ವಿಷಯಕ್ಕೆ ಹೋಗು

ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪
ಗೌರ್ಮೆಂಟ್ ಬ್ರಾಹ್ಮಣ

ಬಸವಂತಪ್ಪ ಮತ್ತು ನಾನು. ನಾಳೆ ಕಸದ ಪಾಳಿ ಯಾರದಿದೆ ಎನ್ನುವುದನ್ನು ಕರಿಹಲಗೆಯ ಮೇಲೆ ಬರೆಯಲಾಗುತ್ತಿತ್ತು. ನಮ್ಮ ಹೆಸರುಗಳನ್ನು ಕರಿಹಲಗೆಯ ಮೇಲೆ ಯಥಾ ಸ್ಥಿತಿಯಲ್ಲಿ ಬರೆಯಲು ಅವರು ಹೇಸುತ್ತಿದ್ದರೆಂದು ತೋರುತ್ತದೆ. ಹೀಗಾಗಿ ದೇವ್ಯಾ, ಮಲ್ಯಾ, ಬಸ್ಯಾ ಎಂದು ಹೆಸರನ್ನು ಮುಗುಚಿ ಬರೆಯುತ್ತಿದ್ದರು. ಹೆಸರು ಬರೆಯುವ ಕೆಲಸ ಮೊದಲು ಗುರೂತ್ತಮರೇ ಮಾಡುತ್ತಿದ್ದರು. ಆನಂತರ ಆ ಕೆಲಸ ತರಗತಿಯ ಮಂತ್ರಿವರ್ಯರಿಗೆ ವರ್ಗಾವಣೆ ಮಾಡಲಾಯಿತು. ಕಸಗುಡಿಸುವ ಕೆಲಸ ದಲಿತರಾದ ನಮ್ಮ ನಾಲ್ಕು ಜನಗಳಿಗೆ ಮಾತ್ರ ಸೀಮಿತವಾಗಿತ್ತು.
ನಾಲ್ಕು ಐದು ಜನ ಒಟ್ಟಿಗೆ ಕುಳಿತುಕೊಳ್ಳಬಹುದಾದ ಉದ್ದನೆಯ ಕಟ್ಟಿಗೆಯ ಹಾಸುಮಣೆಗಳಿದ್ದವು. ಇವುಗಳನ್ನು ಎತ್ತಿ ಕಸಗುಡಿಸುವುದೆಂದರೆ ತೊಂದರೆಯಾಗುತ್ತಿತ್ತು. ಜೊತೆಗೆ ಸಿಟ್ಟೂ ಬರುತ್ತಿತ್ತು. ಯಾಕೆಂದರೆ, ಈ ಮಣೆಗಳು ಕುಳಿತುಕೊಳ್ಳಲು ನಮಗಿರಲಿಲ್ಲ. ನಾವು ನಾಲ್ಕು ಜನ ಕೊನೆಯಲ್ಲಿ ನೆಲದ ಮೇಲೆ ಕುಳಿತುಕೊಳ್ಳುತ್ತಿದ್ದವು. ಹೀಗಾಗಿ ಕುಳಿತುಕೊಳ್ಳಲು ನಮಗಿಲ್ಲದ ಆ ಮಣೆಗಳನ್ನು ಕಸ ಗುಡಿಸುವಾಗ ಎತ್ತಿ ನೆಲಕ್ಕೆ ಕುಕ್ಕುತ್ತಿದ್ದೆವು. ಯಾರಾದರೂ ನೋಡಿದರೆ, ಕೈ ಜಾರಿದವರಂತೆ ನಟಿಸುತ್ತಿದ್ದೆವು.
ಒಂದು ಬಾರಿ ನಾನು ಶಾಲೆಗೆ ಹೋಗಲಾರ ಎಂದು ಹಟ ಮಾಡಿದೆ. ಯಾಕೆ?ಎಂದು ಅಜ್ಜಿ ಪ್ರಶ್ನಿಸಿದಾಗ, ನಾ ಕೊಟ್ಟ ಕಾರಣ:

ಅವೆಲ್ಲ ಮಣಿಮ್ಯಾಗ ಕುಂದ್ರಸಾರ
ನಮಗ ನೆಲದ ಮ್ಯಾಲಿ ಕುಂದ್ರಸ್ತಾರ
ನಾ ವಲ್ಲ್ಯಾ ಹೋಗುದಿಲ್ಲ.... ಎಂದಿದ್ದೆ
ಅದಕ್ಕೆ ನನ್ನ ಅಜ್ಜಿ
ಕಟಗಿ ಮಣಿ ಏನ ಮಾಡುದು?
ಕುಂತ್ರ ಅದು ನಡತೈತಿ, ನಿನಗೆ ಸಣ್ಣ ಕೌದಿ ಹೊಲ್ದ ಕೊಡ್ತಿನಿ, ಎಂದಳು
ಅದು ನನಗೆ ಕೀಳಾಗಿ ಕಂಡದ್ದರಿಂದ ನಿರಾಕರಿಸಿದೆ.
ಹೊಸಾ ತಟ್ಟ ಕೊಡ್ತೀನಿ ತಗೊಂಡ ಹೋಗು, ಎಂದಳು
(ತಟ್ಟು = ಕತ್ತರಿಸಿದ ಸೆಣಬಿನ ಚೀಲ)

ಒಪ್ಪಿಕೊಂಡು, ಮರುದಿನ ತಟ್ಟು ತೆಗೆದುಕೊಂಡು ಠೀವಿಯಿಂದ ಹೋಗಿ ಹಾಸಿಕೊಂಡು ಗೆಲುವಿನ ಮುಖದಲ್ಲಿ ಕುಳಿತಿದ್ದೆ. ಹಾಸುಮಣೆಯ ಮೇಲೆ ಕುಳಿತುಕೊಳ್ಳುವ ಜನ ಇದನ್ನು ನೋಡಿ ಅವಕ್ಕಾಗುತ್ತಾರೆಂದು ಭಾವಿಸಿದ್ದೆ. ಆದರೆ ಆದದ್ದು ತದ್ವಿರುದ್ದ. ಅವರೆಲ್ಲ ನನ್ನನ್ನು ನೋಡಿ ಅಪಹಾಸ್ಯ ಮಾಡಿ ಚಪ್ಪಾಳೆ ತಟ್ಟಿ ನಗತೊಡಗಿದರು.
ಅವ್ನ ಚೊಣ್ಣ ಹೊಲ್ಸ ಆಗತದಂತಲೇ, ಭಾರಿ ಚೊಣ್ಣ!