ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೩೮

ವಿಕಿಸೋರ್ಸ್ದಿಂದ
(ಪುಟ:ಗೌರ್ಮೆಂಟ್ ಬ್ರಾಮ್ಮಣ.pdf/೧೩೮ ಇಂದ ಪುನರ್ನಿರ್ದೇಶಿತ)
ಈ ಪುಟವನ್ನು ಪ್ರಕಟಿಸಲಾಗಿದೆ

೧೨೨

ಗೌರ್ಮೆಂಟ್ ಬ್ರಾಹ್ಮಣ

ವಿಚಾರ ಬದಿಗಿಟ್ಟು, ನನ್ನ ಜಾತಿಗೂ ಅಂಬೇಡ್ಕರ್‌ ಜಾತಿಗೂ ತಳಕು ಹಾಕಿ, ಇವನು ಜಗಜೀವನರಾಮ ಜಾತಿಯವನು ಅಂಬೇಡ್ಕರ್‌ ಜಾತಿಯವನಲ್ಲ, ಅದಕ್ಕೆ ಈತ ಹೀಗೆ ಹೇಳ್ತಾನೆ. ಹಿಂದೆ ಜಗಜೀವನರಾಮ ಕೂಡ ಅಂಬೇಡ್ಕರ್ ಹೀಗೆ ಮಾಡಿದ್ದಾನೆ! ಎಂದು ಎಲ್ಲೆಲ್ಲಿಯದೋ ವಿಷಯ ತಂದು ಇನ್ನೆಲ್ಲೋ ತಳಕು ಹಾಕಿ ವೇದಿಕೆಯ ಮೇಲಿದ್ದಾಗಿನಿಂದ ಹಿಡಿದು ವೇದಿಕೆ ಇಳಿದ ಮೇಲೂ ನನಗೆ ಹಾರ-ತುರಾಯಿಗಳ ಜೊತೆಗೆ ಪಂಗನಾಮವೂ ಹಾಕಿದರು. ಅಷ್ಟೇ ಅಲ್ಲ ಅಂದಿನಿಂದ ಸಮಿತಿಯ ಯಾವ ಕೆಲಸಕ್ಕೂ ನನಗೆ ಕರೆಯದೆ ಹೊರಗಿಟ್ಟರು.

ಸ್ವಾರಸ್ಯವೆಂದರೆ ದಲಿತ ಸಂಘರ್ಷ ಸಮಿತಿಯ ಕೆಲ ಸ್ನೇಹಿತರೇ ಮತ್ತೆ ನನ್ನನ್ನು ಕರೆಯಲು ಬಂದದ್ದು. "ದಲಿತ ಜಗತ್ತು" ಅದ್ಭುತವಾದುದು, ಭವ್ಯವಾದುದು, ದಿವ್ಯವಾದುದು ಎಂದು ಗಾಲಿ ಹಾಕಿ ದಲಿತ-ದಲಿತರಲ್ಲಿಯೇ ವಿಷದ ಬೀಜ ಬಿತ್ತಿ, ತೂರಿಕೊಳ್ಳುವವರನ್ನು ಅರಿಯಲು ದ.ಸಂ.ಸ ಸ್ನೇಹಿತರು ತಡಮಾಡಿದರೂ, ಅರಿತುಕೊಂಡದ್ದು ನನಗೆ ಮುಖ್ಯವಾಗಿತ್ತು. ಸಂಘರ್ಷ ಸಮಿತಿಯ ಬಲಕ್ಕಾಗಿಯೇ ತಮ್ಮ ಅಸ್ತಿತ್ವ, ಜೀವನ ಜೀವವನ್ನೂ ಕಳೆದುಕೊಂಡ ಸ್ನೇಹಿತರೂ ನನ್ನ ಕಣ್ಣಲ್ಲಿಯೇ ಇದ್ದಾರೆ. ಇಂಥವರ ಕುರಿತು ಬರೆಯುವ ಒತ್ತಾಸೆಯೂ ಇದೆ. ಇಂಥ ಬಲಾಬಲಗಳು ಏನೇ ಇದ್ದಾಗಲೂ ಎರಡೂ ಸಂಘಟನೆಗಳು ನೇರವಾಗಿ ಮಾತನಾಡುವ ಎದೆಗಾರಿಕೆ, ಸಂಯಮದ ಗೆಲುವು ಇದ್ದುದ್ದನ್ನು ಬಿಚ್ಚು ಮನಸ್ಸಿನಿಂದ ಹೇಳಿಬಿಡುವ, ಹೇಳುವವರ ವಿಷಯವನ್ನು ವ್ಯವಧಾನದಿಂದ ಕೇಳುವುದನ್ನು ಕಲಿಸಿಕೊಟ್ಟಿವೆ. ಈ ಬರವಣಿಗೆಯಲ್ಲಿ ಬಲವಿದೆ ಎಂದು ನಿಮಗನಿಸಿದಲ್ಲಿ ಅದರ ಹಿಂದಿನ ಬೆನ್ನೆಲುಬು ಈ ಮೇಲೆ ಸೂಚಿಸಿದ ಶಕ್ತಿಗಳೇ ಆಗಿವೆ ಎನ್ನುವುದರಲ್ಲಿ ಸಂದೇಹವಿಲ್ಲ.

ಈ ಕೃತಿಯಲ್ಲಿಯ ಒಟ್ಟು ಬರವಣಿಗೆ ನಾನು ಉದ್ಯೋಗಾವಸ್ಥೆಗೆ ಕಾಲಿಡುವವರೆಗೆ ಮಾತ್ರ ಸಂಬಂಧಿಸಿದ್ದು. ಎಂದರೆ ಇದು ಮೊದಲ ಕಂತಿನ ಕೃತಿ. ನಾನು ಅಧ್ಯಾಪಕ ಹುದ್ದೆಗೆ ಸೇರಿದ ನಂತರ ದಲಿತನಾಗಿ ಅನುಭವಿಸಿದ ಅನುಭವಗಳು, ಒಗರಾದ, ಹಣ್ಣಾದ, ಹುಣ್ಣಾದ ಹಾಗೂ ಅಷ್ಟೇ ಆಕ್ರಮಣಕಾರಿ ಸ್ವರೂಪದವೂ ಇವೆ. ಒಂದು ಸಂದರ್ಭವಂತೂ ನನ್ನನ್ನು ಆತ್ಮಹತ್ಯೆಯ ಅಂಚಿನವರೆಗೂ ಕರೆದುಕೊಂಡು ಹೋಗಿತ್ತು. ಇಂಥ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಒಂದು ದೀರ್ಘವಾದ ಪತ್ರವನ್ನೂ ಬರೆದೆ. ಅದನ್ನು ಈ ಕೃತಿಯಲ್ಲಿ ಪ್ರಕಟಿಸುವ ವಿಚಾರ ಮಾಡಿ ಮತ್ತೆ ಹಿಂದೆ ಸರಿದಿದ್ದೇನೆ. ಏಕೆಂದರೆ, ಈ ಬರವಣಿಗೆಯನ್ನು ಪ್ರಕಟಿಸಲು ವೈಯಕ್ತಿಕವಾಗಿ ನನಗೇನೂ ಆತಂಕಗಳಿಲ್ಲ. ಆದರೆ ನನ್ನ ಈರೀತಿಯ ಬಿಚ್ಚು ಬರವಣಿಗೆ ಮತ್ತೊಬ್ಬರ ಬದುಕಿಗೆ ಕೊಡಲಿಯ ಪೆಟ್ಟಾಗಬಾರದೆನ್ನುವುದೇ ಆಗಿದೆ. ಕಹಿಯುಂಡು ಬೆಳೆದ ದೇಹಕ್ಕೆ ವಿಷಕುಡಿದರೂ ಅಮೃತವಾಗುತ್ತದೆ. ಅಂತೆಯೇ ಇಂಥ ಪ್ರಸಂಗಗಳು ನನಗೆ ಮತ್ತಷ್ಟು ಸಹನಾ ಶಕ್ತಿಯನ್ನು ತಂದು ಕೊಟ್ಟಿವೆ. ಮನೆಯಂಗಳದ