ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಗೌರ್ಮೆಂಟ್ ಬ್ರಾಹ್ಮಣ

ಕುಟುಂಬಕ್ಕಾಗಿ ತನ್ನನ್ನು ತಾನು ಸವೆಸಿಕೊಂಡ ವ್ಯಕ್ತಿ, ಚೇಳು ಕಡಿಸಿಕೊಂಡು ನನ್ನ ತಂದೆ ಮರಣ ಹೊಂದಿದ ನಂತರ ನಮ್ಮನ್ನೆಲ್ಲ ಓದಿಸಿ ನೆಲೆ ನಿಲ್ಲುವಂತೆ ಮಾಡಿದವರು ಚಿಕ್ಕಪ್ಪನಾದರೂ, ನಾವು "ಅಪ್ಪಾ" ಎಂದೇ ಕರೆಯುತ್ತಿದ್ದೇವೆ. ನಾವು ಅಣ್ಣನ ಮಕ್ಕಳಾಗಿದ್ದಾಗಲೂ ಭಾವನಾತ್ಮಕ ಕರುಳ ಸಂಬಂಧದಿಂದ ನಾವು ತಂದೆಯನ್ನು ಕಳೆದುಕೊಂಡಿದ್ದೇವೆ ಎನ್ನುವುದನ್ನೇ ಮರೆಸಿದವರು. ಇಂಥ ವಲಯದಲ್ಲಿರುವ ಅವರು, ಅಂದು ಹೇಳಿದ ಮಾತುಗಳು ಕಾದಂಬರಿಯ ಕುರಿತಾದವು. ಈಗ ನೇರವಾಗಿ ಈ ಕೃತಿಯಲ್ಲಿ ಅನುಭವಗಳನ್ನೇ ತೋಡಿಕೊಳ್ಳುತ್ತಿದ್ದೇನೆ. ಆಡಿಕೊಳ್ಳುವವರ ಬಾಯಿಗೆ ಎಲೆ- ಅಡಿಕೆಯಾಗುತ್ತೇನೆ ಎನ್ನುವ ಅರಿವಿದ್ದು ಬರೆದಿರುವುದರಿಂದ, ಸ್ನೇಹಿತರು ಇಂಥ ವಿಷಯದ ಬಗ್ಗೆ ಕೇಳಿದಾಗೆಲ್ಲಾ "ಇಂಥದ್ದನ್ನು ಹೇಳಿಕೊಳ್ಳುವುದಕ್ಕೂ ಗಂಡೆದೆ ಬೇಕು" ಎಂದು ಉತ್ತರಿಸಿದ್ದೇನೆ.

"ಡಾ. ಮಾಲಗತ್ತಿಯವರಿಗೆ ಈಗ ಯಾರು ದಲಿತ ಅಂತ ಕರೀಬೇಕು? "ಎಂದು ನೆರೆದ ಸಭೆಯಲ್ಲಿಯೇ ಪ್ರಶ್ನೆ ಎತ್ತಿ ಚರ್ಚಿಸಿದವರೂ ಇದ್ದಾರೆ. ಅವರ ಚರ್ಚೆಯನ್ನು ಕೇಳಿ ನಾನು ಒಳಗೊಳಗೆ ಸಂತೋಷಪಟ್ಟಿದ್ದೇನೆ. ಏಕೆಂದರೆ, ಇಂಥಾ ಪ್ರಶ್ನೆಗಳು ಏಳಬೇಕು ಎನ್ನುವಂತೆ ನನ್ನ ಇರುವಿಕೆಯನ್ನು ನಾನು ರೂಢಿಸಿಕೊಂಡಿದ್ದೇನೆ. ಒಂದು ಕಾಲ ಘಟ್ಟದಲ್ಲಿ "ನಾನು ಮಾರ್ಕ್ಸ್‌ವಾದ ಓದಿದ್ದೇನೆ" ಎಂದು ತಿಳಿಸಲು ಕೊರಚಲು ಗಡ್ಡ, ಖಾದಿ ಜುಬ್ಬ ಹಾಕಿಕೊಂಡು ಸದಾ ಮಾರ್ಕ್ಸ್‌ವಾದದ ಪುಸ್ತಕಗಳನ್ನು ಬ್ಯಾಗಿನಲ್ಲಿ ಸೇರಿಸಿಕೊಂಡು ಬಗಲಿಗೆ ಚೀಲ ಜೋತಾಡಿಸುತ್ತ ತಿರುಗುತ್ತಿದ್ದೆ. ಇಂಥ ಸಂದರ್ಭದಲ್ಲಿ "ಸೊಂಟದ ಕೆಳಗಿನ ಜನಕ್ಕೆ ಏನು ಸೌಲತ್ತು ಕೊಟ್ಟೂ ಏನಿದೆ? ತಮ್ಮದನ್ನ ಬಿಡೋದಿಲ್ಲ" ಎಂದು ಹಂಗಿಸಿದ ಮಾತುಗಳು ನನ್ನ ಕಿವಿಯಲ್ಲಿ ಕಾದ ಸೀಸವನ್ನು ಸುರುವಿದಂತೆ ಗಡಚಿಕ್ಕಿವೆ. ಎದೆಯಲ್ಲಿ ಮುಳ್ಳು ಮುರಿದಂತೆ ಉಳಿದುಬಿಟ್ಟಿವೆ. ಕಾಲೇಜಿನ ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ "ಕಾಲಾಗ ಹಾಕ್ಕೊಳ್ಳಾಕ ಸರಿಯಾಗಿ ಚಪ್ಪಲಿ ಇಲ್ಲ ಜನರಲ್ ಸೆಕ್ರೇಟ್ರಿ ಆಗ್ತಾನಂತೆ" ಎಂದು ಅವಮಾನಿಸಿದ ಪ್ರಸಂಗಗಳು ಸ್ವಾಭಿಮಾನವನ್ನು ಕೆದಕಿವೆ. ಇಂಥ ಹಲವಾರು ಸಂದರ್ಭಗಳು, ಈಗ ನಾನೇನಿದ್ದರೂ ಅವು ನನ್ನ ಇರುವಿಕೆಯನ್ನು ರೂಪಿಸಿವೆ. ಅವಕಾಶ ಸಿಕ್ಕರೆ "ಒಬ್ಬ ದಲಿತನೂ ಹಂಗಿಸುವವರ ಎದೆಯ ಮೇಲೆ ಮೆಟ್ಟಿದಂತೆ ಬದುಕಬಲ್ಲ" ಎನ್ನುವುದನ್ನು ಸ್ಪಷ್ಟಪಡಿಸುವುದಕ್ಕಾಗಿ ನನ್ನ ಹಲವಾರು ವೈಯಕ್ತಿಕ ಆಸೆಗಳನ್ನು ಹತ್ತಿಕ್ಕಿ ನನ್ನ ಇರುವಿಕೆಯನ್ನು ಕರಗತ ಮಾಡಿಕೊಂಡಿದ್ದೇನೆ. ವಿಚಾರ ಸಂಕಿರಣದಲ್ಲಿ ಇಂಥ ಪ್ರಶ್ನೆಗಳು ಎದ್ದಾಗ ನಾನು "ಗೆದ್ದ ನಗೆ"ಯನ್ನು ನಕ್ಕಿದ್ದೇನೆ.

ದೇವನೂರು ಮಹಾದೇವ, ಸಿದ್ಧಲಿಂಗಯ್ಯನವರ ಕಡೆಗೆ ಬೆರಳು ಮಾಡಿ ತೋರಿಸುತ್ತ- ನಿಮ್ಮಾಕೆ ಅವರ ಹಾಗೆ ಇರಬಾರದು? ಎಂದು ತೊಡುವ ಬಟ್ಟೆಗಳನ್ನ