ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೩೨

ವಿಕಿಸೋರ್ಸ್ದಿಂದ
(ಪುಟ:ಗೌರ್ಮೆಂಟ್ ಬ್ರಾಮ್ಮಣ.pdf/೧೩೨ ಇಂದ ಪುನರ್ನಿರ್ದೇಶಿತ)
ಈ ಪುಟವನ್ನು ಪ್ರಕಟಿಸಲಾಗಿದೆ

೧೧೬

ಗೌರ್ಮೆಂಟ್ ಬ್ರಾಹ್ಮಣ

ಮನೆಗೆ ಬಂದದ್ದು ನೋಡಿ ಎಲ್ಲರಿಗೂ ಆಶ್ಚರ್ಯ. ಅಲ್ಲಿ ನಡೆದ ವಿಷಯ ಅಪ್ಪ, ಅಜ್ಜಿ, ಅಜ್ಜ, ಅವ್ವ ಅವರೆದುರು ಹೇಳಿದನಂತೆ.

ಹಾಜರಾಗಲು ಹೋದಾಗ ಮುಖ್ಯ ಗುಮಾಸ್ತರು
"ಇಲ್ಲ ನೀನು ಬೇರೆ ಊರಿಗೆ ಹಾಕ್ಸಕೋ
ಇಲ್ಯಾದ್ರ ನಿನಗೆ ಸರಿ ಆಗೋದಿಲ್ಲ"
"ಇಲ್ರೀ ನಾನು ಸರಿಯಾಗಿ ಹೊಂದಿಕೊಂಡ ಹೋಗ್ತೀನಿ"

ಆಮೇಲೆ ಶಾಲೆಯಲ್ಲಿರುವ ಮಾಸ್ತರರೆಲ್ಲ ಸಭೆ ಸೇರಿ ಠರಾವ್ ಮಾಡಿ ಹೇಳಿದರಂತ

"ಇಲ್ಲ ಈ ಸಾಲ್ಯಗ ನೀ ಸೇರುದು ಸಾಧ್ಯ ಇಲ್ಲ"

"ಸರಕಾರದ ಪತ್ರ ತಂದಿದ್ರ, ಆ ಪತ್ರ ತಗೊಂಡು ಸರಕಾರದವಿಗೆ ಹೇಳು, ನಾನು ಅಲ್ಲಿ ನೌಕ್ರಿ ಮಾಡೋದಿಲ್ಲ ಅಂತ ಹೇಳಿ, ಬ್ಯಾರೆ ಕಡೆ ಬದ್ಲ ಮಾಡ್ಸಿಕೋ, ಇಲ್ಲಂದ್ರ ಮುಂದ ನೀನೇ ಉಣಬೇಕಾಗತದ......." ಸಾಲಿ ಬಿಡುತನಾ ನಿಂತೆ, ಏನೂ ಪ್ರಯೋಜನಾ ಆಗಲಿಲ್ಲ. "ಕುಂದ್ರು" ಅನ್ನೋ ಕರುಣೆ ಕೂಡಾ ತೋರಲಿಲ್ಲ ಎಂದು ನಡೆದದ್ದನೆಲ್ಲ ವಿವರಿಸಿ ಹೇಳಿದನಂತ. ಮತ್ತೆ ಏನೆಲ್ಲ ಮಾಡಿ ಬೇರಿ ಊರಿನ ಶಾಲೆಗೆ ಹಾಜರಾಗುವಂತೆ ವ್ಯವಸ್ಥೆ ಮಾಡಿಕೊಂಡು ಬಂದನಂತೆ.

ಅದೊಂದು ಹಳ್ಳಿ, ಊರಿಗೆ ಹತ್ತಿರವಾದುದೇ. ಅಲ್ಲಿ ಶಾಲೆ ಆರಂಭ ಆಗಿ, ಯಾವ ಮಾಸ್ತರೂ ಹೋಗಲಿಕ್ಕಾಗದೆ ಖಾಲಿ ಉಳಿದದ್ದು. ಆ ಶಾಲೆ ಹನುಮಂತ ದೇವರ ಗುಡಿಯಲ್ಲಿ ನಡೆಸುತ್ತಿದ್ದರಂತೆ! ಮಾಸ್ತರು ಇಲ್ಲದ ಗುಡಿ, ಗುಡಿಯೇ ಆಗಿತ್ತು. ಹೋಗಿ ಊರ ಗೌಡರಿಗೆ ಮನವಿ ಮಾಡಿಕೊಂಡಾಗ, ಸರಕಾರದ ಪತ್ರ ನೋಡಿ,

ನಿಮಗ್ಯಾಕ್ರಿ ಮಾಸ್ತರೇ ನೌಕ್ರಿ

ನಮ್ಮ ಹಳ್ಳಾಗ ಸಾಲಿನೇ ಇಲ್ಲ. ಮಕ್ಕಳೂ ಇಲ್ಲ ಅಂದಿದ್ದರಂತೆ! ಅಂತೂ ಹೇಗೋ ಪಾಠ ಮಾಡಲು ಅಲ್ಲಿ ಅನುಮತಿ ದೊರೆತರೂ ಕೆಲವೊಂದು ಕಡ್ಡಾಯದ ನಿಯಮಗಳನ್ನು ಹಾಕಿದ್ದರಂತೆ. (ಹೆಚ್ಚಿನ ವಿವರ ತಿಳಿಯದು)

ದೇವರ ಗುಡಿಯಲ್ಲಿ ಹೋಗುವ ಹಾಗಿಲ್ಲ
ಮರದ ಕೆಳಗೆ ಪಾಠಶಾಲೆ ಆರಂಭಿಸಬೇಕು

ಅಪ್ಪನ ನೌಕರಿ ಆರಂಭ ಆಯಿತು. ಶಾಲೆಗೆ ಮಕ್ಕಳೇ ಇಲ್ಲ! ಶಾಲೆಯಲ್ಲಿ ಮಾಸ್ತರನೂ ಅವನೇ, ಮುಖ್ಯೋಪಾಧ್ಯಾಯನೂ ಅವನೇ. ಕಸಗುಡಿಸುವ ಜವಾನನೂ ಅವನೇ, ಗಂಟೆ ಬಾರಿಸುವ ಸಿಪಾಯಿಯೂ ಅವನೇ, ಕೊನೆಗೆ ವಿದ್ಯಾರ್ಥಿಯೂ ಅವನೇ ಆಗಿದ್ದನಂತೆ! ಸುಮಾರು ಎರಡು ತಿಂಗಳ ಕಾಲ ಮಕ್ಕಳಿಲ್ಲದೆ, ಪಾಠವೂ ಇಲ್ಲದೆ ಹೋಯಿತಂತೆ. ಆದರೆ ಸಂಬಳ ಮಾತ್ರ ತಪ್ಪದೇ ಬರುತ್ತಿತ್ತಂತೆ.