ವಿಷಯಕ್ಕೆ ಹೋಗು

ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೨
ಡಾ ಗೌರ್ಮೆಂಟ್‌ ಬ್ರಾಹ್ಮಣ

ಹೀಗೆ ಎಂದು ಮಾತನಾಡಿಸುತ್ತ, ಒಂದರೊಳಗೆ ಇನ್ನೊಂದು ಗುಪ್ಪೆ ಸೇರಿಸಿ ಎತ್ತಿಕೊಳ್ಳುತ್ತಿದ್ದರು. ಅದು ನನ್ನ ಕಣ್ಣಿಗೆ ಬಿದ್ದರೆ ಕೋಲಾಹಲವೇ ಆರಂಭ. ನನ್ನ ಮಾತಿಗೆ ಅವರು ಬೆಲೆ ಕೊಡದಿದ್ದರೆ ಅತ್ತು ಬಿಡುತ್ತಿದ್ದೆ. ನಾನು ಅಳುವುದೆಂದರೆ ಅವರಿಗೆ ಚೆಲ್ಲಾಟ. ಕೆಲವೊಮ್ಮೆ ಅವರು ಮೊದಲು ನನಗೆ ಬೆದರಿಸುತ್ತಿದ್ದರು. ನಾನು ಇನ್ನೂ ಗಟ್ಟಿಯಾಗಿ ನಾಗಸ್ವರದ ದನಿ ತೆಗೆದಾಗ, ಅಯ್ಯೋ ಸುಮ್ನೆ ಮಾಡಿದೆ ಎಂದು ದನಿ ಬದಲಾಯಿಸುತ್ತಿದ್ದರು. ಇನ್ನೂ ಕೆಲವರು ಹಣ ಕೊಡದೇ ಓಡಿಹೋಗುವುದಕ್ಕೆ ಹವಣಿಸುತ್ತಿದ್ದರು. ಹಣ ಕೊಟ್ಟಿರುವುದಾಗಿ ವಾದ ಹಾಕುತ್ತಿದ್ದರು. ಮಾಂಸ ಕೊಳ್ಳುವ ಮನುಷ್ಯರ ಕಾಟ ಹೀಗಾದರೆ, ಮನುಷ್ಯರನ್ನು ಕಾಯುತ್ತ ಅಲ್ಲಿರುವ ನಾಯಿ, ಬೆಕ್ಕು, ನೊಣಗಳನ್ನು ಕಾಯುವುದು ಮತ್ತೊಂದು ಕಲಸ. ಕೈಗಳೊ ಎರಡೇ, ಕಣ್ಣುಗಳೂ ಎರಡೇ, ಎಷ್ಟು ಜಾಗರೂಕತೆಯಿಂದ ಕಾರ್ಯ ನಿರ್ವಹಿಸಿದರೂ ಒಂದು ಗುಪ್ಫೆಯಾದರೂ ಮಂಗಮಾಯವಾಗಿರುತ್ತಿತ್ತು. ಮಾವ ಹೋಗುವಾಗಲೇ ಇಷ್ಟು ಗುಪ್ಪೆ ಇವೆ ಎಂದು ಎಚ್ಚರಿಕ ಕೊಟ್ಟು, ಹಿಂದೆ ಆಗಿ ಹೋದ ಘಟನೆಯನ್ನೂ ನೆನಪಿಸಿ ಜಾಗೃತವಾಗಿರಲು ಹೇಳಿ ಹೋಗುತ್ತಿದ್ದ. ಹಣ ಕೊಡದೆ ಯಾರಾದರೂ ಹಾಗೆಯೇ ಗುಪ್ಪೆಯನ್ನು ತೆಗೆದುಕೊಂಡು ಹೋಗಿದ್ದರೆ "ನೆಪ್ಪ ಮಾಡಕೊರೋ" ಎಂದು ನೆನಪಿಸಲು ಕಾಲಾವಕಾಶ ಕೊಡುತ್ತಿದ್ದ.

ನನ್ನ ದೊಗಲಂ ಪೊಗಲಂ ಪೊಲೀಸ್‌ ಚೊಣ್ಣ. ಆ ಚೊಣ್ಣದ ಕಂಬರ್‌ನಲ್ಲಿ ನನ್ನಂಥವರು ಸಲೀಸಾಗಿ ಮೂರು ಜನ ಸೇರಬಹುದಿತ್ತು. ಸಣಬು ಹಾಕಿ ಇಲ್ಲವೇ ಸೀರೆಯ ದಡಿ ಹಾಕಿ ನಡಕ್ಕೆ ಬಿಗಿದು ಕಟ್ಟುವ ವಾಡಿಕೆ. ಮಾಂಸದ ಗುಪ್ಪೆಯನ್ನು ಮಾರಲು ತುದಿಗಾಲ ಮೇಲೆ ಕುಳಿತಾಗ ಈ "ದೊಗಲಂ ಪೊಗಲಂ" ಚೊಣ್ಣ ಇಳಿದು ಬೀಳುತ್ತಿತ್ತು. ಮಾಂಸವನ್ನು ತೆಗೆದುಕೊಳ್ಳಲು ಬಂದವರ ದೃಷ್ಟಿ ನನ್ನ ಚೊಣ್ಣದ ಮೇಲೇಕೆ ಹೋಗುತ್ತಿತ್ತೋ!

"ಲೇ ತಮ್ಮ ಗುಂಪಿ ಏನ ಕಾಯತಿಲೇ?
ಮೊದಲು ನಿನ್ನ ಚೊಣ್ಣದಾಗಿನ ಕಪ್ಪಿ ಕಾಯಿ" ಎನ್ನುತ್ತಿದ್ದರು.
ಅವರು ಹೀಗೆಂದಾಗ ನಾನು ನಾಚಿ ನೀರಾಗುತ್ತಿದ್ದೆ.

ಇಷ್ಟು ಕೆಲಸ ಮಾಡಿದ್ದಕ್ಕೆ ಮಾವ ನನಗೆ ಕೊಡುವುದೇನು ಗೊತ್ತೆ? ಕರುಳಿನ ಕೆಲ ಭಾಗ ಹಾಗೂ ಜಠರದ ಕೆಲಭಾಗ. ಕರುಳಿಗೆ ಉಪ್ಪು ಅರಿಸಿಣ ಹಚ್ಚಿ ತಂತಿಗೆ ಹಾಕಿ ಸುಟ್ಟು ತಿನ್ನುವುದೆಂದರೆ ನನಗೆ ಹೆಚ್ಚು ಇಷ್ಟ. ನನ್ನ ಅಜ್ಜಿಗೂ ಅಷ್ಟೇ ಇಷ್ಟ. ಅದನ್ನು ಕಲಿಸಿದವಳೂ ನನ್ನಜ್ಜಿಯೇ. ನನ್ನ ಅಣ್ಣ ಕೋಳಿಯ ಕರಳನ್ನು ಶುದ್ಧಗೊಳಿಸಿ ಸುಟ್ಟು ತಿನ್ನುವುದರಲ್ಲಿ ಚತುರ. ಒಬ್ಬೊಬ್ಬರು ಒಂದೊಂದು ಕೆಲಸದಲ್ಲಿ, ರುಚಿಯಲ್ಲಿ ಚತುರತೆಯನ್ನು ಪಡೆದುಕೊಂಡಿದ್ದೆವು. ಮನೆಯವರಿಗೆಲ್ಲಾ ಬೇಯಿಸಿ ಸಾರು ಮಾಡಿ ತಿನ್ನುವುದೆಂದರೆ ಇಷ್ಟ. ಆದರೆ ತಂದೆಯವರಿಗೆ ಇದು ಆಗುತ್ತಿರಲಿಲ್ಲ. ಅವರು ವಾರಕ್ಕೊಮ್ಮೆ ಊರಿಂದ