ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೨೯

ವಿಕಿಸೋರ್ಸ್ದಿಂದ
(ಪುಟ:ಗೌರ್ಮೆಂಟ್ ಬ್ರಾಮ್ಮಣ.pdf/೨೯ ಇಂದ ಪುನರ್ನಿರ್ದೇಶಿತ)
ಈ ಪುಟವನ್ನು ಪ್ರಕಟಿಸಲಾಗಿದೆ

ನಾಳಿನ ಕಸದ ಪಾಳಿ : ಮಾಲಕತ್ತಿ

೧೩

ಗುರೂತ್ತಮರು ಜೋಡು ಗುಮ್ಮಟದ ನಗಾರಿಯನ್ನು ಬಾರಿಸುತ್ತಿರಬೇಕಾದರೆ ವಿಲವಿಲನೆ ಒದ್ದಾಡುತ್ತಿದ್ದೆ. ಗೋಡೆಯ ಗೂಟಕ್ಕೆ ತೂಗು ಹಾಕಿದ್ದರಿಂದ ಮೂಗು, ತರಕು ಬರಕಾದ ಗೋಡೆಗೆ ಉಜ್ಜಿ ಉರಿಯುತ್ತಿತ್ತು. ಗೂಟಕ್ಕೆ ಜೋತು ಬಿದ್ದಿರುವುದರಿಂದ ಹೊಟ್ಟೆ ತೆಳ್ಳಗಾಗಿ ನಡಕ್ಕೆ ಕಟ್ಟಿದ ಆ ದಗಲಂ ಬೊಗಲಂ ಪೊಲೀಸ್ ಚೊಣ್ಣ ಹೊಡೆತ ಬಿದ್ದಂತೆ ನಿಧಾನವಾಗಿ ಕೆಳಗಿಳಿಯುತ್ತಿತ್ತು. ತರಗತಿಯಲ್ಲಿರುವ ವಿದ್ಯಾರ್ಥಿಗಳಿಗೆ ನೋಡಲು ಅದೊಂದು ಸಿನಿಮಾ ಆಗಿತ್ತು. ಅವರು ಬಿದ್ದು ಬಿದ್ದು ನಕ್ಕಂತೆ, ನನ್ನ ಅಳುವು ಹೆಚ್ಚಿದಂತೆ ಹೊಡೆತ ಇನ್ನೂ ಜೋರಾಗುತ್ತಿದ್ದವು. ಕುಂಡೆ ತುಂಬಾ ಬಾಸುಂಡೆ, ಕೊನೆಗೆ ಕರಿಕುಂಡೆ ನೋಡಲಾಗದೆ "ಥೂ" ಎಂದು ನೆಲಕ್ಕುಗಿದು ದೂರ ಸರಿದಾಗ ಅವರ ದೃಷ್ಟಿ ಹೊರಳುವುದು ನನ್ನ ಕೇರಿಯ ಸ್ನೇಹಿತರ ಮೇಲೆ. ಅದರ ಅರ್ಥ ಅವರಿಗೆ ತಕ್ಷಣವೇ ಆಗುತ್ತಿತ್ತು. ಓಡಿ ಬಂದವರೇ ಗೂಟದಿಂದ ನನ್ನನ್ನು ಕೆಳಗಿಳಿಸುತ್ತಿದ್ದರು. ಆಗ ನೆಲದ ಮೇಲೆ ಕುಳಿತುಕೊಳ್ಳುವುದೂ ದುಸ್ತರವಾಗುತ್ತಿತ್ತು. ಹೀಗೆ ನಾನೂ ನನ್ನ ಕೇರಿಯ ಸ್ನೇಹಿತರನ್ನು ಕೆಳಗಿಳಿಸಿದ ಸಂದರ್ಭಗಳಿವೆ.

ಇದಕ್ಕಿಂತ ಕಠಿಣ ಶಿಕ್ಷೆ ಮತ್ತೊಂದು:

ಅದು, ಕುರ್ಚಿಯ ಹಾಗೆ ಮೊಣಕಾಲು ಅರ್ಧ ಮಡಿಸಿ ನಿಂತುಕೊಳ್ಳಬೇಕು. ಹೀಗೆ ಬಹಳ ಹೊತ್ತು ನಿಲ್ಲಲಾಗದು. ಸ್ವಲ್ಪ ಸಮಯದ ನಂತರ ಮೊಣಕಾಲು ಮಡಿಸಿ ಕುಳಿತು ಬಿಡಬೇಕಾಗುತ್ತದೆ. ಹೀಗೆ ಕುಳಿತುಕೊಳ್ಳಬಾರದೆಂದು ಮೊಣಕಾಲ ಭಾಗದ ಹಿಂದಿನ ಸಂದಿಯಲ್ಲಿ ದಪ್ಪಾದ ಮತ್ತು ಸ್ವಲ್ಪು ಚೂಪಾದ ಕಟ್ಟಿಗೆಯ ತುಂಡನ್ನು ಇಡಲಾಗುತ್ತಿತ್ತು. ಅವರು ತಿಳಿಸಿದ ಪ್ರಮಾಣಕ್ಕಿಂತ ಹೆಚ್ಚಿಗೆ ಕಾಲು ಮಡಿಸಿದರೆ ಕಟ್ಟಿಗೆ ನಟ್ಟು ರಕ್ತವೇ ಬರುತ್ತಿತ್ತು.

ಪಟ್ಟಿಕೊಡುತ್ತ ಹೋದರೆ ಇನ್ನೂ ಇವೆ. ಈ ಪರಿಯ ಶಿಕ್ಷೆಯುಂಡ ನಮ್ಮ ದೇಹ ಕೊರಡಾಗಿ ಹೋಗಿತ್ತು. ಶಿಕ್ಷೆಯ ಕಾಲ ಬಂದಾಗ ಅವರು ಹೇಳುವುದಕ್ಕಿಂತ ಮುಂಚಿತವಾಗಿಯೇ ನಾವು ಆಸನ ಹಾಕುತ್ತಿದ್ದವು. ಆಸನ ಹಾಕುವುದರಲ್ಲಿ ತಡವಾದರೂ ಹೊಡೆತ, ಬೇಗನೆ ಹಾಕಿದರೆ "ಎಷ್ಟು ಹುರುಪು ನೋಡು ಮಗನಿಗೆ' ಎನ್ನುವುದು, ಹೊಡೆತ. ಆದರೆ ಆ ಗುರೂತ್ತಮರ ಕೈ ಹೊಡೆತ ತಿನ್ನುವ ಭಾಗ್ಯ ನಮಗೆ ಬರಲೇ ಇಲ್ಲ.

ಇವಲ್ಲ ಶಿಕ್ಷೆಗಳು ಯಾವ ಕಾರಣಕ್ಕಾಗಿ ಗೊತ್ತೇ? ನಾವು ಮನೆಯಲ್ಲಿ, ಹೇಳಿದ ಪಾಠ ಓದಿಕೊಂಡು ಬರಲಿಲ್ಲ ಎಂದಲ್ಲ. ನಮ್ಮ ಕೊಳಕುತನಕ್ಕಾಗಿಯಲ್ಲ. ಶಾಲೆಯಲ್ಲಿ ಪ್ರಾರ್ಥನೆಯಾಗುವುದಕ್ಕಿಂತ ಮುಂಚೆಯೇ, ನಾವು ಬಂದು ತರಗತಿಯ ಕಸ ಗುಡಿಸಬೇಕು. ಬೇಗನೆ ಬಂದು ಕಸ ಗುಡಿಸದಿದ್ದರೆ ಈ ಪರಿಯ ಶಿಕ್ಷೆ.

ನಮ್ಮ ಕೇರಿಯವರು ಒಟ್ಟು ತರಗತಿಯಲ್ಲಿ ನಾಲ್ಕು ಜನ. ದೇವಪ್ಪ, ಮಲ್ಲಪ್ಪ,