ಹೀಗೆ ಮಾತನಾಡಿಕೊಳ್ಳುವವರೇನು ತೀರ ಮೇಲು ಜಾತಿಯವರೇನಲ್ಲ. ಇವರೂ ಮಾಂಸಾಹಾರಿಗಳೇ.
- ಮೇ. ಜಾ.: ನಿಮ್ಮದರ ಏನು ದೊಡ್ಡ ಜಾತಿ? ದನ ತಿನ್ನು ಜಾತಿ!
- ಕೆ. ಜಾ. : ನಿಮ್ಮದರ ಏನು? ದೊಡ್ಡ ಜಾತಿ? ಸತ್ತಿದ್ದ ತಿನ್ನು ಜಾತಿ?
ಇಂಥ ಮಾತಿನ ನಡುವೆ ಅವರವರ ಗೌಪ್ಯದ ರಾಸಲೀಲೆಯ ಕಥೆಗಳು ಹೊರಬಂದು, ಅವರ ಕೂದಲು ಇವರ ಕೈಗೆ ಇವರ ಕೂದಲು ಅವರ ಕೈಗೆ. ಕೊನೆಯಲ್ಲಿ ಗಂಗಾನದಿಯಲ್ಲಿ ಮಿಂದು ಪಾವನವಾದವರಂತೆ ಕೆರೆಯಲ್ಲಿ ಮುಳುಗಿ ಹೊರಬರುತ್ತಿದ್ದರು.
ಇಷ್ಟೆಲ್ಲ ಕದನವಾದಾಗಲೂ ಒಗೆ ಗಲ್ಲು ಬಿಡುವುದಾದರೂ ಎಂತಹದ್ದು! ಕೊನೆಯ ಭಾಗದ ಕಲ್ಲು ಮಾತ್ರ. ಒಂದು ವೇಳೆ ಇಬ್ಬರು ಬಟ್ಟೆ ತೊಳೆಯುವ ಕೆಲಸ ಮುಗಿದು ಹೊರಬಂದರೆ ಕೊನೆಯಲ್ಲಿದ್ದ ಮಹಾನುಭಾವರು ಮಧ್ಯದ ಕಲ್ಲುಗಳಿಗೆ ಬಂದು ಕೊನೆಯ ಕಲ್ಲು ಬಿಟ್ಟಿಕೊಡುವ ವಾಡಿಕೆ. ಒಗೆಕಲ್ಲು ಬಿಟ್ಟು ಬರುವಾಗ ಅದನ್ನು ಆಲುಗಾಡುವಂತೆ, ಒಗೆಯಲು ಬಾರದಂತೆ ಅಭದ್ರಮಾಡಿ ಬಿಟ್ಟುಕೊಡುವ ಕೃಪೆಯೂ ತೋರುತ್ತಿದ್ದರು. ಬಟ್ಟೆ ತೊಳೆಯುವಾಗ ಸ್ವಲ್ಪ ನೀರು ಸಿಡಿದರೆ ಸಾಕು ಬಾಯಿ ಬೊಂಬಾಯಿಯಾಗುತ್ತಿತ್ತು. ನನ್ನವ್ವಯರೇನು (ನನ ತಾಯಿ, ಚಿಕ್ಕಮ್ಮ, ದೊಡ್ಡಮ್ಮ) ಮೌನ ಸಂಪನ್ನೆಯರಲ್ಲ. ಅವರು ಕಡ್ಡಿ ಗೀರುವುದನ್ನೇ ಕಾಯುವ ಸ್ವಾಭಿಮಾನಿ ಕದನಗಾತಿಯರು. ಕೆರೆಗೆ ಹೋದರೆ ಕದನವಿಲ್ಲದೆ ಮರಳುವ ಹಾಗೆಯೇ ಇರಲಿಲ್ಲ. ಅದಕ್ಕಾಗಿ ಅಜ್ಜಿ ಕೆರೆಗೆ ಬಟ್ಟೆ ತೊಳೆಯಲು ಹೋಗುವುದು ಬೇಡ ಎನ್ನುವವಳು. ಊರವರ ಕೆಟ್ಟ ಕಣ್ಣುಗಳು ಬೀಳದಿರಲೆಂದು ಹೆಚ್ಚಿಗೆ ಕೆಲಸವಿಲ್ಲದಾಗ, ಹೊಸಬಟ್ಟೆಗಳು ತೊಳೆಯುವ ದಿನವಿದ್ದಾಗ, ಮನೆಯಲ್ಲಿ ಗಂಡಸರೂ ಇಲ್ಲದ ಸಂದರ್ಭ ನೋಡಿ ಕೆರೆಗೆ ಕಾಲಿಡುತ್ತಿದ್ದರು.
ನನಗೆ ಕೆಲವೊಮ್ಮೆ ಇವರ ಕದನ ಮೋಚೆನಿಸುತ್ತಿತ್ತು. ಇನ್ನೂ ಕೆಲವೊಮ್ಮೆ ವಿಕೋಪಕ್ಕೆ ಹೋದಾಗ ಕೆರೆಯ ದಡದ ಮೇಲೆ ಕುಳಿತವ ಎದ್ದು ನಿಂತು ತತ್ತಳಂದುಳಿವ ಕುದುರೆಯ ಹಾಗೆ ಕುಣಿದಾಡುತ್ತಾ ಗೋಗರೆಯುತ್ತಿದ್ದೆ. ಕೆಲವೊಮ್ಮೆ ಅಮ್ಮನವರ ಆಜ್ಞೆ ಬರುವುದೊಂದೇ ತಡ ಅಜ್ಜಿಯನ್ನು ಕರೆತರಲು ಅಲ್ಲಿಂದ ಮನೆಗೆ ಓಡುವುದು, ಅಜ್ಜಿ ಎಷ್ಟು ಹೆಸರುವಾಸಿ ಎಂದು ಈಗಾಗಲೇ ಒಂದು ಸಂದರ್ಭದಲ್ಲಿ ಹೇಳಿದ್ದು ನೆನವಿರಬಹುದಲ್ಲವೇ?
ಬಟ್ಟೆ ತೊಳೆಯುವ ಎರಡನೆಯ ಸ್ಥಳ ಗರಸಿನ ತಗ್ಗುಗಳು. ಇವು ಮಳೆಗಾಲದಲ್ಲಿ ಮಾತ್ರ ಮೈದೆರೆದು ನಿಲ್ಲುವಂಥವು. ಬೇಸಿಗೆಯಲ್ಲಿ ಹೇಳ ಹೆಸರಿಲ್ಲದಂತೆ ಮಟಾಮಾಯವಾಗುತ್ತಿದ್ದವು. ಇವು ಊರ ಹೊರಗಿದ್ದು, ಇಲ್ಲಿ ಊರವರ