ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೪

ಗೌರ್ಮೆಂಟ್‌ ಬ್ರಾಹ್ಮಣ

"ಮಂಡಿ ಎಲ್ಲಿದೆ ತೋರ್ಸೃತೀಯಾ?"
"ಹೂಂ" ಎಂದು ನಾನು ತೋರಿಸಲು ಹೊರಟೆ.
ಮುಲ್ಲಾ ಸಾಹೇಬರು ಮಹಾ ವ್ಯಾಪಾರಸ್ಥ ಮನುಷ್ಯ. ಸುಲಿದ ತೊಗಲು ಕೊಡುವುದಕ್ಕೆ
ಹೋದರೆ, ಬಂದವರಿಂದಲೇ ಆ ತೊಗಲು ಹೊರಳಿಸಿ ಹೊರಳಿಸಿ ತೋರಿಸಲು ಹಚ್ಚುತ್ತಿದ್ದು.
ಈ ಅಂಗಡಿ ಸ್ವಲ್ಪ ದೂರಿತ್ತು. ಅದಕ್ಕೆ ಅರಿವೆಯಲ್ಲಿ ತೊಗಲನ್ನು ಕಟ್ಟಿ ತಲೆ ಮೇಲೆ
ಹೊತ್ತು ಹೋಗಬೇಕಾಗುತ್ತಿತ್ತು. ಅದರಿಂದ ರಕ್ತದ ನೀರು ನಿಧಾನವಾಗಿ ಬಸಿದು, ತಲೆ
ಮೇಲಿಂದ ಸೋರಿ ಕೆಳಕ್ಕೂ ಇಳಿಯುತ್ತಿತ್ತು. ಬಿಸಿಲಿದ್ದರೆ ಬೆವರು ಬೇರೆ ಸೇರಿ ಇಳಿದು
ಬಂದ ಬೆವರು ನಾಲಿಗೆಗೆ ರುಚಿ ತೋರಿಸುತ್ತಿತ್ತು. ಒಂದು ತೊಗಲಿಗೆ ಮೂರು ರೂಪಾಯಿಂದ
ಎಂಟು ರೂಪಾಯಿಯವರೆಗೆ ಆಗ ಬೆಲೆ ಇತ್ತು ಎಂದು ತೋರುತ್ತದೆ. ತೊಗಲಿಗೆ ಸ್ವಲ್ಪ
ಮಧ್ಯದಲ್ಲಿ ರಂಧ್ರ ಬಿದ್ದಿದ್ದರೆ ಅದಕ್ಕೆ ಅರ್ಧಕ್ಕರ್ಥ ಬೆಲೆ ಕಡಿಮೆ ಮಾಡುತ್ತಿದ್ದ! ಅದಕ್ಕಾಗಿ
ತೊಗಲು ಅವನಿಗೆ ಬಿಚ್ಚಿ ತೋರಿಸಬೇಕು. ಮತ್ತೆ ಕೊನೆಗೆ ಮೂಲೆಯಲ್ಲಿ ಇದ್ದ ಉಪ್ಪಿನ
ಡಬ್ಬಿ ಎತ್ತಿ ತೊಗಲಿಗೆ ಉಪ್ಪು ಸವರಿ ಮಡಚಿ ಬೇರೆಡೆಗೆ ಇಟ್ಟು ಹೋಗಬೇಕು.

"ಮಂಡಿಗೆ ತೊಗಲು ಯಾರು, ನೀನೇ ಕೊಟ್ಟು ಬಂದಿಯಾ?
ಎಂದ ಬಂದವರಲ್ಹೊಬ್ಬ.
ಇಲ್ಲ. ಹನುಮಂತ (ಮಾವನ ಮಗ)
"ಆ ತೊಗರ ಗುರ ಹಿಡಿತಿಯಾ?"
"ಹೋ" ಎಂದೆ

ಅಂಗಡಿಯಲ್ಲಿ ಮುಲ್ಲಾ ಸಾಹೇಬರೂ ಇರಲಿಲ್ಲ. ಅಲ್ಲಿಯೂ ನನ್ನದೇ ದರ್ಬಾರು
ನಡೆಯಿತೆನ್ನಿ. ಐದಾರು ತೊಗಲುಗಳ ಮಧ್ಯದಲ್ಲಿ ಇದ್ದ, ತೊಗಲು ಗುರುತಿಸಿ ಹೊರ
ತೆಗೆದು ತೋರಿಸಿದೆ. ಏಕೆಂದರೇ ಈ ಶೀಲವಂತರು ಒಳಗೆ ಬಂದಿರಲಿಲ್ಲ.

"ಹಾಂ ಹೌದು ಇದೆ" ಎನ್ನುತ್ತ

ಬಗ್ಗಿದವರು ತಕ್ಷಣವೇ ಸೆಟೆದು ನಿಂತರು. ಅವರ ಮುಖದ ಛಾಯೆಯೇ
ಬದಲಾಯಿತು. ನನಗೆ ಏನೂ ಅರಿಯದಾಯಿತು. ನೇರವಾಗಿ ಅವರು ಏನೇನೂ ಹೇಳುತ್ತಾ,
ಮಾತನಾಡಿಕೊಳ್ಳುತ್ತ ಮಾವನ ಮನೆಗೆ ಬಂದರು.

ನಮ್ಮ ಅತ್ತೆ (ಶರಣವ್ವ) ಗೋಡೆಗೆ ಮೇಲೆ ಕೌದಿಯನ್ನು ತಿರುವಿ ಹಾಕುವ ಕೆಲಸ
(ಉಚ್ಚಿ ಹೊಯಿದಿದ್ದರಿಂದ ಕೌದಿ ಒದ್ದೆಯಾಗಿರುತ್ತಿದ್ದವು)ಮಾಡುತ್ತಿದ್ದಳು."ಯಾರು?
ಅಪ್ಪೋರೇನು?..... ಯಾರ ಬೇಕಾಗತ್ರಿ? ಅಂವಾ ಆ ಕಡಿ ಕೆಳಾಗ ಹೋಗಿರಬೇಕು......"

ಏನು ನಿಮ್ಮ ಮನ್ಯಾಗ ಕುರಿಗಿರಿ ಸತ್ತದೇನ್ರೀ? ಎಂದಳು.
"ಯಾವುದು ಸತ್ತಿದ್ದ ಕುರಿ, ಯಾವುದು ಸಾಯಲಾರದ ಕುರಿ ಅಂತ ತಿಳ್ಯೆಂಗಿಲ್ಲೇನು?"