ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೬

ಗೌರ್ಮೆಂಟ್ ಬ್ರಾಹ್ಮಣ


ತೆಳ್ಳನೆಯ ಕಲ್ಲಿಟ್ಟು ಮುಚ್ಚಿ ಬಿಡುತ್ತಿದ್ದರು. ಮೇಲೆ ಕೆಸರು ಮೆತ್ತಿ ಹೆಂಡಿಯನ್ನು ಸಾರಿಸಿದರೆ
ಮುಗಿಯಿತು ಅಲ್ಲೊಂದು "ಮಾಡು" ಇತ್ತು ಎನ್ನುವುದೂ ಗೊತ್ತಾಗುತ್ತಿರಲಿಲ್ಲ.
ಈ ಅಮೂಲ್ಯವಾದ ವಸ್ತುಗಳನ್ನು ಕಳ್ಳರು ಕದ್ದಾರೆಂಬ ಭಯದಿಂದ ಈ ಭದ್ರತೆ!
ಗೋಡೆಯೇ ಒದ್ದರೆ ಬೀಳುವಂತಹದ್ದು. ಡಬ್ಬಿಯೋ ಗುದ್ದಿದರೆ ಸಾಕು ಒಡೆದು
ಹೋಗುವಂತಹದು! ಆದರೆ ಈ ಡಬ್ಬಿ ವರ್ಷಕ್ಕೊಮ್ಮೆ ಹಿರಿಯರ ಪೂಜೆ ಮಾಡುವಾಗ
ಮಾತ್ರ ಹೊರಬರುತ್ತಿತ್ತು.

ಇಂದು ಮನೆಯಲ್ಲಿರುವುದು ಒಂದೇ ಒಂದು ಲಿಂಗು. ಅದು ಈಗ ನನ್ನ ತಾಯಿಯ
ಕೊರಳಲ್ಲಿದೆ. ಅದರಲ್ಲಿ "ಕಾಂತಿ"ಯೂ ಇಲ್ಲ. ಖಾಲಿ ಡಬ್ಬಿ ಮಾತ್ರ ಜೋತಾಡುತ್ತಿದೆ.
ಅಂದು ಬೆಲೆಯುಳ್ಳ ವಸ್ತುಗಳಾಗಿದ್ದ ಆ ಲಿಂಗುಗಳು, ನಾನು ಕಾಲೇಜು ಕಟ್ಟೆಯನ್ನು
ಇಳಿಯುವಾಗಲೇ ಕಾಲಲ್ಲಿಯ ಕಸವಾಗಿದ್ದವು! ಹಳೆಯ ಆ ಮಾಡು ಈಗ ಕಬ್ಬಿಣದ
ವಸ್ತುಗಳನ್ನು ಇಡಲು ಬಳಸಲಾಗುತ್ತಿದೆ. ಅದರಲ್ಲಿ ಹುಡುಕಿದರೆ ಲಿಂಗುಗಳು ಸಿಗುವುದಿಲ್ಲ.
ಮಾರಾಟ ಮಾಡಿದರೆ ಹಣ ಬಾರದ ಲಿಂಗುಗಳು, ತಂಗಡಗಿಯ ಕೂಡಲ ಸಂಗಮ
ಹೊಳೆಯಲ್ಲಿ ಬಸವಣ್ಣನಂತೆ ಅವೂ ಐಕ್ಯವಾಗಿವೆ!

ನಮ್ಮದು ಅವಿಭಕ್ತ ಕುಟುಂಬ. ನನಗೆ ನೆನಪಿದ್ದಂತೆ ಮನೆಯವರೆಲ್ಲಾ ಆಗ
ಲಿಂಗುವನ್ನು ಧರಿಸುತ್ತಿರಲಿಲ್ಲ. ಕೆಲವೇ ಕೆಲವರು ಧರಿಸುತ್ತಿದ್ದರು. ಅವುಗಳಲ್ಲಿ ನನಗೆ
ಕಾಡಿದ ಲಿಂಗುಗಳು ಮೂರು. ಒಂದು, ನನ್ನ ಚಿಕ್ಕಜ್ಜಿ ಚೆನ್ನಮಲ್ಲವ್ವ ಅಜ್ಜಿಯ ಕೊರಳಲ್ಲಿಯ
ಲಿಂಗು. ಎರಡು, ಚಿಕ್ಕಪ್ಪ ಬಳಸುವ ಲಿಂಗು. ಮೂರು, ನನ್ನ ತಾಯಿಯ ಕೊರಳಲ್ಲಿಯ
ಲಿಂಗು.

ನನ್ನಜ್ಜಿ ಮತ್ತು ನನ್ನ ತಾಯಿ ಲಿಂಗುವಿನ ಸುತ್ತ ಎದ್ದು ನಿಂತ ಸಂದರ್ಭಗಳನ್ನು
ಕತೆ ಮಾಡಿ ಹೇಳುತ್ತಾರೆ! ಲಿಂಗ ದೀಕ್ಷೆಯನ್ನು ಕೊಡುವಾಗ, ಸೇಂದಿ, ದಾರು
ಕುಡಿಯಬಾರದು. ಮಾಂಸ ತಿನ್ನಬಾರದೆಂದು ಮುಂತಾಗಿ ಭಾಷೆ ತೆಗೆದುಕೊಂಡಿದ್ದರಂತೆ.
ಇದನ್ನು ನಿಭಾಯಿಸಲಾಗದೆ ಕೆಲವರು ಲಿಂಗು ತೆಗೆದುಬಿಟ್ಟರಂತೆ. ನನ್ನ ತಂದೆ ಕೆಲಕಾಲ
ಲಿಂಗುವಿನ ಕಟ್ಟಾ ಅಭಿಮಾನಿಯಾಗಿದ್ದರಂತೆ. (ಶಾಲೆಯಲ್ಲಿ ಮಾಸ್ತರ ಕೆಲಸ ಮಾಡುತ್ತಿದ್ದರು)
ಅವರ ಸ್ನೇಹಿತರೆಲ್ಲ ಸೇರಿ ಮೇಲು ಜಾತಿಯ ಬಂಡಾಯಗಾರರ ಮಾದರಿಯನ್ನು ಮುಂದಿಟ್ಟು
ಬಲವಂತದಿಂದ ಕುಡಿಸಿ ತಿನಿಸಿದರಂತೆ. ಅಂದಿನಿಂದ ನಮ್ಮ ತಂದೆ ಆ ಲಿಂಗುವಿನ ಭಕ್ತಿಯಿಂದ
ಹೊರಬಂದರು.

ನನ್ನ ತಾಯಿ ಮೊದಲ ಹೆರಿಗೆಯ ಸಂದರ್ಭದವರೆಗೆ ಅಷ್ಟೇ ಕಟ್ಟುನಿಟ್ಟಾದ ಶರಣೆ.
ಹೆರಿಗೆಯಾದಾಗ ಪೌಷ್ಠಿಕ ಆಹಾರದ ಕೊರತೆ. ಕೇವಲ ರೊಟ್ಟಿ-ಬೇಳೆ ತಿಂದು ಮರುಶಕ್ತಿ
ಸಂಪಾದಿಸುವುದು ಕಷ್ಟವೆನಿಸತೊಡಗಿತು. ಮಗುವಿನ ಆರೋಗ್ಯಕ್ಕಾಗಿ ಮತ್ತು ಇನ್ನುಳಿದವರ