ಲಿಂಗ ಬಳಸುವುದನ್ನು ನಿಲ್ಲಿಸಿದ್ದ ತಂದೆ, ಪುನಃ ಬಳಸಲು ಆರಂಭಿಸಿದರಂತೆ! ಬಾಡಿಗೆಗೆ
ಇದ್ದ ಮನೆಯ ಬಾಗಿಲ ಎದುರು ಗೋಡೆಗೆ ಒಂದು ಮೊಳೆ ಒಡೆದು, ದಾರಿಗೆ ಹೋಗುವವರಿಗೆ
ಬರುವವರಿಗೆ ಕಾಣುವಂತೆ ಲಿಂಗುವನ್ನು ಗೂಟಕ್ಕೆ ತೂಗುಬಿಟ್ಟಿದ್ದರಂತೆ.
ನಾನು ಸೋಲಾಪುರದಲ್ಲಿ ಕೆಲ ಕಾಲ ಶಾಲೆ ಓದಿದ ಬಗ್ಗೆ ಹಿಂದಿನ ಒಂದು
ಸಂದರ್ಭದಲ್ಲಿ ಹೇಳಿದ್ದೇನೆ. ನಾನು ಕಳೆದ ಆ ದಿನಗಳು ನನ್ನ ಎರಡನೆಯ ಚಿಕ್ಕಪ್ಪನ
ಮನೆಯಲ್ಲಿ, ಅವರು ರೈಲ್ವೆ ಆರಕ್ಷಕ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ
ಸರ್ಕಾರಿ ವಸತಿ ಗೃಹದಲ್ಲಿಯೇ ಅಂದರೆ, ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ವಾಸವಾಗಿದ್ದರು.
ಇವರೂ ತಮ್ಮ ಜಾತಿಯನ್ನು ನೇರವಾಗಿ ಹೇಳಿಕೊಳ್ಳಲು ಹಿಂಜರಿಯುವ ಪ್ರವೃತ್ತಿಯವರು.
ತಮ್ಮ ಜಾತಿಯನ್ನು ಗೌಪ್ಯವಾಗಿಡುವುದರ ಜೊತೆಗೆ ಮಾಂಸ ತಿನ್ನುವುದನ್ನು
ಗೌಪ್ಯವಾಗಿಟ್ಟಿದ್ದರು. ಕೇಳಿದವರಿಗೆಲ್ಲ ನಾವು ವೀರಶೈವರೆಂದೂ, ಒಕ್ಕಲಿಗರೆಂದೂ
ಹೇಳಿಕೊಳ್ಳುತ್ತಿದ್ದರು! ಆದರೆ ಮೂಳೆ ಕಡಿಯುವ ರುಚಿ ಮಾತ್ರ ಮರೆತಿರಲಿಲ್ಲ. ವಾರಕ್ಕೆ
ಒಮ್ಮೆ ಮಾಂಸ ತಂದೇ ತರುತ್ತಿದ್ದರು. ಇದೆಲ್ಲ ಕದ್ದು ಮುಚ್ಚಿ ಅಂಜುತ್ತ ಅಳುಕುತ್ತಲೇ
ನಡೆಯುತ್ತಿತ್ತು. ಮಾಂಸ ತಿಂದಾದ ಮೇಲೆ ಎಲುಬುಗಳನ್ನು ಹೊರಗೆ ಎಸೆಯುವುದು
ಸಮಸ್ಯೆಯಾಗಿತ್ತು. ತಿನ್ನದೇ ಉಳಿದ ಎಲುಬು-ಮೂಳೆಗಳನ್ನೆಲ್ಲಾ ಒಂದು ಪೇಪರಿನಲ್ಲಿ
ಕೂಡಿ ಹಾಕಿ ಕಟ್ಟಿ ಇಡುತ್ತಿದ್ದರು. ಮರುದಿನ ನಾನು ಶಾಲೆಗೆ ಹೋಗುವಾಗ ಆ ಕಾಗದದಲ್ಲಿ
ಕಟ್ಟಿದ ಗಂಟು ಮರೆಯದೆ ನನ್ನ ಚಿಕ್ಕಮ್ಮ, ನನ್ನ ಪುಸ್ತಕದ ಚೀಲದಲ್ಲಿ ಇಡುತ್ತಿದ್ದರು.
ಮನೆಯಿಂದ ಸುಮಾರು ದೂರ ಹೋದ ಮೇಲೆ ೮ ಗಂಟು ಗಂಟಾಗಿಯೇ ಎಸೆದು ಮುಂದೆ
ಹೋಗುತ್ತಿದ್ದೆ. ಯಾವ ಮಹಾನುಭಾವ ಬಿಚ್ಚಿ ನೋಡುವ ಸಾಹಸಕ್ಕೆ ಕೈಹಾಕುತ್ತಿದ್ದನೋ
ಏನೋ ನನಗೆ ಗೊತ್ತಿಲ್ಲ!
ಈಗ ಎಲ್ಲೆಂದರಲ್ಲೇ ನಾನು ಡಂಗುರ ಸಾರಿದಂತೆ ನಾನು ಜಾತಿಯನ್ನು ಹೇಳಿಕೊಂಡು
ತಿರುಗುತ್ತೇನೆ. ಮನೆಗೆ ಬಂದಾಗಲೆಲ್ಲ ನನ್ನ ತಾಯಿಯ ಕೊರಳಲ್ಲಿರುವ ಆ ಲಿಂಗು ನನ್ನನ್ನು
ಸತಾಯಿಸುತ್ತದೆ. ಅದು ಹಗ್ಗಕ್ಕೆ ನೇಣು ಹಾಕಿಕೊಂಡವರಂತೆ ಜೋತಾಡುತ್ತಿರುತ್ತದೆ. ಅದನ್ನು
ತೆಗೆದೊಗೆಯಲು ನನ್ನ ತಾಯಿಗೆ ಸಾಕಷ್ಟು ಬಾರಿ ಹೇಳಿದ್ದೇನೆ. ಇನ್ನೂ ಹೆಚ್ಚಿನ ಒತ್ತಾಯ
ನನ್ನಿಂದ ಸಾಧ್ಯವಾಗಿಲ್ಲ. ನನ್ನ ವರ್ತನೆ ನನ್ನ ತಾಯಿಗೆ ಸಾಕಷ್ಟು ಬೇಸರ ತಂದಿದೆ
ಎನ್ನುವುದರಲ್ಲಂತೂ ಸಂದೇಹವಿಲ್ಲ. ಇದೊಂದೇ ವಿಷಯದಲ್ಲಿ ಭಿನ್ನಾಭಿಪ್ರಾಯ ಎಂದಲ್ಲ.
ಇಂಥ ಎಷ್ಟೋ ವಿಷಯಗಳು ನನ್ನನ್ನು ನನ್ನ ಮನೆಯವರಿಂದ ದೂರ ಸರಿಸಿವೆ. ಲಿಂಗುವಿನ
ವಿಷಯದ ಬಗ್ಗೆ ತಾಯಿಗೆ ಹೇಳಿದಾಗ ಯಾವಾಗಲೂ ಗುಬ್ಬಣ್ಯಾ ಎಂದು ಆತ್ಮೀಯವಾಗಿ
ಕರೆಯುವ ನನ್ನ ತಾಯಿ ನನಗೆ ಮಾರ್ಗದರ್ಶನ ಕೊಟ್ಟದ್ದು ಹೀಗೆ:
ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೬೪
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೪೮
ಗೌರ್ಮೆಂಟ್ ಬ್ರಾಹ್ಮಣ