ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೫

ನನ್ನಪ್ಪನ ಮಾಸ್ತರ ನೌಕರಿ ಮತ್ತು ಪಂದ್ರಾ ಆಗಸ್ಟ


ನನ್ನಪ್ಪನಿಗೆ ನಡುವಯಸ್ಸಿನಲ್ಲಿಯೇ ಮರ್ಮಾಂಗಕ್ಕೆ ಚೇಳು ಕಡಿದುದರಿಂದ ಮೈಯೆಲ್ಲ
ಹಸಿರೇರಿ ಸತ್ತ. ಅಜ್ಜ ಹೇಳುತ್ತಿದ್ದಳು, ಮಕ್ಕಳಾಗಲಿಲ್ಲವೆಂದು ಕಂಡ ಕಲ್ಲುಗಳಿಗೆಲ್ಲ ಸುತ್ತಿ
ಹರಕೆ ಹೊತ್ತು ಪ್ರಯೋಜನವಾಗದೆ ಹೋದಾಗ ಬೆಲ್ಲದ ಉಂಡಿಯಲ್ಲಿ ಚೇಳನಿಟ್ಟು,
ಚರ್ಮಿತುಪ್ಪ (ಆಡಿನ ಶರೀರದಲ್ಲಿಯ ಕೊಬ್ಬು ಪದಾರ್ಥ) ದಲ್ಲಿ ನುಂಗಿ ಹಡೆದಿದ್ದಳಂತೆ
ಆದ್ದರಿಂದ "ಚೇಳಿನಿಂದಲೇ ಹುಟ್ಟಿದ್ದ ಚೇಳಿನಿಂದಲೇ ಸತ್ತ" ಎಂದು ತನ್ನ ಬದುಕಿನ
ದಿನಗಳನ್ನು ನಿಟ್ಟುಸಿರಿನೊಂದಿಗೆ ಕಥೆ ಮಾಡಿ ಹೇಳುತ್ತಿದ್ದಳು.

ನನ್ನ ಮನೆಯವರೆಲ್ಲ ಹೇಳುವುದೆಂದರೆ ನಾನು ಹುಟ್ಟಿದಾಗ ಗುಂಗಿಯ ಹುಳು
"ಜೀಂ" ಗುಟ್ಟಿದಂತೆ ಸದಾಕಾಲ ಅಳುತ್ತಿದ್ದೆನಂತೆ! ಹಗಲು-ರಾಶ್ರಿಗಳ ವೃತ್ಯಾಸವಿರಲಿಲ್ಲ.
ಕಣ್ಣುಮುಚ್ಚುತ್ತಿರಲಿಲ್ಲ. ತುಟಿ ಸೇರುತ್ತಿರಲಿಲ್ಲ. ಅತ್ತು ಅತ್ತು ಬಾಯಿ ಬತ್ತಿ ಹೋದರೂ
ಅಳುವುದು ನಿಲ್ಲುತ್ತಿರಲಿಲ್ಲ. ಅದಕ್ಕೆ ಅವ್ವ "ಕುತ್ತಿಗಿ ಹಿಸುಕಿ ಕಂದಕದಾಗ ಒಗದ ಬರ್ರಿ"
ಎಂದು ಬೇಸತ್ತು ಹೇಳುತ್ತಿದ್ದಳಂತೆ! ನನ್ನನ್ನು ಸದಾಕಾಲ ರಮಿಸುವವರು ಅಜ್ಜ ಮತ್ತು
ಅಪ್ಪ ಇವರಿಬ್ಬರು. ನಾನು ಹತ್ತು ತಿಂಗಳ ಮಗುವಾಗಿರುವಾಗಲೇ ಅಪ್ಪ ಸತ್ತರು. ಅಪ್ಪ
ಸತ್ತಾಗ ಅರ್ಧ ಅಳುವು ನಿಂತದ್ದು. ಅಜ್ಜ ಸತ್ತಾಗ ಪೂರ್ತಿ ಅಳುವು ನಿಂತದ್ದು. ಇದನ್ನು
ನೆನೆನೆನಿಸಿ "ಇವರಿಬ್ಬರನ್ನು ನುಂಗಿ ಏನ ಸಾಧಸಾಕ ಹುಟ್ಕಾದೋ ಇದು ಎಂದು ನನ್ನ
ಗಲ್ಲಕ್ಕೆ ಹಲವಾರು ಬಾರಿ ನನ್ನವ್ವ ಸಣ್ಣವನಿದ್ದಾಗ ತಿವಿದಿದ್ದಳಂತೆ. ದೊಡ್ಡವನಾದಾಗಲೂ
ನಗುತ್ತಲೇ ಹಂಗಿಸಿದ್ದಾಳೆ.

ನನ್ನಪ್ಪ ಶಾಲೆ ಓದಿದ್ದೆಂದರೆ ಬೆಟ್ಟ ಕುಟ್ಟಿ ಪುಡಿ ಮಾಡಿದ ಸಾಹಸ. ಸಮುದ್ರದ
ನೀರು ಕುಡಿದು ನಡೆದ ಸಾಹಸ! ಓದುವಾಗ ಇದ್ದ ಉತ್ಸಾಹ ಹುರುಪು ಹುಮ್ಮಸ್ಸು ನೌಕರಿ
ಮಾಡುವಾಗ ಇರಲಿಲ್ಲವಂತೆ. ಅಜ್ಜಿ ಹೇಳುತ್ತಿದ್ದಳು: ಆಗ ಏಳು ರೂಪಾಯಿ
ಸಂಬಳವಿರುತ್ತಿತ್ತಂತೆ. ತಿಂಗಳಲ್ಲಿ ಮನೆಗೆ ಮೂರು ರೂಪಾಯಿ ಖರ್ಚುಮಾಡಿ ನಾಲ್ಕು
ರೂಪಾಯಿ ತೆಗದಿಡುತ್ತಿದ್ದರಂತೆ!

ನೌಕರಿಯ ನೇಮಕ ಪತ್ರ ಕೈಗೆ ಬಂದಾಗ ಕೇರಿಯೆಲ್ಲಾ ಸುತ್ತಾಡಿ ಹಿರಿಯರಿಗೆಲ್ಲ
ಕಾಲಿಗೆ ಬಿದ್ದು ನಮಸ್ಕರಿಸಿ, ನೌಕರಿ ಬಂದಿದೆ ಸೇರುವುದಕ್ಕಾಗಿ ಹೋಗುತ್ತಿದ್ದೇನೆಂದು
ಸಾರಿ, ಹಾಜರಾಗಲು ಹೋದನಂತೆ. ಸುಟ್ಟ ಬದನೆಕಾಯಿಯಂತೆ ಮುಖ ಒಣಗಿಸಿಕೊಂಡು