ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಜನಿವಾರ ಶಿವದಾರಗಳ ಮಹಾತ್ಮೆ

೪೭


ಒತ್ತಾಯ, ಸಲಹೆಗೆ ಮಣಿದು ಮಾಂಸ ತಿಂದಳು. ಆಗ ಹೆರಿಗೆಯಾಗಿ ಇಪ್ಪತ್ತು ದಿನ.
ಮರುದಿನವೇ ಮೊಲೆ ಹಾಲು ನಿಂತುಹೋದವು. ಮಾಂಸ ತಿನ್ನುವಾಗಲೇ ತಾಯಿಯ ಮನದಲ್ಲಿ
ಅಪರಾಧಿ ಪ್ರಜ್ಞೆ. ಮೊಲೆಹಾಲು ನಿಂತ ಮೇಲೆ ಅದು ಇನ್ನೂ ಹೆಚ್ಚಾಯಿತು. ಮಾಂಸ
ತಿಂದದ್ದೇ ಘೋರ ಅಪರಾಧವೆನಿಸಿತು. ಮತ್ತೆ ಅಯ್ಯನವರಿಗೆ ಕೇಳಿದಾಗ, ಕನಿಷ್ಟ ಪಕ್ಷ
ಸೋಮವಾರ ದಿನವಾದರೂ ಮಾಂಸ ತಿನ್ನದೇ ಶುಚಿಯಾಗಿದ್ದು ಪೂಜೆ ಮಾಡಬೇಕೆಂದು
ಹೇಳಿದರಂತೆ. ಈ ರಿಯಾಯ್ತಿ ನಡವಳಿಕೆಯಿಂದಲೇ ಎರಡನೇ ಮಗುವಿಗೆ ಸಂಪೂರ್ಣ
ಮೊಲೆ ಹಾಲು ಕೊಡಲು ಸಾಧ್ಯವಾಯಿತು ಎನ್ನುವುದು ನನ್ನ ತಾಯಿಯ ನಂಬಿಕೆ. ಹೀಗಾಗಿ
ನನ್ನ ತಾಯಿಯ ತಲೆಗೂದಲು ಬೆಳ್ಳಗಾಗಿ ಮೊಮ್ಮಕ್ಕಳನ್ನು ಕಂಡರೂ ಸೋಮವಾರ ದಿನದ
ಉಪವಾಸ ವ್ರತ ಇನ್ನೂ ಬಿಟ್ಟಿಲ್ಲ!

ಲಿಂಗುವಿನ ವಿಚಾರದಲ್ಲಿ ಸಾಯುವವರೆಗೆ ಚಾಚೂ ತಪ್ಪದೆ ನಡೆದುಕೊಂಡವಳು
ನನ್ನ ಚಿಕ್ಕಜ್ಜಿ. ಎಲ್ಲವನ್ನೂ ತ್ಯಜಿಸಿ ಸಾತ್ವಿಕಳಂತೆ ಬದುಕಿ ತೋರಿಸಿದಳು. ಅಷ್ಟೊಂದು
ಭಯ ಭಕ್ತಿ ಆ ಲೋಹದ ಲಿಂಗುವಿನ ಮೇಲೆ.

"ನೀನು ನಮ್ಮ ಜಾತ್ಯಾಗ ತಪ್ಪಿ ಹುಟ್ಟಿದಿ
ನೀನು ಬ್ರಾಹ್ಮಣರ ಮನ್ಯಾಗ ಹುಟ್ಟಬೇಕಾಗಿತ್ತು"

ಎಂದು ನೆರಮನೆಯವರು ಹೇಳಿದ್ದರಂತೆ. "ಬದುಕಿದರೆ ಬದುಕಬೇಕು
ಚೆನ್ನಮಲ್ಲವನಾಂಗ' ಎಂದು ಅಯ್ಯನವರು ಮಾತಿನಲ್ಲಿಯೇ ಪ್ರಶಸ್ತಿಯನ್ನು ಕೊಟ್ಟಿದ್ದರಂತೆ.

ಮೂರು ತಲೆಮಾರುಗಳಲ್ಲಿ ಈ ಲಿಂಗುವಿನ ಬಗ್ಗೆ ವ್ಯಕ್ತವಾದ ವಿಚಾರಗಳು
ಎಷ್ಟೊಂದು ಭಿನ್ನವೆನಿಸುತ್ತವೆ. ನಮ್ಮ ತಾತ ಭಯ ಭಕ್ತಿಯಿಂದ ಇದನ್ನು ಗ್ರಹಿಸಿದರೆ
ಇನ್ನೊಬ್ಬ ತಾತ ಮಾಂಸ-ಮದ್ಯ ತ್ಯಜಿಸಿಲಾಗದೆ ಲಿಂಗುವಿಗೆ ನಮಸ್ಕಾರ ಮಾಡಿದ. ತಾತ
ಹೇಳುತ್ತಿದ್ದರಂತೆ, "ನಾವು ಮುಚ್ಚುಗರು (ಜಾತಿಯ ಹೆಸರು). ನಾವು ಮುಚ್ಚು ಪಾವಡದಲ್ಲಿ
ನೀರು ತರುವವರು. ನಮಗೂ ಲಿಂಗು ಇದೆ. ನಾವು ವೀರಶೈವರೇ, ಇದೆಲ್ಲ ಹರಳಯ್ಯನ
ಕಾಲದಿಂದಲೂ ನಡೆದುಬಂದಿದೆ. ಮುಚ್ಚು ಪಾವಡದಲ್ಲಿ ನೀರು ತರುವುದೆಂದರೆ ಹೊಳೆ
ಹಳ್ಳಗಳಲ್ಲಿ ಹೊಸತಾಗಿಯೇ ಹೊಂಡ ತೆಗೆದು, ಅದರಲ್ಲಿ ಬಂದ ಹೊಸ ತಿಳಿನೀರು
ತುಂಬಿಕೊಂಡು ಪುನಃ ಆ ಹೊಂಡದ ನೀರು ಯಾರೂ ತೆಗೆದುಕೊಳ್ಳದಿರಲೆಂದು ಮುಚ್ಚಿ
ಬಿಡುತ್ತಿದ್ದರು. ನೀರು ತರುವ ಕೊಡದ ಮೇಲೆ ಬಿಳಿ ಪಾವಡವನ್ನು ಮುಚ್ಚಿ ಕೊಡ ಮನೆಗೆ
ತರುತ್ತಿದ್ದರು. ಅಂತಹದೂ ನಮ್ಮ ಜಾತಿ" ಎಂದು ಹೇಳಿ ಹೆಮ್ಮೆ ಪಟ್ಟುಕೊಳ್ಳುತ್ತಿದ್ದರಂತೆ.
ಅನಂತರ ಅವರ ಮಕ್ಕಳು ಈ ಲಿಂಗುವನ್ನು ಅಷ್ಟೇ ವ್ಯವಹಾರಿಕವಾಗಿ ಬಳಸಿಕೊಂಡದ್ದು!

ನನ್ನ (ಚಿಕ್ಕಪ್ಪ) ತಂದೆ ಸಬ್-ರಿಜಿಸ್ಟ್ರಾರ್ ಕಛೇರಿಯಲ್ಲಿ ರೈಟರ್ ಆಗಿ ಕೆಲಸ
ಮಾಡುತ್ತಿದ್ದರು. ಅವರಿಗೆ ಹುನಗುಂದಕ್ಕೆ ವರ್ಗವಾದಾಗ ಬಾಡಿಗೆಗೆ ಮನೆ ಸಿಗಲಿಲ್ಲ.