ಪುಟ:ಕ್ರಾಂತಿ ಕಲ್ಯಾಣ.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೨

ಕ್ರಾಂತಿ ಕಲ್ಯಾಣ

ಪರಮಾದರ್ಶವೇನೆಂಬುದು ಅವರಿಗೆ ತಿಳಿಯದಿಲ್ಲ. ಆದರೂ ಅದನ್ನು ಮತ್ತೊಮ್ಮೆ ಪ್ರಭುಗಳ ಗಮನಕ್ಕೆ ತರುವುದು ಅಗತ್ಯವೆನಿಸಿದೆ. ನಾನು ಬಳ್ಳಿಗಾವೆಯ ಕೋಡಿಯ ಮಠದಲ್ಲಿ ವಿದ್ಯಾರ್ಥಿಯಾಗಿದ್ದಾಗಲೆ ಒಂದು ನಿರ್ಧಾರಕ್ಕೆ ಬಂದೆ. ಜೀವಿತಕಾಲವೆಲ್ಲ ಬ್ರಹ್ಮಚಾರಿಯಾಗಿದ್ದು ಶರಣಧರ್ಮದ ಪ್ರಕಾರ ಸಂಸ್ಕಾರಗಳಿಗಾಗಿ ಜೀವನವನ್ನೇ ಮೀಸಲಾಗಿಸಬೇಕೆಂದು. ಅದಕ್ಕೆ ತಾಯಿಯ ಆಶೀರ್ವಾದ ದೊರಕಿತು. ಬಸವಣ್ಣನವರ ಒಪ್ಪಿಗೆ ದೊರೆಯಿತು. ಸ್ನಾತಕನಾಗಿ ಹಿಂದಿರುಗುತ್ತಲೆ ಅನುಭವಮಂಟಪದ ಕರಣಿಕನಾಗಿ, ಕಾರ್ಯದರ್ಶಿಯಾಗಿ, ವ್ಯವಸ್ಥಾಪಕನಾಗಿ ಆರು ವರ್ಷಗಳ ಕಾಲ ಕೆಲಸಮಾಡಿದ್ದೇನೆ. ಧಾರ್ಮಿಕ ವಿಚಾರಗಳ ಹೊರತಾಗಿ ಹೊರಗಿನ ವ್ಯವಹಾರಗಳ ಅನುಭವ ನನಗಿರುವುದಿಲ್ಲ, ರಾಜಕೀಯ ದೂರವಾಗಿಯೇ ಉಳಿಯಿತು. ಇಂತಹ ಅನನುಭವಿಯೂ, ವಯಸ್ಸಿನಲ್ಲಿ ಕಿರಿಯನೂ ಆದ ನಾನು ಚಾಳುಕ್ಯ ರಾಜ್ಯದ ಮಂತ್ರಿಮಂಡಲದಲ್ಲಿ ಸಚಿವನಾಗುವುದು ಅವ್ಯವಹಾರಿಕವಷ್ಟೇ ಅಲ್ಲ, ಹಾಸ್ಯಾಸ್ಪದ. ಪ್ರಭುಗಳು ಈ ಯೋಚನೆಗಳನ್ನು ಕೈಬಿಡಬೇಕಾಗಿ ಬೇಡುತ್ತೇನೆ."

ಬಿಜ್ಜಳನು ಯೋಚಿಸಿ ಹೇಳಿದನು: "ನಾನು ನಿಮ್ಮಿಂದ ಅಪೇಕ್ಷಿಸುವುದು ರಾಜಿಕದ ವ್ಯವಹಾರ ಚಾತುರ್ಯವನ್ನಲ್ಲ ಚೆನ್ನಬಸವಣ್ಣನವರೆ, ಧಾರ್ಮಿಕ ಮಾರ್ಗದರ್ಶನವನ್ನು. ಒಂದು ರೀತಿಯಲ್ಲಿ ಅದರ ಅಭಾವವೇ ಬಸವಣ್ಣನವರ ನಿರ್ವಾಸನಕ್ಕೆ ಕಾರಣವಾಯಿತು. ಪುನಃ ಆ ರೀತಿ ನಡೆಯದಂತೆ ಎಚ್ಚರ ವಹಿಸುವುದು ನನ್ನ ಕರ್ತವ್ಯ, ನೀವು ವಯಸ್ಸಿನಲ್ಲಿ ಕಿರಿಯರಾದರೂ ಜ್ಞಾನದಲ್ಲಿ ದೊಡ್ಡವರು. ಬಸವಣ್ಣನವರಂತಹ ಮೇಧಾವಿಗಳು, ಸಿದ್ಧರಾಮಣ್ಣನವರಂತಹ ಕರ್ಮಯೋಗಿಗಳು, ಪ್ರಭುದೇವರಂತಹ ತಪೋಧನರು, ಅನುಭವಮಂಟಪದಲ್ಲಿ ನಿಮ್ಮ ಗುಣಗಾನ ಮಾಡಿದರೆಂಬುದು ನನಗೆ ತಿಳಿದಿದೆ. ಇವರೆಲ್ಲರ ಪ್ರಶಂಸೆಗೆ ಪಾತ್ರರಾದ ನೀವು ನಮ್ಮ ಕಾಲದ ಯುಗಪುರುಷರೆಂದು ನಾನು ಭಾವಿಸಿದ್ದೇನೆ. ನಿಮ್ಮ ಇರುವಿಕೆಯಿಂದ ನಮ್ಮ ಮಂತ್ರಿಮಂಡಲ ಜನಪ್ರಿಯವಾಗುತ್ತದೆ. ಜನರ ಹಿತಾಸಕ್ತಿಗಳನ್ನು ಸಾಧಿಸಲು ಸಮರ್ಥವಾಗುತ್ತದೆ. ನಿಮ್ಮ ಅಪೂರ್ವ ಮೇಧಾಶಕ್ತಿಗೆ ಮಂತ್ರಿಪದವಿ ಹೊರೆಯೆನಿಸುವುದಿಲ್ಲ. ತಿಂಗಳಿಗೊಂದು ಸಾರಿಯೋ, ಎರಡು ಸಾರಿಯೋ ನಡೆಯುವ ಮಂತ್ರಿಮಂಡಲದ ಸಭೆಯಲ್ಲಿ ಒಂದು ಪ್ರಹರಕಾಲ ಭಾಗವಹಿಸಿದರೆ ನಿಮ್ಮ ಹೊಣೆ ಮುಗಿಯಿತು. ಉಳಿದ ದಿನಗಳಲ್ಲಿ ಅಗತ್ಯವಾದ ಶಾಸನ ನಿರೂಪಗಳು, ಧರ್ಮಾಧಿಕರಣದ ವರದಿಗಳು, ನಿಮಗೆ ಕಳುಹಿಸಲ್ಪಡುವುವು. ಅವಕಾಶ ಸಿಕ್ಕಾಗ ಅವುಗಳನ್ನು ಪರಿಶೀಲಿಸಿ ನಿಮ್ಮ ಅಭಿಪ್ರಾಯಗಳನ್ನು ಬರೆದು ಕಳುಹಿಸಬಹುದು. ಮಂಚಣ ನಾಯಕರು ಮಂತ್ರಿಮಂಡಲದಲ್ಲಿ ಪ್ರಧಾನರು. ಇನ್ನು ಕೆಲವು ವಾರಗಳಲ್ಲಿ