ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೫೫

ವಿಕಿಸೋರ್ಸ್ದಿಂದ
(ಪುಟ:ಗೌರ್ಮೆಂಟ್ ಬ್ರಾಮ್ಮಣ.pdf/೫೫ ಇಂದ ಪುನರ್ನಿರ್ದೇಶಿತ)
ಈ ಪುಟವನ್ನು ಪರಿಶೀಲಿಸಲಾಗಿದೆ

ಹತ್ತಿ ಕದದ್ದು ಲಾಡು ತಿಂದದ್ದು

೩೯

ಹತ್ತಿ ಇರಿಯುವುದು ಕಾಣುತ್ತಿರಲಿಲ್ಲ. ಹೀಗಾಗಿ ಹತ್ತಿ ಇರಿಯುತ್ತಲೇ ಹೋದೆ. ಹತ್ತಿ
ಹೆಚ್ಚು ಸಂಗ್ರವಾದಂತೆ ನನಗೆ ಒಂದರ ಬದಲಾಗಿ ಎರಡು ಉಂಡೆ ಸಿಕ್ಕ ಅನುಭವವಾಗಿ
ಮುಖ ಅರಳಿತು. ಇನ್ನೇನು ಸಾಕು ಕೈ ಬಿಡೋಣ, ಬಿಟ್ಟು ನೆಲಕ್ಕೆ ಕೂಡುವ ಮುನ್ನವೇ
"ಚಟಲ್" ಎಂದು ಬಾರುಕೋಲಿನ ಹೊಡೆತ ತಿಂದಾಗ ಗಣಪನಂತೆ ಹೊಟ್ಟೆ ಮೇಲೆ
ಮಾಡಿಕೊಂಡು ಬಿದ್ದೆ.

ನನ್ನಜ್ಜಿ ನನ್ನ ಅವತಾರವನ್ನು ನೋಡಲಾಗದೆ ದುಃಖದಿಂದ ರೋದಿಸಿದಳು. ಮಣ್ಣಿನ
ಹೊಸ ಮಡಕೆ ತಂದು ಹಾಳೆ ಹಾಗೂ ಗರಟೆಯ ಕೆಲ ಚದುರುಗಳನ್ನು ಹಾಕಿ ಬೆಂಕಿ
ಮಾಡಿದಳು. ಅದರಲ್ಲಿ ನೀರು ತುಂಬಿ, ಅರಿಶಿಣ, ಕುಂಕುಮ ಹಾಕಿ ನದರು ಮಾಡಿದಳು.
ಲಿಂಬೆ ಹಣ್ಣು ಕೊಯ್ದು, ಮೂರು ತುಂಡು ಮಾಡಿ ಸೂಜಿ ಚುಚ್ಚಿ ಗಡಿಗೆಗೆ ಹಾಕಿದಳು.
ಜೋಗಪ್ಪನ ಹತ್ತಿರ ಹೋಗಿ ಅಲ್ಲಿಂದ ಏನೋ ತಂದು ಆ ಮಡಕೆಗೆ ಹಾಕಿ, ನನ್ನ ತಲೆ
ಸ್ವಲ್ಪ ಕೂದಲು ಕತ್ತರಿಸಿಕೊಂಡಳು. ನಾನೆಷ್ಟು ಮಾತನಾಡಿದರೂ ಮಾತನಾಡದೆ ಮೂಕಿಯ
ಹಾಗೆ ವರ್ತನೆ ಮಾಡುತ್ತ ಮತ್ತೆ ಪುನಃ ಆ ಮಡಕೆಯನ್ನು ಒಯ್ದು ಜೋಗಪ್ಪನಿಗೆ ಕೊಟ್ಟು
ಬಂದು ನನಗೆ ಧೈರ್ಯ ಹೇಳಿದಳು.

"ಈಗ ಆ ಗಡಗಿ ಹೋಗಿ ಅವ್ರ ಹಿತ್ತಲದಾಗ ಬೀಳತೈತಿ -
ನಿನಗ ಆಗಿದ್ದರ ಎರಡಪಟ್ಟ ಅವ ಆಕೃತಿ, ಸುಮ್ಮನಿರು"

ಎಂದು ನನ್ನನ್ನು ಎದೆಗವಚಿಕೊಂಡಳು. ಇದಕ್ಕಿಂತ ಹೆಚ್ಚಿನ ಬಲ ನನ್ನಜ್ಜಿಯಲ್ಲಿ
ಇರಲಿಲ್ಲ. ಏಕೆಂದರೆ, ನನಗೆ ಹೊಡೆದವ ನಮ್ಮೂರ ಗೌಡರ ಸಂಬಂಧಿಕನಾಗಿದ್ದ.

ಆ ಬೆಳ್ಳನೆಯ ಲಾಡು ಕೈ ಸಿಕ್ಕಾಗ ಈಗಲೂ ನನಗೆ ಆ ಬಾರುಕೋಲಿನ
ನೆನಪಾಗುತ್ತದೆ.

ಆ ಗಡಿಗೆಯ ನೆನಪಾಗುತ್ತದೆ.

ಇಂಥ ಶಿಕ್ಷೆ, ಈ ರೀತಿಯ ಕೆಲಸಕ್ಕೆ ಪ್ರೇರೇಪಿಸಿದ ಅಂಗಡಿಯ ತಾತ ಹಾಗೂ
ಆತನ ಅಂಗಡಿಯಲ್ಲಿದ್ದ ಮತ್ತೊಬ್ಬ ಮನುಷ್ಯನಿಗೂ ಸಂದಬೇಕಾಗಿತ್ತಲ್ಲವೇ?