ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೩೬

ವಿಕಿಸೋರ್ಸ್ದಿಂದ
(ಪುಟ:ಗೌರ್ಮೆಂಟ್ ಬ್ರಾಮ್ಮಣ.pdf/೧೩೬ ಇಂದ ಪುನರ್ನಿರ್ದೇಶಿತ)
ಈ ಪುಟವನ್ನು ಪ್ರಕಟಿಸಲಾಗಿದೆ

೧೨೦

ಗೌರ್ಮೆಂಟ್ ಬ್ರಾಹ್ಮಣ


ಮುಕ್ತಾಯದ ಮುನ್ನ..........

"ಗೌರ್ಮೆಂಟ್ ಬ್ರಾಹ್ಮಣ" ಎನ್ನುವ ಪದವನ್ನು ಯಾವ ಕಾರಣಕ್ಕಾಗಿ ಪ್ರಯೋಗಿಸುತ್ತಿದ್ದರು ಎನ್ನುವುದನ್ನು ಈ ಹಿಂದೆ ಒಂದೆಡೆ ಸಾಂದರ್ಭಿಕವಾಗಿ ಚರ್ಚಿಸಿದ್ದೇನೆ. ಗೌರ್ಮೆಂಟ್ ಬ್ರಾಹ್ಮಣ ಎಂದರೆ "ಅಸ್ಪ್ರಶ್ಯ" ಎಂದೇ ಅರ್ಥ. ಆದರೆ ಈ ಎರಡೂ ಶಬ್ದಗಳ ಹಿಂದಿರುವ ಧ್ವನಿ ಮಾತ್ರ ಬೇರೆ ಬೇರೆ. ಗೌರ್ಮೆಂಟ್ ಬ್ರಾಹ್ಮಣ ಎಂದು ಕೆಲವರು ವ್ಯಂಗ್ಯವಾಗಿ ಕರೆದಂತೆ "ದೇವರ ಮಕ್ಕಳು" ಎಂದು ಕರೆದದ್ದು ಇದೆ. ಜಾತಿ ಪತ್ರವನ್ನು ಕೊಡುವಾಗ ತಹಶಿಲ್ದಾರರ ಮುದ್ರೆ ಅದರ ಮೇಲೆ ಇರುತ್ತಿತ್ತು. ಅದು ವರ್ತುಳಾಕಾರ ಇರುವುದರಿಂದ "ಗುಂಡು ಸಿಕ್ಕಾ" ಎಂದೂ ಕರೆಯುತ್ತಿದ್ದರು. ಹರಿಜನ, ದಲಿತ, ಆದಿ ದ್ರಾವಿಡ ಹೀಗೆ ಒಂದೊಂದು ಶಬ್ದದ ಹಿಂದೆ ಒಂದೊಂದು ಬಗೆಯ ಧ್ವನಿಗಳಿವೆ. ಆ ಶಬ್ದಗಳಿಂದ ಕರೆದಾಗ ನಮ್ಮ ಎದೆಯಲ್ಲಿ ಒಂದೊಂದು ಬಗೆಯ ಆರೋಹಣ ಅವರೋಹಣದ ತಳಮಳ. ಮನುಷ್ಯನಿಗೆ ಸ್ವಾಭಿಮಾನ ಮೂಡಿದಾಗ ನಿಂದನೆಯ ಪದಗಳಿಗೂ ಎಂಥ ಬಲ ಬರುತ್ತದೆ ಎನ್ನುವುದಕ್ಕೆ "೭೦ರ" ದಶಕದಲ್ಲಿ ಆರಂಭವಾದ ಚಳವಳಿ ಸಾಕ್ಷಿಯಾಗುತ್ತದೆ.

ಈ ಸ್ವರೂಪದ ಬರವಣಿಗೆ ರೂಪುಗೊಳ್ಳಲು ಮುಖ್ಯವಾಗಿ ಎರಡು ಬಿಂದುಗಳು ಕಾರಣ. ಒಂದು ದಲಿತ ಸಂಘರ್ಷ ಸಮಿತಿ, ಎರಡು ನನ್ನಣ್ಣ. ನನ್ನಣ್ಣ ದಲಿತ ಸಂಘರ್ಷ ಸಮಿತಿ, ಸಮುದಾಯಗಳಲ್ಲಿ ಓಡಾಡಿದವ. ಅಲ್ಲಿಯ ಸಮೂಹ ಗೀತೆಯಲ್ಲಿ, ಬೀದಿನಾಟಕಗಳಲ್ಲಿ ಸಕ್ರಿಯವಾಗಿ ಸೇರಿದವ. ಕವನ, ಲೇಖನಗಳನ್ನು ಕದ್ದು ಓದುವ, ನೋಡುವ ಪ್ರವೃತ್ತಿಯಿಂದಲೇ ನಾನು ಆತನ ಕೆಲ ಗುಣಗಳನ್ನು ರೂಢಿಸಿಕೊಂಡೆ.

"ಕಾರ್ಯ" ಕಾದಂಬರಿ ಪ್ರಕಟವಾದಾಗ ಮನೆಯಲ್ಲಿ ಇಬ್ಬರು ಹಿರಿಯ ಸಹೋದರರನ್ನು (ರಾಮಸ್ವಾಮಿ, ಬಸವರಾಜ) ಹೊರತುಪಡಿಸಿ ಇನ್ನುಳಿದವರಲ್ಲ ತೆಗಳುವವರೇ. ಆದರೆ ಹಿರಿಯ ಸಹೋದರನ ಮಾತುಗಳು ನನ್ನ ಪಾಲಿಗೆ ಹೆಚ್ಚು ತೂಕ ಬದ್ಧ ಎಂದು ಭಾವಿಸುತ್ತಿದ್ದೆ. ಕಾರಣ, ಈತ ಸಾಮಾಜಿಕ ಪ್ರಜ್ಞೆ, ದಲಿತ ಪ್ರಜ್ಞೆ, ಚಾರಿತ್ರಿಕ ಪ್ರಜ್ಞೆ ಇಂಥ ಪ್ರಜ್ಞಾವಂತ ವಲಯದವನಾಗಿದ್ದ ಎನ್ನುವುದೇ ಆಗಿತ್ತು. ಈಗಿಷ್ಟು ಸ್ಪಷ್ಟವಾಗಿ ಬರೆದಂತೆ ಹಿಂದೆ ನನಗಾಗ ಈ ರೀತಿಯ ಸ್ಪಷ್ಟತೆ ಇರಲಿಲ್ಲ. ಆದರೆ ಆ ವಿಚಾರದ ಕಡೆಗೆ ವಿಶೇಷವಾದ ಆಸಕ್ತಿ ಇತ್ತು. ನನ್ನ ನಾಲ್ಕನೆಯ ಪುಸ್ತಕವಾಗಿ ಕಾರ್ಯ ಕಾದಂಬರಿ ಬರದಾಗ