ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೧೮

ಗೌರ್ಮೆಂಟ್‌ ಬ್ರಾಹ್ಮಣ


ಕೇರಿಯ ಎಲ್ಲ ಯುವಕರನ್ನೂ ಕರೆದುಕೊಂಡು ಕೊಡ ಹಗ್ಗದೊಂದಿಗೆ ನೀರಿಗೆ ಹೊರಟರಂತೆ.
ಅದು ಮಧ್ಯಾಹ್ನದ ಉರಿ ಬಿಸಿಲು ಬೇರೆ! ಹೋದವರೇ ಮೊದಲು ಮಠದ ಬಾವಿಗೆ
ಹಗ್ಗವನ್ನು ಹಾಕಿ ನೀರು ಸೇದಿದರಂತೆ. ಎಲ್ಲ ಜನತೆ "ಅವಕ್ಕಾಗಿ" ಇವರನ್ನೇ
ನೋಡುತ್ತಿದ್ದರಂತೆ. ಇವರ ಕುಣಿದಾಟ, ಜಿಗಿದಾಟ ನಿಂತು ನೋಡುವ ಹಾಗೆ ಇರುತ್ತಿತ್ತಂತೆ!
ಮೇಲು ಜಾತಿಯ ಜನತೆಗೆ ಆಶ್ಚರ್ಯ, ದಿಗಿಲು ಎರಡೂ ಏಕಕಾಲಕ್ಕೆ ಉಂಟಾಗಿರಬೇಕು.
ಬಾವಿಯಿಂದ ನೀರು ಜಗ್ಗಿದ ಈ ಜನ ಮನೆಗೂ ತೆಗೆದುಕೊಂಡು ಹೋಗುತ್ತಿರಲಿಲ್ಲವಂತೆ.

ಬಾವಿಯಿಂದ ನೀರು ಜಗ್ಗುವುದು
ದಬದಬನೆ ನೆಲಕ್ಕೆ ಚೆಲ್ಲುವುದು
ಬಾವಿಯಿಂದ ನೀರು ಜಗ್ಗುವುದು
ದಬದಬನೆ ನೆಲ್ಲಕ್ಕೆ ಚೆಲ್ಲುವುದು

ಹೀಗೆ ಒಂದು ಬಾವಿಯಲ್ಲಿ. ಎರಡು ಬಾವಿಯಲ್ಲಿ ಊರಲ್ಲಿ ಇರುವ ಎಲ್ಲ
ಬಾವಿಗಳನ್ನೂ ಮುಟ್ಟಿ ಮುಟ್ಟಿ ಗಡಗಡಿಗೆ ಹಗ್ಗ ಹಾಕಿ ನೀರು ತೆಗೆಯುವುದು, ಚೆಲ್ಲುವುದು,
ಆ ಪಂದ್ರಾ ಆಗಸ್ಟದ ದಿನವೆಲ್ಲ ಇದೇ ಕೆಲಸವೇ ಆಗಿ ಹೋಗಿತ್ತಂತೆ ಊರ ಜನವೆಲ್ಲ ಮಿಕ
ಮಿಕನೇ ಬಾಯಿ ತೆಗೆದುಕೊಂಡು ಇವರ ಮುಖಗಳನ್ನೇ ನೋಡುತ್ತಿದ್ದರಂತೆ! ಜನರೆಲ್ಲ
ದಾರಿಯುದ್ದಕ್ಕೂ ನಿಂತು ನೋಡುತ್ತಿದ್ದರಂತೆ.

ಎಂತಹ ಸಂದರ್ಭವಲ್ಲವೇ ಇದು? ಸ್ವಾತಂತ್ರ್ಯವೆಂದರೆ ಒಬ್ಬೊಬ್ಬರಿಗೆ ಎಂತಹ
ಕಲ್ಪನೆ. ವಿವೇಕಾನಂದರಿಗೆ ತಮ್ಮದೇ ಆದ ಹೊಸನಾಡಿನ ಕಲ್ಪನೆ, ಸರದಾರ್‌ ವಲ್ಲಭಭಾಯಿ
ಪಟೇಲರಿಗೆ ಕ್ಷಾತ್ರ ತೇಜಸ್ಸಿನ ಕಲ್ಪನೆ, ನೆಹರೂಗೆ ಆಧುನೀಕರಣದ ನಾಡಿನ ಕಲ್ಪನೆ,
ಗಾಂಧೀಜಿಗೆ ರಾಮರಾಜ್ಯದ ಕಲ್ಪನೆ, ಅಂಬೇಡ್ಕರ್‌ಗೆ ಹಕ್ಕುಗಾರಿಕೆಯ ನಾಡಿನ ಕಲ್ಪನೆ,
ನನ್ನಪ್ಪನಂತಹ ಸಾಮಾನ್ಯ ಮನುಷ್ಯರಿಗೆ ಸ್ವಾತಂತ್ರ್ಯದ ನಾಡು ಎಂದರೆ ಕುಡಿಯುವ ನೀರು
ತರಲು ನಮಗೆ ಯಾರೂ ಅಡ್ಡಿ ಮಾಡಲಾರರು ಎನ್ನುವ ನಾಡಿನ ಕಲ್ಪನೆ!

ನನ್ನಪ್ಪನ ಎದೆಗೆ ಕುದಿವ ಬಿಸಿನೀರು ಎರಚಿದಂತಾದುದು ಪಂದ್ರಾ ಆಗಸ್ಟದ
ದಿನದಂದೆ! ಪಂದ್ರಾ ಆಗಸ್ಟದಂದು ನಡೆದ ಘಟನೆ ಅನಿಶ್ಚಿತತೆಯಿಂದ ಕೂಡಿದ್ದು.
ಹೀಗಾಗಿಯೇ ಜನ ಕೇವಲ ನಿಂತು ನೋಡುವಂತಾಗಿ ಹೋಯಿತೆಂದು ತೋರುತ್ತದೆ. ಆದರೆ
ಮರುದಿನ ಹಲ್ಲು ಮಸೆಯುವ ಸುದ್ದಿಗಳೇ ಕಿವಿತುಂಬ ಇದ್ದುವಂತೆ. ಕೆಲವರು ಬಾವಿಯ
ಗಡಗಡಿಗಳನ್ನೇ ತೆಗೆದಿದ್ದರಂತೆ ಇನ್ನೂ ಕೆಲವರು "ಅವರು ಬರಲಿ ಇವತ್ತು” ಎಂದು
ಕಾಯುತ್ತಾ ಕುಳಿತಿದ್ದರಂತೆ!

ಪಂದ್ರಾ ಆಗಸ್ಟದಂದು ಮಾಡಿಸಿ ತಿಂದದ್ದು ಹೊ!ದಿನವೂ ಹೋಳಿಗೆ
ತಿನ್ನಲು ಸಾಧ್ಯವೇ? ಮರುದಿನ ಅದೇ ಕಂಕು ರೊಟ್ಟಿಯೇ ಗತಿ ಎನ್ನುವಂತೆ ಹಳೆಯ