ವಿಷಯಕ್ಕೆ ಹೋಗು

ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಗೌರ್ಮೆಂಟ್ ಬ್ರಾಹ್ಮಣ

ಆಗ ಗ್ರಾಮೀಣ ವ್ಯವಸ್ಥೆಯ ಸ್ನೇಹಿತರ ಮತ್ತೊಂದು ಮುಖ. ಈ ನಗರದ ಪ್ರಜ್ಞಾವಂತ ಸ್ನೇಹಿತರ ನಡುವೆಯೂ ಅನಾಮಿಕನಾಗಿ ಬದುಕುವ ಬಗೆ ಬರುತ್ತದೆಂದು ನಾನಂದುಕೊಂಡಿರಲಿಲ್ಲ. ಈ ಮಾತುಗಳನ್ನು ಇಲ್ಲಿ ಹೇಳಿಕೊಳ್ಳಲು ಕಾರಣವಿಷ್ಟೇ: ಈ ಕೃತಿಯ ಕೆಲವು ಬಿಡಿ ಭಾಗಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಾಗ, ಓದಿ ಆಶ್ಚರ್ಯ ವ್ಯಕ್ತಪಡಿಸಿದವರೂ ಇದ್ದಾರೆ. ಕೆಲವು ಸ್ನೇಹಿತರು ಇದು ಸಾಧ್ಯವೇ? ಎಂದು ತಮ್ಮ ತಮಲ್ಲಿಯೇ ಚರ್ಚಿಸಿದ್ದಾರೆ! ಇಂಥ ವಿಚಾರಗಳು ಬಾಯಿಂದ ಬಾಯಿಗೆ ಹರಿದು ಬಂದು ನನ್ನ ಕಿವಿಗೆ ಬಿದ್ದಾಗ ಉತ್ತರವಾಗಿ ಮಂದಹಾಸದ ನಗೆಯನ್ನು ನಕ್ಕಿದ್ದೇನೆ, ಜೊತೆಗೆ ಆಶ್ಚರ್ಯವೂ ಪಟ್ಟಿದ್ದೇನೆ. ಏಕೆಂದರೆ, ಬಿಳಿ ಬಟ್ಟೆಯವನಾಗಿ ಹಳೆಯ ಸ್ನೇಹಿತರಲ್ಲಿ ಹೋದರೆ ಅವರು ಮೊದಲಿನಂತೆ ಯಥಾವತ್ತಾಗಿ ಸ್ವೀಕರಿಸುವುದಿಲ್ಲ. ಬಿಳಿ ಬಟ್ಟೆಯ ಸ್ನೇಹಿತರಲ್ಲಿ ನನ್ನ "ಮಾಳಿತನ"ದ ಬಗ್ಗೆ ಪ್ರಸ್ತಾಪ ಮಾಡಿದರೆ ಅವರೇನೋ ಅಚ್ಚರಿಯ ಸಂಗತಿಯಂತೆ ನೋಡುತ್ತಾರೆ. ಈ ವೈಪರೀತ್ಯ ನನ್ನನ್ನೇ ಅಣಕಿಸುತ್ತದೆ. ಇಂಥ ವಿಚಾರಗಳ ಅಲೆ ಎದ್ದಾಗ ನೋವಿನಲ್ಲಿಯೂ ಫಕ್ಕನೆ ನಕ್ಕು ಬಿಡುತ್ತೇನೆ.

"ಈ ಅಸಲಿ ಅನುಭವಗಳನ್ನು ದಯಮಾಡಿ ನಂಬಿ" ಎಂದು ಹೇಳಿಕೊಂಡು, ಯಾರನ್ನೂ ನಾನು ನಂಬಿಸಲು ಹೊರಟಿಲ್ಲ. ಅದು ನನ್ನ ಉದ್ದೇಶವೂ ಅಲ್ಲ. "ದಲಿತರ ಬರವಣಿಗೆಯಲ್ಲಿ ದಲಿತ ಕಾಣೆಯಾಗಿದ್ದಾನೆ' ಎಂದು ಹೇಳಲಾಗುತ್ತಿದೆ. ಯಾವುದೇ ವಿಷಯಕ್ಕಾಗಲಿ, ಚಿಂತನದ ಅಥವಾ ಸಂಪೂರ್ಣ ಸಾಹಿತ್ಯಿಕ ಲೇಪನ ದೊರೆತಾಗ, ಅನುಭವ ತನ್ನ ಮೂಲದ ಸ್ವರೂಪವನ್ನು ಕಳೆದುಕೊಳ್ಳುತ್ತದೆ. ಆಶಯದಲ್ಲಿಯೂ ಬದಲಾವಣೆಗಳು ಬಂದು ಬಿಡುತ್ತವೆ. ಅನುಭವಗಳನ್ನು ನೇರವಾಗಿ ಹೇಳಿಕೊಳ್ಳುವುದರಿಂದ ದಲಿತ "ದಲಿತತನ"ವನ್ನು ಸರಳವಾಗಿ ಹಿಡಿದಿಡಬಹುದು ಎನ್ನುವ ಅರಿವು ಖಚಿತತೆಗೆ ತಂದಾಗ, ಈ ಮಾರ್ಗವನ್ನು ಹಿಡಿದಿದ್ದೇನೆ. ಈ ಶೈಲಿಯಲ್ಲಿ ನಾನು ಬರವಣಿಗೆ ಆರಂಭಿಸುತ್ತಿದ್ದಂತೆ ಎದುರಿಸಿದ ಪ್ರಶ್ನೆಗಳು ಹಲವು.

ಆತ್ಮ ಕಥೆ ಬರೆಯುವುದು ನನ್ನ ಚಿಕ್ಕ ವಯಸ್ಸಿಗೆ ಬೇಕೇ? ಎನ್ನುವ ಪ್ರಶ್ನೆ ನನ್ನನ್ನು ಕಾಡಿದೆ. ಏಕೆಂದರೆ, ಕನ್ನಡ ಸಾಹಿತ್ಯದಲ್ಲಿ ಆತ್ಮಕಥೆಯನ್ನು ಬರೆಯುವುದು ಸಾಮಾನ್ಯವಾಗಿ, ಕೂದಲು ನೆರೆತು ತಲೆ ಅಲುಗಾಡುವಾಗ. ಅನುಭವಗಳನ್ನು ಹೇಳಿಕೊಳ್ಳಬೇಕಾದರೆ ಕೂದಲು ನೆರೆಯುವವರೆಗೆ ಕಾಯಬೇಕೆ? ಕಾಯುವುದಾದರೆ ಯಾವ ಕಾರಣಕ್ಕಾಗಿ? ಇನ್ನಷ್ಟು ಅನುಭವಗಳು ಸಂಗ್ರಹವಾಗಲಿ ಎಂದೆ? ಅಥವಾ ಅಪಕ್ವ ವಯಸ್ಸು ಎಂದು ನಿರಾಕರಿಸುವುದೇ? ಇಲ್ಲವೇ ಎಲ್ಲವೂ ಏಕಕಾಲಕ್ಕೆ ಬರೆಯಬಹುದು ಎನ್ನುವ ವಿಚಾರವೇ? ಇಂಥ ಹಲವಾರು ಪ್ರಶ್ನೆಗಳು ನನ್ನೆದುರು ಕುಣಿದಿವೆ. ಅನುಭವಗಳನ್ನು ಹೇಳಿಕೊಳ್ಳಲು ಕೂದಲು ನೆರಯಬೇಕಾಗಿಲ್ಲ, ಮುಖದ ಮೇಲೆ ಎಷ್ಟು ಗೆರೆಗಳು ಮೂಡಿರುತ್ತವೆಯೋ ಅಷ್ಟು