ವಿಷಯಕ್ಕೆ ಹೋಗು

ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಓದುವ ಮುನ್ನ ಓದುಗರೊಂದಿಗೆ

ಅನುಭವಗಳು ಮಾಗಿರುತ್ತವೆ ಎನ್ನುವುದೇನೋ ನಿಜ. ಹೀಗೆಂದ ಮಾತ್ರಕ್ಕೆ ಜವ್ವನಿಗರ ಮುಖದ ಮೇಲೆ ಗೆರೆಗಳೇ ಇಲ್ಲ, ಅವರ ಅನುಭವಗಳು ಅನುಭವಗಳೇ ಅಲ್ಲ ಎನ್ನುವ ವಿಚಾರವೂ ಸಲ್ಲ. ನಾವು ಇಂಥ ಮನೋಭಾವನೆಯಿಂದ ಹೊರಬರುವ ಆವಶ್ಯಕತೆಯೂ ಇದೆ. ಹೀಗಾಗಿಯೇ ಅನುಭವಗಳನ್ನು ಹೇಳಿಕೊಳ್ಳಲು ಕೂದಲು ನೆರೆಯಬೇಕಾಗಿಲ್ಲ, ಬಾಯೊಳಗಿನ ಹಲ್ಲುಗಳು ಉದುರಬೇಕಾಗಿಲ್ಲ. ಬದುಕಿನ ವಾಸ್ತವದ ಸಂಗತಿಗಳನ್ನು ಯಥಾವತ್ತಾಗಿ ಕೊಡುವುದೆಂದರೆ, ಬದುಕಿರುವಾಗಲೇ ಜನತೆಯ ಬಾಯಿಗೆ ಎಲೆ- ಅಡಿಕೆಯಾಗುವುದು ಎಂದರ್ಥ. ಆದರೆ ಹಿರಿಯರು ತಮ್ಮ ಆತ್ಮಕಥೆಯನ್ನು ತಮ್ಮ ಆತ್ಮತೃಪ್ತಿಗಾಗಿ ಬರೆದುಕೊಂಡದ್ದೇ ಹೆಚ್ಚು. ಆದರೆ, ಇಲ್ಲಿಯ ಆಶಯ ಅದನ್ನು ಹೊರತುಪಡಿಸಿ ಬಂದಿದೆ ಎನ್ನುವುದನ್ನು ಓದಿದವರಿಗೆ ಬಿಡಿಸಿ ಹೇಳುವ ಅಗತ್ಯವಿಲ್ಲ ಎಂದುಕೊಂಡಿರುವೆ.

ನಮ್ಮದು ಅವಿಭಕ್ತ ಕುಟುಂಬ. ನಾಲ್ಕು ತಲೆಮಾರಿನವರು ಈಗಲೂ ಒಟ್ಟಿಗೆ ಬದುಕುತ್ತಿದ್ದೇವೆ! ಭೂಮಿ ಇದೆ. ಮನೆ ಇದೆ. ನಾನೇನು ತೀರ ನಿಕೃಷ್ಟ ಮಟ್ಟದ, ಹೇಳಿಕೊಳ್ಳಲಿಕ್ಕೂ ಆಗದ ರೀತಿಯಲ್ಲಿ ಜೀವನವನ್ನು ಕಳೆದಿದ್ದೇನೆ ಎಂದು ಹೇಳಲಾರೆ. "ಹೊಟ್ಟೆ ಬಟ್ಟೆ ಕಟ್ಟಿದರ ಏನರ ಗಳಸಾಕ ಆಕೃತಿ ಇಲ್ಲಾಂದ್ರ ತಲಿಮ್ಯಾಲಿ ಚಾಪಿ ಹಾಕ್ಕೊಂಡು ಹೋಗುದ" ಎನ್ನುವ ನನ್ನಜ್ಜಿಯ ತಾತ್ವಿಕ ಧೋರಣೆಯಂತೆ ಮನೆಯವರು ಹೊಲ- ಮನೆ ಮಾಡಿದ್ದಾರೆ. ನಮ್ಮ ಅವಿಭಕ್ತ ಕುಟುಂಬದ ಈ ಆಸ್ತಿಯನ್ನು ಒಡೆದು ಹಂಚಿದರೆ ಒಬ್ಬೊಬ್ಬರಿಗೆ ಅಂಗೈ ಊರುವಷ್ಟು ನೆಲ ಸಿಕ್ಕುವುದಿಲ್ಲ! "ನಿನಗೆ ಇಂತಹದೆಲ್ಲ ಹೇಳಿಕೊಳ್ಳಲು ಮನಸ್ಸಾದರೂ ಹೇಗೆ ಬರುತ್ತೆ?" ಎಂದು ಪ್ರಶ್ನಿಸಿದವರೂ ಇದ್ದಾರೆ. ಅಷ್ಟೇ ಏಕೆ ಸ್ವತಃ ನಮ್ಮ ತಂದೆ (ಚಿಕ್ಕಪ್ಪ), ನಾನು ಬರೆದ 'ಕಾರ್ಯ' ಕಾದಂಬರಿ ವಸ್ತು ವಿಸ್ತಾರ ತಿಳಿದ ನಂತರ "ನೀನು ನಮ್ಮ ಹೆಂಗೃರು ಕುಡಿತಾರ, ನಮ್ಮಲ್ಲಿ ಹಂಗ ಮಾಡ್ತಾರ, ಹೀಂಗ ಮಾಡ್ತಾರಂತ ಯಾಕ ಬರೀಬೇಕು? ಹಂಗ ಬರೊದರಿಂದ ನಮ್ಮ ಮಾನ ಮರ್ಯಾದಿ ನಾವ ಕಳಕೊಂಡಂಗ ಆಗಂಗಿಲ್ಲೇನು? ನಾವು ಎಂಥ ದೊಡ್ಡ ಮನಸೇ ಜೋಡಿ ಕುಂದ್ರತೀವಿ, ನಿಂದ್ರತೀವಿ, ನಮ್ಮ ಕೀರ್ತಿ ಎಂಥಾದ್ದು? ಅನ್ನೋದು ಬರೀಬೇಕು. ಎಲ್ಲಾ ಬಿಟ್ಟು ಕೆಲ್ಸಕ್ಕೆ ಬಾರ ಬರೀತಿ" ಎಂದು ಪ್ರಶ್ನಿಸಿ "ಕ್ಲಾಸ್ ತೆಗೆದುಕೊಂಡದ್ದು ಇದೆ. ಆ ಸಂದರ್ಭದಲ್ಲಿ ನಾನು ಯಾವುದನ್ನೂ ಮಾತನಾಡಲಿಲ್ಲ, ಮೌನವಾಗಿದ್ದೆ. ಆದರೆ ಅವರು ಹೇಳುವ ಮಾತಿನಲ್ಲಿ ಅರ್ಥವಿತ್ತು. ಹೀಗಾಗಿ ಅದನ್ನು ತೆಗೆದು ಹಾಕುವ ಮನಸೂ ಇರಲಿಲ್ಲ. ಅವರ ವಿಚಾರಗಳು ಸಾಂಪ್ರದಾಯಿಕ ಎನಿಸಿದರೂ ಸಾಂಪ್ರದಾಯಿಕವಾದ ಎಲ್ಲ ವಿಚಾರಗಳನ್ನೂ ದೂರಲಾಗುವುದಿಲ್ಲ. ನಾಲ್ಕು ತಲೆಮಾರಿನ ಅವಿಭಕ್ತ ಕುಟುಂಬ ಅಖಂಡವಾಗಿ ಈವರೆಗೆ ನಡೆದುಬರಬೇಕಾಗಿದ್ದರೆ ನಮ್ಮ ಚಿಕ್ಕಪ್ಪನೇ ಕಾರಣ. ಅವಿಭಕ್ತ