬಸವಣ್ಣನವರು ನಿಜವಾಗಿ ಅಪ್ರತಿಭರಾದರು. ಈ ಸಲಹೆಗೆ ಏನೆಂದು ಉತ್ತರ ಕೊಡಲಿ ಎಂಬುದು ಅವರ ನಿಶಿತ ಬುದ್ದಿಗೆ ತೋರದಾಯಿತು. ಕೆಲವು ಕ್ಷಣಗಳು ಮೌನವಾಗಿದ್ದು ಆಮೇಲೆ ಹೇಳಿದರು:

"ಪ್ರಭುಗಳು ನನ್ನನ್ನು ಬಾಲ್ಯದಿಂದ ಅರಿತಿದ್ದಾರೆ. ನನ್ನ