ಜನಿವಾರ ಶಿವದಾರಗಳ ಮಹಾತ್ಮ
ಒಂದು ಧರ್ಮದ ಬಂಧ, ಬದುಕಿಗೆ ಬಂಧನವಾದಾಗ ಅದು ಭಯಾನಕವೆನಿಸುತ್ತದೆ. ಅಲ್ಲದೆ ಅದೇ ಮತ್ತೊಂದು ಧರ್ಮಕ್ಕೆ ಬೆಳೆಯಲು ಅಪ್ರತ್ಯಕ್ಷವಾಗಿ ಅವಕಾಶವನ್ನೂ ಮಾಡಿಕೊಡುತ್ತದೆ. ಹೀಗೆ ಒಂದು ಧರ್ಮದ ಅವನತಿ ಅಥವಾ ಪರಿಷ್ಕರಣದ ಜೊತೆಗೆ ಮತ್ತೊಂದು ಧರ್ಮದ ಏಳೆಯೂ ಇರುವುದು ಕಂಡುಬರುತ್ತದೆ. ಈ ಧರ್ಮಗಳೆಂಬ ಹಿಮಬಂಡೆಗಳ ಜೊತೆಗೆ ಆಯಾ ಧರ್ಮದ ಒಳಮತಗಳೂ ನಾಯಿಕೊಡೆಯಂತೆ ಎದ್ದು ನಿಲ್ಲುತ್ತವೆ ಮತ್ತು ಅದೇ ಧರ್ಮದ ಒಳಮತಗಳೊಂದಿಗೆ ಸ್ಪರ್ಧೆ ಮಾಡುತ್ತವೆ. ಈ ಎರಡೂ ಬಗೆಯ ಮತಾಂತರಗಳು ಬದುಕಿನಲ್ಲಿ ಹೊಸ ಹೆಸರು ತಂದರೂ, ಬದುಕಿನ ಚಲನಶೀಲತೆಯಲ್ಲಾಗಲಿ ಅಥವಾ ಮೂಲಭೂತ ಸಂಸ್ಕೃತಿಯಲ್ಲಾಗಲಿ ಬದಲಾವಣೆ ತರಲು ಸಾಧ್ಯವಾಗಿಲ್ಲ. ಬಸವಣ್ಣನವರ ಕಾಲದಲ್ಲಿ ಮತಾಂತರ ಹೊಂದಿದ ಎಷ್ಟೋ ಕೆಳಜಾತಿಯ ಜನತೆ ಆಯಾ ಜಾತಿಗಳ ಒಳಪಂಗಡದವರಾಗಿ ನಿಂತು ಬಿಟ್ಟಿದ್ದಾರೆ. ಹಾಗೆಯೇ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಅಂಬೇಡ್ಕರ್ ಬೌದ್ಧಧರ್ಮಕ್ಕೆ ಮತಾಂತರ ಹೊಂದಿದರೂ, ಅವರು ಬೌದ್ಧಧರ್ಮೀಯರಾಗದೆ ನವಬೌದ್ಧರಾದರು. ಆದರೆ ಈಗ ನಾವು ವೀರಶೈವ ಹರಿಜನರು! ಅವರ ಗತಿ ಸ್ಥಿತಿಯ ಒಂದೆರಡು ಪಳೆಯುಳಿಕೆ ಇಲ್ಲಿ ಬಿಚ್ಚಿಡಬಯಸುವೆ.
ಪ್ರಾಥಮಿಕ ಶಾಲೆಗೆ ಹೋಗುವಾಗಿನಿಂದ ಹಿಡಿದು ಹೈಸ್ಕೂಲು ಅಭ್ಯಾಸದವರೆಗೆ ನನಗೆ ಹೆಚ್ಚು ಕಾಡಿದವುಗಳೆಂದರೆ ಜನಿವಾರಗಳು ಮತ್ತು ಶಿವದಾರಗಳು; ಅನಂತರದಲ್ಲಿ ಮೋಜಾಗಿ ಕಂಡದ್ದು ಶಿವದಾರದಲ್ಲಿಯ ರಂಗುಗಳು.
ಸೇಂದಿ ಮತ್ತು ದಾರು (ಶರಾಯಿ)ಗಳ ಅಂಗಡಿ ಆಗ ಊರಲ್ಲಿ ಇರಲಿಲ್ಲವೆಂದು ತೋರುತ್ತದೆ. ಇವು ನಮ್ಮ ಕೇರಿಯಲ್ಲಿಯೇ ಬತ್ತದ ಬಾವಿಗಳಾಗಿ ನಿಂತಿದ್ದವು ಎನ್ನುವುದರಲ್ಲಿ ಸಂದೇಹವೇ ಇಲ್ಲ. ಇವು ಹಗಲಿರುಳೆನ್ನದೆ ನಮ್ಮ ಸೇವೆಯನ್ನು ಅಷ್ಟೇ ನಿಷ್ಠೆಯಿಂದ ಸಲ್ಲಿಸುತ್ತಿದ್ದವು. ಅದರಲ್ಲೂ ಕಂಟ್ರಿದಾರುಗಳ (ದೇಶೀಯ ದಾರು) ಸೇವೆ ನಡೆದರೂ ಅದು ನಿಗದಿತ ಸಮಯದಲ್ಲಿ ಮಾತ್ರ. ಪೊಲೀಸರ ಹೊಡೆತ ಬಡೆತಗಳ ನಡುವೆಯೂ ಈ ತೊರೆ ಬತ್ತದೆ ಹರಿದು ಬರುತ್ತಿತ್ತು. ಈ ಬಾವಿ ಹಾಗೂ ತೊರೆಗಳ ಭಕ್ತರು ಕೇವಲ ನಮ್ಮ ಕೇರಿಯವರೇ ಆಗಿರಲಿಲ್ಲ. ಊರಿನ ಮೇಲು ಜಾತಿಯವರು ಭಕ್ತರಾಗಿದ್ದಾಗಲೂ ಅಂತರಂಗದಲ್ಲಿ ಮಾತ್ರ ನಿಷ್ಠೆಯಿಂದ ಭಕ್ತಿಯನ್ನು ತೋರುತ್ತಿದ್ದರು. ಬಹಿರಂಗದಲ್ಲಿ ಅದು ಗೋಚರವಾಗುತ್ತಿರಲಿಲ್ಲ.