ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೪

ಗೌರ್ಮೆಂಟ್ ಬ್ರಾಹ್ಮಣ

ನಂತರದಲ್ಲಿ ಬಂದ ವ್ಯಕ್ತಿ ಕೆಲ ಸಮಯ ಹಿಂಬಾಲಿಸಿದ, ಪ್ರಯೋಜನವಾಗದೆ ಹೋದಾಗ ಅಜ್ಜಿಯನ್ನು ದುರುಗುಟ್ಟಿಕೊಂಡು ನೋಡತೊಡಗಿದನು.

ಕತ್ತಲಾಗುತ್ತಿದ್ದರೂ ಎಮ್ಮೆಯ ಹುಡುಕಾಟಕ್ಕೆಂದು, ದೇಸಾಯಿಯವರ ತೋಟಕ್ಕೆ ಮತ್ತು ಮನೆಗೆ ಪ್ರದಕ್ಷಿಣೆಯನ್ನು ಹಾಕಿದೆವು. ಎಮ್ಮೆ ಸಿಗಲಿಲ್ಲ. ಎಲ್ಲಿ ಹೋಯಿತು ಎನ್ನುವುದೂ ಗೊತ್ತಾಗಲಿಲ್ಲ. ಸಿಗುವ ಲಕ್ಷಣಗಳೂ ಕಾಣದೇ ಹೋದಾಗ, ಕಾಲೆಳೆಯುತ್ತ, ನಿರಾಶೆಯ ಉಸಿರಿನ ಭಾರ ಹೊತ್ತು ಮನೆಗೆ ತಲುಪಿದೆವು. ಬೆಳಿಗ್ಗೆ ಎದ್ದು ನೋಡಿದರೆ ನಮ್ಮ ಮನೆಯ ಹಿತ್ತಲಲ್ಲಿ ದೇಸಾಯಿಯವರ ಕೋಣ ಮತ್ತು ನಮ್ಮ ಎಮ್ಮೆ ಎರಡೂ ಬಂದು ನಿಂತಿವೆ!

ವಿಶ್ವಾಮಿತ್ರ ಸೃಷ್ಟಿಯ ಈ ಜೀವಿಗಳಿಗೂ ಸಹಜವಾಗಿ ಸೇರಲು ಅವಕಾಶ ಕೊಡದ ಈ ಸಮಾಜ, ಪರಸ್ಪರ ಜನರನ್ನೂ, ಪ್ರೇಮಿಗಳನ್ನೂ ಸೇರಲು ಹೇಗೆ ತಾನೇ ಅವಕಾಶ ಕೊಟ್ಟಿತು? ಆದ್ದರಿಂದಲೇ, ಮಾರಮ್ಮದೇವಿ ಮತ್ತು ಕೋಣನಂತಹ ಕಥೆ ಬೆಳೆದು ನಿಂತಿವೆ.