ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೫೭

ವಿಕಿಸೋರ್ಸ್ದಿಂದ
(ಪುಟ:ಗೌರ್ಮೆಂಟ್ ಬ್ರಾಮ್ಮಣ.pdf/೫೭ ಇಂದ ಪುನರ್ನಿರ್ದೇಶಿತ)
ಈ ಪುಟವನ್ನು ಪ್ರಕಟಿಸಲಾಗಿದೆ

೪೧

"ಓಕುಳಿ" ಎಂಬ ಈಸ್ಟಮನ್ ಕಲರ್ ಚಿತ್ರ


ಜಬರಿಯಿಂದ ಗಂಡುಗಳಿಗೆ ಹೊಡೆಯಬೇಕು. ಇದೊಂದು ಬಗೆಯ ಸಾಂಪ್ರದಾಯಿಕವಾದ
ಕ್ರೀಡೆ.

ಗಂಡಸರು ಈ ಹೆಂಗಸರಿಗೆ ಜೋಳಿಗೆಯಲ್ಲಿ ನೀರು ತಂದು ಪದೇ ಪದೇಯಾಗಿ
ಹೊಡೆದಾಗ ಮೈಯೆಲ್ಲಾ ಒದ್ದೆಯಾಗಿ ತಲೆಯ ಸೆರಗು ಜಾರಿ ನೆಲಕ್ಕೆ ಬಿದ್ದರೂ
ಈ ಹೆಂಗಸರು ಅದರ ಪರಿವಿಲ್ಲದೆ ತಾವು ತಿಂದ ಪೆಟ್ಟಿಗೆ ಪ್ರತಿಯಾಗಿ ಅವರ ಬೆನ್ನು
ಬಾರೆತ್ತಲು ಓಡುತ್ತಾರೆ. ಒದ್ದೆಯಾದ ಮೈ ತುಂಬಿದೆದೆ ತೊಡೆಗಳು ಎಲ್ಲವೂ ಬಿಚ್ಚಿಟ್ಟ
ಗಂಟುಗಳು. ಉಗುಳು ನುಂಗುವ ಪ್ರೇಕ್ಷಕ ಮಹಾಶಯರಿಗೆ ಹಾಗೂ ಆಟಗಾರರ ಚಪಲಕ್ಕೆ
ಇದೊಂದು ಪುಕ್ಕಟೆ ಮನರಂಜನೆ. ಈ ಹೆಂಗಸರ ಮೈ ಮೇಲೆ ಆಗಾಗ ಬಂದು ಬೀಳುವ
ಕೆಂಪು ಹಳದಿ ಬಣ್ಣದ ನೀರುಗಳು ಈಸ್ಟ್‌ಮನ್ ಕಲರ್‌ನಲ್ಲಿ ಇಟ್ಟು ನೋಡುವಂತೆ
ಮಾಡಿದ್ದಾರೆ.

ಪ್ರತಿವರ್ಷ ಈ ಕ್ರೀಡೆ ನಡೆಯಲೇಬೇಕು ಎನ್ನುವ ನಿಯಮ. ನಡೆಸದಿದ್ದರೆ ಊರಿಗೆ
ಮಳೆ ಬರಲಾರದು. ಬೆಳೆಗೆ ರೋಗ ಬೀಳುತ್ತದೆ. ಊರಿಗೆ ಮಾರಿ (ರೋಗ) ಬರುತ್ತದೆ.
ಶನಿಯ ಕಾಟ ಹೆಚ್ಚುತ್ತದೆ ಎನ್ನುವ ನಂಬಿಕೆಗಳಿವೆ. ಈ ನಂಬಿಕೆಗಳಿಗೆ ಹೆದರುವ ದಲಿತ
ಹೆಂಗಸರು - ಗಂಡಸರು ಹೀಗೆ ಮನರಂಜನೆಯ ರೀತಿಯಲ್ಲಿ ಬಲಿಯಾಗುತ್ತಾರೆ.

ದೃಢಕಾಯಿಯಾದ ನನ್ನಜ್ಜಿ ನಮ್ಮ ಸಹೋದರರನ್ನೆಲ್ಲಾ ಕರೆದುಕೊಂಡು ಅಲ್ಲಿಯ
ಹತ್ತಿರದ ಜಾತ್ರೆಗೆ ಕರೆದೊಯ್ಯುತ್ತಿದ್ದಳು. ಜಾತ್ರೆಯ ನೋಟಕ್ಕಲ್ಲ, ಅಲ್ಲಿ ಸಿಗುವ ಊಟಕ್ಕೆ.
ಆಗ ಈ ಮನರಂಜನೆಯನ್ನೂ ಕೂಡ ತಪ್ಪದೇ ತೋರಿಸುತ್ತಿದ್ದಳು. ನಮಗೆ ಕಾಣದೆ
ಹೋದಾಗ ನಮ್ಮನ್ನು ತನ್ನ ಹೆಗಲ ಮೇಲೆ ಅಥವಾ ಗೋಡೆಯ ಮೇಲೆ ನಿಲ್ಲಿಸಿ
ತೋರಿಸುತ್ತಿದ್ದಳು.

ಹೆಚ್ಚಿನ ವ್ಯಾಸಂಗಕ್ಕೆ ಧಾರವಾಡಕ್ಕೆ ಬಂದಾಗ ಪಿಎಚ್.ಡಿ. ಮಾಡುವ ಸ್ನೇಹಿತ
ಸಿಕ್ಕ. ಆತನ ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ ಅವನೊಂದಿಗೆ ನಾನೂ ಹೋಗುತ್ತಿದ್ದೆ.
ಸಂದರ್ಭ ಬಂದಾಗ ಈ ಮೇಲಿನ ಸಂಪ್ರದಾಯ ಪ್ರಸ್ತಾಪ ಮಾಡಿದೆ. ಆಗ ಆತ ತನ್ನ
ಪಕ್ಕದ ಊರಿನಲ್ಲಿ ಇದಕ್ಕಿಂತಲೂ ಭೀಕರವಾಗಿ ನಡೆಯುವ ಘಟನೆ ಹೇಳಿದಾಗ ಅದನ್ನು
ನೋಡಲೇಬೇಕು ಎಂಬ ಹಟ ಬಂತು. ಓಕುಳಿಯಂತೆ ಇದೂ ಶ್ರಾವಣಮಾಸದಲ್ಲಿಯೇ
ಹನುಮಂತನ ಎದುರೇ ನಡೆಯುವ ಕ್ರೀಡೆ ಇಲ್ಲಿಯೂ ದಲಿತ ಹೆಂಗಸರೇ ಬೇಕು.

ಗಂಡಾಗಲಿ-ಹೆಣ್ಣಾಗಲಿ ಅವರ ಮೈಮೇಲೆ ಬಟ್ಟೆ ಇರುವುದಿಲ್ಲ. ಗಂಡು ಹೆಣ್ಣು
ಸೇರಿ ನೃತ್ಯ ಮಾಡುತ್ತವೆ. ಅನಂತರದಲ್ಲಿ ಪ್ರಮುಖವಾದ ಅಂಶವೆಂದರೆ, ಗಂಡುಗಳ ಹೆಗಲ
ಮೇಲೆ ಹೆಣ್ಣುಗಳು ಕುಳಿತುಕೊಂಡು, ಹೆಣ್ಣು ಬಾಳೆಹಣ್ಣನ್ನು ಸುಲಿದು ಗಂಡಿನ ಬಾಯಲ್ಲಿ
ಇಡುವುದಕ್ಕಾಗಿ ಹೋಗುತ್ತದೆ. ಗಂಡು ಬಾಯಿ ಮುಂದಕ್ಕೆ ತಂದಾಗ ತಕ್ಷಣ ಅದನ್ನು