ಪುಟ:ಕ್ರಾಂತಿ ಕಲ್ಯಾಣ.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೪

ಕ್ರಾಂತಿ ಕಲ್ಯಾಣ

ಬಿಜ್ಜಳನು ಇಂಗಿತವರಿತು, "ನಿಮ್ಮ ಒಪ್ಪಿಗೆಯಿಲ್ಲದೆ ನೇಮಕದ ನಿರೂಪ ಪ್ರಕಟವಾಗುವುದಿಲ್ಲ. ಅದರಿಂದ ಬಾಧಕವೇನು?" ಎಂದು ಮುಗಿಸಿದನು.

ಚೆನ್ನಬಸವಣ್ಣನವರು ನಿರುಪಾಯರಾಗಿ, "ರಾಜಕೀಯ ವ್ಯವಹಾರಗಳ ಅನುಭವವಿಲ್ಲದ ನನ್ನನ್ನು ಪ್ರಭುಗಳು ಮಾತಿನ ಶೃಂಖಲೆಯಿಂದ ಬಂಧಿಸಲು ಯೋಚಿಸಿದಂತಿದೆ. ನಾಲ್ಕು ದಿನಗಳ ಗಡುವು ಮುಗಿದ ಮೇಲೆ ಯಾವುದಾದರೊಂದು ಕಾರಣದಿಂದ ನಾನು ಒಪ್ಪಿಗೆ ಕೊಡಲು ಅಸಮರ್ಥನಾದರೆ, ಪ್ರಭುಗಳು ಉದಾರ ಚಿತ್ತದಿಂದ ನನ್ನನ್ನು ಕ್ಷಮಿಸಬೇಕು," ಎಂದು ಬಿನ್ನವಿಸಿಕೊಂಡರು.

"ನೀವು ಎಲ್ಲ ವಿಧದಿಂದಲೂ ಸ್ವತಂತ್ರರು. ನಿಮ್ಮ ಸ್ವಾತಂತ್ರ್ಯಕ್ಕೆ ಆತಂಕ ತಂದೊಡ್ಡುವುದು ನನ್ನ ಉದ್ದೇಶವಲ್ಲ," ಎಂದು ಬಿಜ್ಜಳನು ಸಂಧಾನ ಮುಗಿಸಿದನು.

ಆ ದಿನವೇ ಚೆನ್ನಬಸವಣ್ಣನವರು ಅನುಭವಮಂಟಪದಲ್ಲಿ ಶರಣರ ಸಭೆ ಕರೆದು ಬಿಜ್ಜಳನ ಸಲಹೆಯನ್ನು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಸಕಲೇಶ ಮಾದರಸರು ಆ ಸಂದರ್ಭದಲ್ಲಿ ಹೇಳಿದ ಬೆಡಗಿನ ವಚನವಿದು:

ಸರೋವರದ ಮಂಡುಕನು ತಾವರೆಯ ನೆಳಲ ಸಾರಿದೆಡೆ,
ಪರಿಮಳವದಕೇ, ಅಯ್ಯ, ಮದಾಳಿಗಲ್ಲದೆ?
ಅರಿಯೆ ಬಾರದು, ಸಕಲೇಶ್ವರ ದೇವಾ! ನಿಮ್ಮ
ವೇದಿಸಿದ ವೇದ್ಯಂಗಲ್ಲದೆ.

ಸಲಹೆಯನ್ನು ಅನುಮೋದಿಸಿದ ಹಾಗೂ ವಿರೋಧಿಸಿದ ಶರಣರು ತಮತಮಗೆ ಅನುಕೂಲವಾಗಿ ವಚನವನ್ನು ಅರ್ಥವಿಸಿಕೊಂಡರು.

ಅನುಮೋದಿಸಿದವರು ಹೇಳಿದರು: "ಸರೋವರವೆಂದರೆ ಕಲ್ಯಾಣ, ಅದರಲ್ಲಿರುವ ಮಂಡುಕನೇ ಬಿಜ್ಜಳ. ಅನುಭವಮಂಟಪವೇ ತಾವರೆ, ಬಿಜ್ಜಳನು ಈಗ ಅನುಭವಮಂಟಪದ ಆಶ್ರಯ ಬಯಸಿದ್ದಾನೆ. ಆದರೆ ಭ್ರಮರಕ್ಕಲ್ಲದೆ ಮಂಡುಕಕ್ಕುಂಟೆ ತಾವರೆಯ ಪರಿಮಳ? ಸಕಲೇಶ್ವರದೇವನನ್ನು ಅರಿತವರು ಮಾತ್ರವೆ ಅನುಭವಮಂಟಪದ ಘನತೆ ವಿಸ್ತಾರಗಳನ್ನು ಅರಿಯಬಲ್ಲರು. ಅದು ಕಾರಣ ಚೆನ್ನಬಸವಣ್ಣನವರು ಮಂತ್ರಿಗಳಾಗಿ ಬಿಜ್ಜಳನಿಗೆ ಶರಣಧರ್ಮದ ಅರಿವನ್ನುಂಟುಮಾಡಿಕೊಡಲಿ. ಅದರಿಂದ ಶರಣರ ಹಿತಸಾಧನೆಯಾಗುವುದು, ಎಂದು.

"ಅನುಭವಮಂಟಪದ ಅನುಭಾವವೆಂಬ ಪರಿಮಳವನ್ನು ಅರಿತು ಆಘ್ರಾಣಿಸುವುದು ಶರಣರಿಗೆ ಮಾತ್ರ ಸಾಧ್ಯ. ಅದುಕಾರಣ ಶರಣಧರ್ಮದ ವಿರೋಧಿಯಾಗಿ ಬಸವಣ್ಣನವರ ನಿರ್ವಾಸನಕ್ಕೆ ಆಜ್ಞೆಮಾಡಿದ ಬಿಜ್ಜಳನ ಸಲಹೆ