ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೩೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ನಾಳಿನ ಕಸದ ಪಾಳಿ : ಮಾಲಕತ್ತಿ ೧೫

ಎಂದು ಹೇಳುತ್ತಿದ್ದರು. ಆಗ ನನ್ನ "ದೊಗಲಂ ಬೊಗಲ ಕೊಳಕು ಚೊಣ್ಣ", ತಟ್ಟು ಎಲ್ಲದರ ಮೇಲೂ ಸಿಟ್ಟು ಬಂತು. ಏನೂ ಮಾಡಲಾಗದೆ ಕಣ್ಣಲ್ಲಿ ನೀರು ತರಿಸಿತಷ್ಟೆ.
ಕರಿಹಲಗೆಯ ಮೇಲೆ ನನ್ನ ಹೆಸರನ್ನು ಮುಗುಚಿ ಬರೆಯುತ್ತಿರಲಿಲ್ಲ. ಹೆಸರು ಅರವಿಂದ ಎಂದಿರುವುದರಿಂದ ಅದು ಹೇಗೆ ಮುಗುಚಿ ಹೇಳಿದರೂ ಅವರಿಗೆ ತೃಪ್ತಿಯಾಗಿ ಕಂಡಿರಲಿಕ್ಕಿಲ್ಲ. ಅದಕ್ಕಾಗಿ ಅವರು ನನ್ನ ಅಡ್ಡ ಹೆಸರನ್ನು ಬಳಸಿಕೊಳ್ಳುತ್ತಿದ್ದರು.

"ನಾಳಿನ ಕಸದ ಪಾಳಿ - ಮಾಲಕತ್ತಿ'
ಎಂದು ಬರೆಯುತ್ತಿದ್ದರು. ಕೆಲವೊಮ್ಮೆ "ಕತ್ತಿ" ಎಂದಷ್ಟೇ ಬರೆಯುವ ಮನಸ್ಸು

ಮಾಡುತ್ತಿದ್ದರು.
ಹಾಗೆ ಬರೆದ ಹೆಸರನ್ನು ಒಮ್ಮೆ ತಿದ್ದುವ ಸಾಹಸವೂ ಮಾಡಿದ್ದೆ. ಆದರೆ ಅಂದಿನ ಅವತಾರವೇ ಬೇರೆಯಾಗಿತ್ತು. ನಮ್ಮೂರ ಪಕ್ಕದಲ್ಲಿಯೇ ಬಸರಕೊಡ ಜಾತ್ರೆ ಹೆಸರುವಾಸಿ. ನಮ್ಮ ಮನೆಯವರು ಅಲ್ಲಿಗೆ ಹೋಗುತ್ತಿದ್ದರು. ಅಂದು ನಾನು ಹೋಗಬೇಕಾಗಿತ್ತು. ಅದಕ್ಕಾಗಿ ಮಂತ್ರಿವರ್ಯರಿಗೆ ಹೇಳಿದ್ದೆ - "ನಾಳೆ ನಾನು ಜಾತ್ರೆಗೆ ಹೋಗ್ತಿನಿ, ಅದ್ಕ ಇವತ್ತೊಂದು ದಿನ ಸಾಲಿ ಬಿಡಣ ಕಸಾ ಹೊಡಿತೀನಿ" ಎಂದೆ.
ಮುಂಚಿತವಾಗಿ ಕಸಗುಡಿಸುವ ವ್ಯವಸ್ಥೆ ಹೊದರೂ ಅಂದು ಗುರುಗಳ ಅನುಮತಿ ಪಡೆದು ಮಂತ್ರಿವರ್ಯ ಅವಕಾಶ ಕೊಟ್ಟಿದ್ದ. ಶಾಲೆ ಬಿಟ್ಟಿದ್ದರಿಂದ ತರಗತಿಯಲ್ಲಿ ಯಾರೂ ಇರಲಿಲ್ಲ. ನಾನೊಬ್ಬನೇ ಇದ್ದೆ. ಆಗ ಕರಿಹಲಗೆಯ ಮೇಲೆ ಹೆಸರು ಕಂಡದ್ದು. ಎದೆ ಹೊಡೆದುಕೊಳ್ಳುತ್ತಿದ್ದರೂ, ಗುರುಗಳ ಕುರ್ಚಿಯನ್ನು ಸರಿಸಿ, ಅದರ ಮೇಲೆ ನಿಂತು "ಮಾಲಕತ್ತಿ" ಎಂದು ಬರೆದುದನ್ನು ಅಲ್ಲಿಯ "ಕ" ಕಾರ ತೆಗೆದು "ಗ"ಕಾರ ಬರೆಯಲು ಹವಣಿಸುತ್ತಿದ್ದೆ. ಎಲ್ಲಿದ್ದರೋ, ಗುರೂತ್ತಮರು ತರಗತಿಯ ಒಳಗೆ ಬಂದರು ನೋಡಿದವರೇ ಗೂಟದ ಮೇಲಿರುವ ಕಟ್ಟಿಗೆಯನ್ನು ಹಿರಿದರು. ಅವರನ್ನು ನೋಡಿದಾಕ್ಷಣವೇ ನನ್ನ ಜಂಘಾಬಲವೇ ಅಡಗಿದಂತಾಗಿ ನಡುಕ ಪ್ರಾರಂಭವಾಯಿತು. ಕೆಳಗಿಳಿದು "ಕ" ಎಂದುಬರೆದಿದ್ದಾರೆ ಎಂದು ವಿವರಣೆಯನ್ನು ಕೊಡುವುದರಲ್ಲಿಯೇ ಥಳಿಸುವುದಕ್ಕೆ ಪ್ರಾರಂಭಿಸಿದರು.
"ಕತ್ತಿ ಅಂತ ಬರದ್ರ ಏನಾಯ್ತು? ಗತ್ತಿ ಅಂತ ಮಾಡಾಕ ಹೋಗಿದ್ಯಾ? ಮಗಾ ಬರ್‍ಯಾಕ ಬಂತು ಅಂತ ತಿದ್ದಾಕ ಹೋಗ್ಯಾನ ಕತ್ತಿ ಕತ್ತಿನೇ....... ಕತ್ತೆಲ್ಲರ ಕುದುರ್‍ಯಾಕ್ಕದೇನ? ಕತ್ತಿಗೆಲ್ಲ ಯಾಕ ಬೇಕು ಹತ್ತಿಕಾಳ ನೀರ?............" ಎಂದು ಮನ ತುಂಬುವವರೆಗೆ ಹೊಡೆದರು. ಅನಂತರ ಆಳುತ್ತ ನನ್ನ ಅಂಗಿ ಕಳೆದು ಅವರ ಕುರ್ಚಿಯನ್ನು ಒರೆಸಿದ್ದು ಅಚ್ಚಳಿಯದ ನೆನಪು.