ಎಂದು ಹೇಳಿ ಹಾಕಿಸಿಕೊಳ್ಳುತ್ತಿದ್ದಳು. ಊಟ ಮುಗಿಸಿ ಗೇಟು ದಾಟುತ್ತಿರಬೇಕಾದರೆ ಅನ್ನ ಕದ್ದು ವಯ್ಯುವ ಕಳ್ಳರನ್ನು ಹಿಡಿಯಲು ನಿಂತ ದಂಡನಾಯಕ ಬಂದ. ಬಂದವನೇ ನಮ್ಮನ್ನೆಲ್ಲ ತಡೆದ. ಅಜ್ಜಿಯ ಹೊಟ್ಟೆಯ ಭಾಗದಲ್ಲಿ ಸೀರೆ ಉಬ್ಬಿತ್ತು. ಅದನ್ನು ನೋಡಿದ ಆತ:
- "ಏ ಮುದುಕಿ, ಏನದು ಕಟಗೊಂಡ ಹೊಂಟಿ ಏನ?" ಎಂದ
- "ಐಯ್ಯ ಇಲ್ಲ ಬಿಡಪ್ಪ....." ಎಂದು ಅಜ್ಜಿ ನಗುತ್ತಲೇ ಹೇಳಿದಳು.
ನಮ್ಮನ್ನೆಲ್ಲ ಮುಂದಕ್ಕೆ ಹೋಗಲು ಹೇಳಿದಳು. ಅವನು ಸೀರೆ ಮುಟ್ಟಲು ಬಂದಾಗ ಸ್ವಲ್ಪು ಧ್ವನಿ ಏರಿಸಿ-
- "ಏ ನಿಂದೇನು?
- ಏನಿಲ್ಲಂತ ಹೇಳತೀನಿ ಅಲ್ಲೇನು?
- ಬಾಳಿ ಗಂಟ ಹಾಕಿ ಸೀರಿ ಉಟೀನಿ ಹಂಗ ಕಾಣದ........" ಎಂದಳು.
- "ತಗಿ ನೋಡೋನ"
ಎಂದು ಆತ ಅಜ್ಜಿಯ ಸೀರೆಯ ನೆರಿಗೆಗೆ ಕೈ ಹಾಕುವ ಮುನ್ನವೇ ಸರಗು ಸರಿಸಿ ತೋರಿಸಿದಳು. ಅಷ್ಟರಲ್ಲಿಯೇ ಊಟ ಮುಗಿಸಿದವರು ಗೇಟಿನ ಬಳಿ ಸೇರತೊಡಗಿದರು. ಆಗ ಅಜ್ಜಿ ಬಾಳೆಗಂಟಿನಿಂದ ಒಂದು ಸಣ್ಣ ಗಂಟನ್ನು ತಗೆದೊಗೆದಳೇ -
- "ಲಟ್ಟು ಏನು ತಾನs ಸೌಕಾರಾಗ್ಯಾನ
- ಊಟಾ ಹಾಕದವ್ರು ದೌಳವರು ಎಲ್ಲಿದಾರೋ, ಏನೋ
- ಇವನದೇಷ್ಟು ನೋಡು....."
ಎಂದು ಬೈಯುತ್ತ ಬಂದಳು. ಗೇಟು ದಾಟಿ ಹೊರಗೆ ಬಂದಾಗ ಅಜ್ಜಿಯ ಮುಖ ನಗು ಮುಖವಾಗಿತ್ತು. 'ನಾನು ಗೆದ್ದೆ' ಎನ್ನುವ ಗೆಲುವಿತ್ತು ಅವಳ ಮುಖದಲ್ಲಿ. ಅಜ್ಜಿ ತಾನಷ್ಟೇ ತೆಗೆದಿಟ್ಟುಕೊಳ್ಳದೆ, ನಮ್ಮ ತಲೆಯ ಮೇಲಿರುವ ಟೋಪಿಯ ಅಡಿಯಲ್ಲೂ ಅಡಗಿಸಿಟ್ಟಿದ್ದಳು. ಅದನ್ನೆಲ್ಲ ಒಟ್ಟುಗೂಡಿಸುತ್ತ:
- "ಹುಡುಕಾಕ ಬರಾನ ಐನೋರಾ
- ತಿನ್ನನ್ನು ಚಳ್ಳ ಹಣ್ಣು" - ಎಂದು ಒಟಗುಡುತ್ತಿದ್ದಳು.
ನುಣುಪಾಗಿ ಬೋಳಿಸಿಕೊಳ್ಳುವ ನಮ್ಮ ತಲೆ, ಎಣ್ಣೆ ಮತ್ತು ಟೋಪಿ ಎಂದೂ ಮರೆಯುತ್ತಿರಲಿಲ್ಲ......