ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಜನಿವಾರ ಶಿವದಾರಗಳ ಮಹಾತ್ಮೆ

೪೫


ಕಂಟ್ರಿತೊರೆಯನ್ನು ಹೀರಲು ಬರುವ ಮೇಲುಜಾತಿಯ ಗುಪ್ತ ಭಕ್ತರ ಜನಿವಾರ
ಮತ್ತು ಶಿವದಾರಗಳೇ ನನಗೆ ಹೆಚ್ಚು ಕಾಡಿದ್ದು. ಇವರು ಎಂದೂ ತಮ್ಮ ಭಕ್ತಿಯನ್ನು
ಬಹಿರಂಗಪಡಿಸದಿದ್ದರೂ ಅದು ನಮ್ಮ ಕೇರಿಯವರಿಗೆ ಬಹಿರಂಗದ ಗುಟ್ಟೇ ಆಗಿತ್ತು.
ಇವರು ಎರಡಕ್ಕೆ ಅಥವಾ ಬಯಲುಕಡೆಗೆ ಹೋಗುವ ನೆಪದಲ್ಲಿ, ನೀರು ತುಂಬಿದ
ತಂಬಿಗೆಯನ್ನು ಕೈಯಲ್ಲಿ ಹಿಡಿದುಕೊಂಡು ಗುಡ್ಡದ ಕಡೆಗೆ ಹೋಗುತ್ತಿದ್ದರು. ನೋಡುವವರ
ಕಣ್ಣಿಗೆ ಈತ ಎರಡಕ್ಕೆ ಹೋಗುತ್ತಿದ್ದಾನೆ ಎನ್ನುವ ಭ್ರಮೆ. ಆದರೆ ಇವರು ಹೋಗುವುದು
ಶರಾಯಿ ಭಟ್ಟಿ ಇಳಿಸುವ ಸ್ಥಾನಕ್ಕೆ. ಹೋಗುವಾಗ ತಂಬಿಗೆಯಲ್ಲಿ ನೀರಿದ್ದರೆ, ಬರುವಾಗ
ಅದೇ ತಂಬಿಗೆಯಲ್ಲಿ ದಾರು! ನನಗೆ ಕಾಡಿದ್ದು ಇವರ ನಡವಳಿಕೆಯಲ್ಲ ಅಥವಾ ದಾರು
ಅಲ್ಲ. ಅವರಲ್ಲಿರುವ ಶಿವದಾರ, ಜನಿವಾರಗಳು. ಅವರು ಬಯಲು ಕಡೆಗೆ ಹೋಗುವಾಗ
ಬಗಲ-ಕೊರಳ ಈ "ದಾರ" ಕಿವಿಗೆ ತಳುಕು ಹಾಕಿಕೊಳ್ಳುತ್ತಿತ್ತು. ಇದು ಗುಡ್ಡಕ್ಕೆ ಹೋಗುವಾಗ
ಮಾತ್ರ. ಊರಲ್ಲಿ ಹೋಗುವಾಗ ಹೀಗಿರುವುದು ನಾನೆಂದೂ ಕಾಣಲಿಲ್ಲ.

ಮೇಲುಜಾತಿಯವರಲ್ಲಿ ಕೆಲವರು ಶರಾಯಿ ಅಂಗಡಿಯನ್ನು ಪ್ರವೇಶ
ಮಾಡುವವರೂ ಇದ್ದರು. ನಿಜವಾಗಿಯೂ ಇವರು ಬಂಡಾಯಗಾರರು! ಎಲ್ಲರ ಕಣ್ಣಿಗೆ
ಕಾಣುವಂತೆ ಕುಡಿದು ಬದುಕುವ, ಬಿಂಕಬಿಗುಮಾನ ಬಿಟ್ಟ ಭಕ್ತರು. ಇವರು ಕುಡಿಯುವಾಗ
ಮಾತ್ರ "ದಾರ"ವನ್ನು ಕಿವಿಗೆ ಸುತ್ತು ಹಾಕಿಕೊಂಡು, ಕಣ್ಣು-ಮೂಗು ಮುಚ್ಚಿಕೊಂಡು "ಗಟಕ್"
ಎಂದು ಕುಡಿದು ಮುಗಿಸುವವರು. ಊರವರ ಪಾಲಿಗೆ ಭಂಡರು.

ಸ್ವಾತಂತ್ರ್ಯದ ಸಂದರ್ಭದಲ್ಲಿಯೇ ನಮ್ಮ ಮನೆಯವರು ವೀರಶೈವ ಮತಕ್ಕೆ
ಮತಾಂತರ ಹೊಂದಿದವರು (ಇಲ್ಲಿ ನನಗೆ ಕ್ರೈಸ್ತ ಧರ್ಮ, ಹಿಂದೂ ಧರ್ಮ, ಪಾದ್ರಿಗಳು,
ಗಾಂಧಿ, ಅಂಬೇಡ್ಕರ್‌ ಮುಂತಾದವರು ನೆನಪಾಗುತ್ತಾರೆ. ಇವರಿಗೂ ಮೇಲು
ಜಾತಿಯವರೆನಿಸಿಕೊಳ್ಳುವ ಬಯಕೆ. ಹೀಗಾಗಿ ದೀಕ್ಷೆಯನ್ನು ಪಡೆದುಕೊಂಡರು. ಶಿವದಾರದ
ಜೊತೆಗೆ ಬಗಲಲ್ಲಿ ಲಿಂಗವೂ ಜೋತಾಡತೊಡಗಿತು.

ನಾನು ಕಾಲೇಜು ಕಟ್ಟೆ ಏರಿದ ದಿನಗಳವು. ನನಗೆ ಚೆನ್ನಾಗಿ ನೆನಪಿದೆ. ನಮ್ಮ
ಮನೆಗಳಲ್ಲೊಂದು ದೇವರ ಕೋಣೆ, ನೆಲದಿಂದ ಒಂದು ಅಡಿ ಎತ್ತರದ ಗೋಡೆಯಲ್ಲೊಂದು
ಮಾಡು, ಆ ಮಾಡಿನಲ್ಲೊಂದು ಡಬ್ಬಿ, ಆ ಡಬ್ಬಿಯೊಳಗಡೆ ಈ ಲಿಂಗಗಳು! ನೆಲಕ್ಕೆ
ಸುರುವಿದರೆ ರಾಶಿಯಾಗಿ ಬಿದ್ದು ಬಿಡುತ್ತಿದ್ದವು. ಅವುಗಳೊಂದಿಗೆ ಒಂದೆರಡು ವಂಕಿ,
ಉಡುದಾರ, ಕಾಲಲ್ಲಿ ಹಾಕಿಕೊಳ್ಳುವ ಚೈನು, ತಾಯಿತಗಳು ಇರುತ್ತಿದ್ದವು. ಇವೆಲ್ಲ
ಬೆಳ್ಳಿಯಿಂದ ಮಾಡಿದ್ದವು. ಅದರಲ್ಲೂ ಅವು ಶುದ್ಧ ಬೆಳ್ಳಿಯ ಆಭರಣಗಳೂ ಅಲ್ಲ!
ಆದರೆ ಆಗ ಅವೇ ನಮ್ಮ ಮನೆಯವರಿಗೆ ದೊಡ್ಡ ಆಸ್ತಿ! ಈ ಎಲ್ಲಾ ವಸ್ತುಗಳನ್ನು
ಡಬ್ಬಿಯಲ್ಲಿ ಹಾಕಿ ಡಬ್ಬಿಗೆ ಕೀಲಿ ಹಾಕುತ್ತಿದ್ದರು. ಗೋಡೆಯ ಮಾಡಿನಲ್ಲಿಟ್ಟು ಮಾಡಿಗೊಂದು