ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೆಣದ ಮೇಲಿನ ದುಡ್ಡು ಮತ್ತು ಮದುವೆಯ ಊಟ


ಸತ್ತವರ ತಿಥಿಯ ಊಟ ಬಿಟ್ಟು, ಜಾತ್ರೆ ಮದುವ ಈ ಸಂದರ್ಭಗಳಲ್ಲಿ ಸಿಗುವ ಊಟಕ್ಕೆ ಹಾಜರಿ ಹಾಕುವುದು ಮತ್ತೊಂದು ಕೆಲಸ. ಮದುವೆಯ ಊಟವೇ ಆಗಲಿ, ಜಾತ್ರೆಯ ಊಟವೇ ಆಗಲಿ, ಎರಡು ಮೂರು ವಾರಗಳ ಮುಂಚಿತವಾಗಿಯೇ ಜನಜನಿತವಾಗುತ್ತಿತ್ತು. ಅಂತಹದೇ ಒಂದು ಸಂದರ್ಭ, ಅದು ಶೇಠಜಿಯವರ ಏಕೈಕ ಪುತ್ರಿಯ ಮದುವೆ.

"ಇಡೀ ಊರಿಗೆ ಊಟ ಹಾಕ್ತಾರಂತೆ!"
"ಬೂಂದೆ ಊಟ"
'ಮೈಸೂರು ಪಾಕ್, ಅನ್ನ ಸಾರು!

ನುಚ್ಚು ರೊಟ್ಟಿ ನಮಗೆ (ನಮ್ಮ ಕೇರಿಯಲ್ಲಿ ನಮ್ಮ ಮನೆಯೇ ದೊಡ್ಡದು. ಸ್ವಲ್ಪ ಘನತೆ ಗೌರವಕ್ಕಾಗಿ ಹಾತೊರೆಯುವವರೆಂದರೆ ನಮ್ಮ ಮನೆಯವರೇ ಆಗಿದ್ದರು) ಅನ್ನ ಸಾರು ಎಂದರೂ ಅದು ನಮಗೆ ಆಗ ಹಬ್ಬದ ಊಟವೇ ಆಗಿತ್ತು. ನಮ್ಮ ಮನೆಯಲ್ಲಿ ಅದು ದೀಪಾವಳಿಗೋ, ನಾಗರಪಂಚಮಿಗೋ ವರ್ಷಕ್ಕೆ ಒಂದೆರಡು ಬಾರಿ ಮಾತ್ರ ಸಿಗುತ್ತಿತ್ತು.

ಶೇಠಜಿಯವರ ಮಗಳ ಮದುವೆಗೆ ಊರಿನ ಸುತ್ತಮುತ್ತಲಿನ ದಲಿತರೂ ಬಂದಿದ್ದರು. ಅಂದ್ರೆ ಊಟಕ್ಕೆ. ಹೀಗಾಗಿ ದಲಿತರ ಸಂಖ್ಯೆ ಅಂದು ಹೆಚ್ಚೇ ಹಾಗಿ ಬಿಟ್ಟಿತ್ತು. ಶೇಠಜಿಯವರ ಅಡ್ಡೆ (ವಠಾರ) ತುಂಬಾ ದೊಡ್ಡದು. ಅದಕ್ಕೆ ಎರಡು ಗೇಟು, ಒಂದು ಹಿಂದಿದ್ದರೆ ಮತ್ತೊಂದು ಮುಂದಿತ್ತು. ಮುಂದಿನ ಗೇಟಿನಲ್ಲಿ ನಮಗೆ ಪ್ರವೇಶವಿರಲಿಲ್ಲ. ನನ್ನಜ್ಜಿ ಸ್ವಲ್ಪ ಬಾಯಿಬಡಕಿ. ಶಕ್ತಿವಾನಳು ಕೂಡ, ಮೊಮ್ಮಕ್ಕಳನ್ನೆಲ್ಲ ಕೋಳಿಯಂತ ಕರೆಯುತ್ತ, ಎಳೆದೆಳೆದು ರೆಕ್ಕೆಯೊಳಗಿಟ್ಟುಕೊಂಡಂತೆ ನಮ್ಮನ್ನು ಪಕ್ಕದಲ್ಲಿಯೇ ಇಟ್ಟುಕೊಳ್ಳುತ್ತಿದ್ದಳು.

ಶೇಠಜಿಯವರ ದರ್ಶನವೆಂದರೆ ನಮಗೆ ದೇವರ ದರ್ಶನವಿದ್ದಂತೆ. ಅಲ್ಲಿ ವೀರಶೈವರದೇ ದರ್ಬಾರು ಎಂದು ಹೇಳಿದನ್ನಲ್ಲವೇ? ಅವರ ಮನೆಯಲ್ಲಿ ದುಡಿಯುವ ಇವರು ಕೈಯಲ್ಲಿ ಕೋಲು ಹಿಡಿದು ನಿಂತಿರುತ್ತಿದ್ದರು. ನಾಯಿ ಹಂದಿಗಳಿಗೆ ಹೊಡೆಯಲು ಬಳಸುವುದೂ ಅದೇ ಕೋಲು, ನಮಗೆ ಹೊಡೆಯಲು ಬಳಸುವುದೂ ಅದೇ ಕೋಲು. ಊರ ಜನರೆಲ್ಲರ ಊಟ ಮುಗಿದ ಮೇಲೆ ಕೊನೆಯಲ್ಲಿ ದಲಿತರನ್ನು ಬಿಡಲಾಗುತ್ತಿತ್ತು. ಎಷ್ಟು ದಲಿತರು ಅಲ್ಲಿ ಸೇರಿದ್ದರೆಂದರೆ ಅಜ್ಜಿ ಹೇಳುತ್ತಿದ್ದಳು:

"ಇವತ್ತು ಕಂಡಾಪಟಿ ಮಂದಿ
ಏನಿಲ್ಲಂದ್ರ, ಮೂರ ಪಂಕ್ತರ ಅಕ್ಕದ......."

ಎನ್ನುತ್ತಿದ್ದಳು. ನಮಗಿಂತಲೂ ಕೆಳದರ್ಜೆಯವರೆಂದು ಭಾವಿಸಲಾಗುವ ಇನ್ನೊಂದು ತಂಡವೂ ಅಲ್ಲಿತ್ತು. ಅವರು ಈ ಮೂರು ಪಂಕ್ತಿಗೆ ಸಂಬಂಧಪಟ್ಟವರಲ್ಲ. ಹೀಗಾಗಿ ಅವರಿಗೆ ನಮಗಿಂತಲೂ ಕೊನೆಗೆ ಊಟ. ಅವರಲ್ಲಿ ಅಡ್ಡಿ, ಚೊಂಚರು,