ಅದರ ಧ್ವನಿ ಕೇಳಿದಾಕ್ಷಣ ನಮ್ಮ ಎಮ್ಮೆ ಕೊಸರಿಕೊಂಡು ಓಡಿದ್ದೇ ಓಡಿದ್ದು; ಅಜ್ಜಿ ಅದರ ಹಿಂದೆಯೇ ಇದ್ದಳು. ಅಜ್ಜಿಯಿಂದ ಸುಮಾರು ದೂರ ನಾನು.
ಅಜ್ಜಿ ನನ್ನಿಂದ ದೂರವಾದಂತೆ, ನನ್ನ ದುಃಖ ಏರುತ್ತ, ಧ್ವನಿ ಸಹಿತವಾಗಿ ಅಳುವು ಹೊರಬರುತ್ತಿತ್ತು. ಅಜ್ಜಿಯನ್ನು ಕಳೆದುಕೊಳ್ಳುತ್ತೇನೆ ಎನ್ನುವ ಸಂಕಟದಲ್ಲಿ ಮುಳ್ಳಿನ ಸ್ಥಳವಿದ್ದರೂ, ಕೈಯಲ್ಲಿಯ ಚಪ್ಪಲಿಗಳು ಕಾಲಿಗೆ ಬರುತ್ತಿರಲಿಲ್ಲ. ಮುಳ್ಳು ನೆಟ್ಟಾಗ ಅಳುವು ಇಮ್ಮಡಿಯಾಗುತ್ತಿತ್ತು. ಅಜ್ಜಿ ಬಯಸಿದ್ದೇ ಒಂದು, ಆದದ್ದು ಇನ್ನೊಂದು. ಎಮ್ಮೆ ಓಡಿ ಹೋದದ್ದು ಅವಳಿಗೇನು ಬೇಸರವಿರಲಿಲ್ಲ. ಆ ದನಗಳ ಹಿಂಡಲ್ಲಿ ಕೋಣವಿರಬಹುದೆಂದು ಅವಳ ನಂಬಿಕೆ. ಆದರೆ ಅವಳ ನಂಬಿಕೆ ಸುಳ್ಳಾದಾಗ ನಿರಾಶೆಯಾಯಿತು.
ದೇಸಾಯಿಯರ ಮನೆಯ ಹಿತ್ತಲ ಬಾಗಿಲಿಗೆ ಎಮ್ಮೆಯೊಂದಿಗೆ ನಾವು ಬಂದು ನಿಂತೆವು. ಆದರೆ ಅಲ್ಲಿಯೂ ಆಳರಸರ ರಾಜಕೀಯವೇ ಅಧಿಕವಾಗಿತ್ತೆಂದು ತೋರುತ್ತದೆ. ಹೀಗಾಗಿ ಕುಂಟೋಜಿಯಲ್ಲಾದ ಹಾಗೇ ಇಲ್ಲಿಯೂ ಆಯಿತು. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಎಮ್ಮೆಯೊಂದಿಗೆ ನಮ್ಮೂರಿಗೆ ಹೊರಡಲು ಪಯಾಣ ಪ್ರಾರಂಭವಾಯತು. ಅಲ್ಲಿ ಅಜ್ಜಿಗೆ ಯಾರೋ ಒಬ್ಬರು, ಏನೋ ಹೇಳಿದರೆಂದು ತೋರುತ್ತದೆ. ಅಲ್ಲಿಂದ ನಾವು ಹೊರಡುವ ದಾರಿಯ ದಿಕ್ಕೇ ಬದಲಾಯಿತು. ಅದು ದೇಸಾಯಿಯವರ ತೋಟದ ದಾರಿ. ಸ್ವಲ್ಪು ನಡೆದು ಒಂದೆಡೆ ಕಾಯುತ್ತ ಕುಳಿತೆವು. ನಮ್ಮಲ್ಲಿಯೇ ಪ್ರಶ್ನೊತ್ತರಗಳು ನಡೆದಿದ್ದವು. ಬೆಳಕು ನಂದುತ್ತಿತ್ತು. ಕತ್ತಲೆ ಆವರಿಸುತ್ತಿತ್ತು. ಊರ ದನಗಳೆಲ್ಲ ಮನೆಗೆ ಹೋಗುತ್ತಿದ್ದವು. ಆಗ ದೇಸಾಯಿಯವರ ದನಗಳೆಲ್ಲ ಮನೆಯಿಂದ ತೋಟಕ್ಕೆ ಹೊರಟಿರಬೇಕು. ದನಗಳೆಲ್ಲ ನಾವು ಕುಳಿತ ಸ್ಥಳವನ್ನೂ ಮೀರಿ ಮುಂದಕ್ಕೆ ಹೋದವು. ಆಗಲೇ ಎಮ್ಮೆವ್ವಳ ತಳಮಳ, ಎಳೆದಾಟ ಪ್ರಾರಂಭವಾಗಿದ್ದವು. ಆ ದನಗಳಲ್ಲಿ ಇದ್ದ ಕೋಣ ಸಂಭಾಷಣೆಗೆ ಇಳಿಯಿತು. ಕೋಣವು ಹಗ್ಗ ಕಟ್ಟಿ ಹಿಡಿದುಕೊಂಡು ಹೋಗುವವನಿಂದ ಬಿಡಿಸಿಕೊಳ್ಳಲು ಹವಣಿಸುತ್ತಿತ್ತು. ಅಜ್ಜಿ ನಿಂತಲ್ಲಿಯೇ ಬಾಯಿ ಬಡಿಯತೊಡಗಿದಳು. ನಮ್ಮ ಎಮ್ಮೆ ಇದ್ದಕ್ಕಿದ್ದಂತೆ ಓಟಕೊಟ್ಟಿತು. ಆಗ ಅಜ್ಜಿಯ ಬಾಯಿ ಇನ್ನೂ ಜೋರಾಯಿತು. ಆತ ಅಜ್ಜಿಯನ್ನೊಮ್ಮೆ ತಮ್ಮ ದನಗಳನ್ನೊಮ್ಮೆ ನೋಡುತ್ತಿದ್ದ. ಆಗಲೇ ಆ ಯುವಕನ ಕೈಯಿಂದ ಕೋಣ ಜಾರಿಕೊಂಡಿತ್ತು.
ಮತ್ತೆ ನನ್ನ ಅಳುವಿನ ಧ್ವನಿಯನ್ನು ಗ್ರಹಿಸಿದ ಅಜ್ಜಿ, ಹಿಂದಿನ ಧ್ವನಿಗಿಂತ ತೀರ ಭಿನ್ನವಾಗಿಯೇ ರಮಿಸಿದಳು. ಬಹುಶಃ ಅಜ್ಜಿ ಬೇಕೆಂದೇ ಎಮ್ಮೆಯನ್ನೂ ಬಿಟ್ಟಿದ್ದಿರಲೂ ಸಾಕು, ಎಮ್ಮೆ ಮುಂದೆ ಮುಂದೆ ಓಡುತ್ತಿತ್ತು. ಯುವಕನ ಕೈಯಿಂದ ತಪ್ಪಿಸಿಕೊಂಡ ಕೋಣ ಅದೇ ವೇಗದಲ್ಲಿಯೇ ಪಲಾಯನ ಮಾಡುತ್ತಿತ್ತು. ಎತ್ತಿನ ಹಿಂದೆ ಇದ್ದ ಯುವಕನಿಗೆ ಇನ್ನುಳಿದ ದನಗಳನ್ನು ಬಿಟ್ಟು ಕೋಣದ ಬೆನ್ನಟ್ಟಿಕೊಂಡು ಓಡುವ ಮನಸ್ಸಾಗಿರಲಿಕ್ಕಿಲ್ಲ.