ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
 


ಓದುವ ಮುನ್ನ ಓದುಗರೊಂದಿಗೆ

ನಾನು ಮೊದಲೇ ಸ್ಪಷ್ಟ ಮಾಡ ಬಯಸುವ ವಿಷಯವೆಂದರೆ ನನ್ನ ಆತ್ಮ ಕಥೆಯ ಕೆಲವು ಪುಟಗಳನ್ನು ನಿಮ್ಮ ಮುಂದಿಟ್ಟು ನಾನೊಬ್ಬ ಮಹಾತ್ಮ ಎಂದು ಕರೆಯಿಸಿಕೊಳ್ಳುವ ಭ್ರಮೆ ನನಗಿಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯ. ಹೀಗೆಂದ ಮಾತ್ರಕ್ಕೆ ಇಲ್ಲಿಯ ಅನುಭವಗಳೂ ಒಬ್ಬ ಸಾಮಾನ್ಯ ಮನುಷ್ಯನ ಅನುಭವಗಳೇ ಆಗಿವೆ ಎನ್ನುವ ಮಾತನ್ನು ಹೇಳಲಾರೆ. ಆದರೆ ಸಾಮಾನ್ಯ ದಲಿತನೊಬ್ಬನ ಅನುಭವಗಳಾಗಿವೆ ಎನ್ನುವುದನ್ನು ಹೇಳದಿರಲಾರ. ಒಬ್ಬ ದಲಿತನಿಗೆ ಇರಬಹುದಾದ ಎಲ್ಲ ಆಸೆ ಆಕಾಂಕ್ಷೆಗಳು, ಅರೆಕೊರೆಗಳು ನನ್ನಲ್ಲಿವೆ. ಹಾಗೆಯೇ ಒಬ್ಬ ಸಾಮಾನ್ಯ ಮನುಷ್ಯನಿಗೆ ಇರಬಹುದಾದವೂ ಕೂಡ ನನ್ನಲ್ಲಿವೆ. ಆದರೆ ಅಳೆದು ಹೇಳಲು ಯಾವ ಮಾನದಂಡವೂ ಸಾಲದು. ಹೀಗೇಂದು ಕೈ ಚೆಲ್ಲಿ ಕೂಡುವುದು ನನ್ನ ಉದ್ದೇಶವಲ್ಲ. ಆದ್ದರಿಂದ ನನ್ನ ಬದುಕನ್ನು ನಾನೇ ಓದಬಯಸುತ್ತೇನೆ ಮತ್ತು ಮೊದಲ ಓದುಗನೂ ನಾನೇ ಆಗಬಯಸುತ್ತೇನೆ.

ಬಿಳಿ ಬಟ್ಟೆಯನ್ನು ಹಾಕಿರುವ ಅರವಿಂದ ಮಾಲಗತ್ತಿಯನ್ನು ನೀವು ನೋಡಿರಬಹುದು. ಹೀಗೆ ನೋಡಿದವರಿಗೆ ಮತ್ತು ನೋಡುವವರಿಗೆ ಇಲ್ಲಿಯ ಬರವಣಿಗೆ ಆಶ್ಚರ್ಯ ಹುಟ್ಟಿಸಿದರೆ ತಪ್ಪೇನಿಲ್ಲ. ಕೆಲವರು ಹುಬ್ಬೇರಿಸಬಹುದು, ಹುಬ್ಬು, ಗಂಟಿಕ್ಕಬಹುದು. ಕೆಲವರು ಸಂದೇಹದ ಸುಳಿಯಲ್ಲೂ ಇರಬಹುದು. ಅದಕ್ಕೆ ನಿಮ್ಮೆದುರಿಗಿರುವ ಅರವಿಂದ ಮಾಲಗತ್ತಿಯೇ ಕಾರಣ ಎನ್ನುವುದನ್ನೂ ನಾನು ಬಲ್ಲೆ. ಆದರೆ ಆ ಬಾಲ್ಯದ "ಮಾಳಿ" (ನನ್ನ ಮನೆಯವರು ಮತ್ತು ನನ್ನ ಪಕ್ಕದ ಮನೆಯವರು ನನ್ನನ್ನು ರೇಗಿಸಲು ಬಳಸುವ ಹೆಸರು)ಯನ್ನು ನೀವು ನೋಡಿಲ್ಲ. ಮಾಳಿಯೊಂದಿಗೆ ಕಲಿತ ಕೆಲವು ಸ್ನೇಹಿತರೇ, ಈಗ ಅವನಿಂದ ದೂರ ನಿಂತು "ರೀ" ಎಂದು ಸಂಭೋದಿಸುತ್ತಾರೆ. ಅವನೆಷ್ಟೇ ಹತ್ತಿರ ಹೋಗಲು ಪ್ರಯತ್ನಿಸಿದರೂ, ಅವರು ಅವನನ್ನು ದೂರವಿಡುತ್ತಾರೆ. ಮೊದಲಿನ ಮಾಳಿಯನ್ನು ಮಾತನಾಡಿಸಿದಂತೆ ಅವರು ಮಾತನಾಡಿಸುವುದಿಲ್ಲ, ಛೇಡಿಸುವುದಿಲ್ಲ, ದೂರ ದೂರಕ್ಕೆ ಸರಿದು ನಿಲ್ಲುತ್ತಾರೆ. ಕಾರಣ, ಅವನೀಗ "ದೊಡ್ಡ ಮನುಷ್ಯ" ಎನ್ನುವ ಭ್ರಮೆ ಅವರಿಗೆ.

ನನ್ನೂರಿನಲ್ಲಿ, ನನ್ನ ಕೇರಿಯಲ್ಲಿ ಈಗ ನಾನೇ ಪರಕೀಯನಾಗಿ ಬಿಟ್ಟಿದ್ದೇನೆ. ಹಾಗೆಯೇ ನಗರದ ನಡುವೆ ಬದುಕುವ ಸ್ನೇಹಿತರ ಸಂಬಂಧ ಇದಕ್ಕಿಂತಲೂ ಭಿನ್ನವಾಗೇನಿಲ್ಲ,