ಹಂಡ್ಯಾನ ಲಾಳಿ ಕತ್ತರಿಸಿದ ಪ್ರಸಂಗ
ನಮ್ಮೂರ ಕೇರಿಯಲ್ಲಿ ನಾಯಿಗಳಿಗೇನು ಬರಗಾಲವಿರಲಿಲ್ಲ. ಅದರಲ್ಲಿ ಒಳ್ಳೇ ತಳಿಯ ನಾಯಿಗಳಿದ್ದಂತೆ ಬಡಕಲು ಹುರುಕುಕಜ್ಜಿಯಿಂದ ಕೂಡಿದ ನಾಯಿಗಳೂ ಇದ್ದುವು. ಒಳ್ಳೆಯ ತಳಿಯ ನಾಯಿ ಗಬ್ಬಾಗಿದೆ. ಎಂದರೆ ಸಾಕು, ಅದರ ಕುನ್ನಿ ಬೇಕು ಎಂದು ಮುಂಚಿತವಾಗಿಯೇ ಊರ ಜನ "ಬುಕ್ಕಿಂಗ್'ಗೆ ಹಾತೊರೆಯುತ್ತಿದ್ದರು. ನಾಲೈದು ಜನ ಸ್ನೇಹಿತರು ಸೇರಿ ನೀರಿಗೆ ಹೊರಟಿದ್ದೆವು. ನನ್ನ ಹೆಗಲ ಮೇಲೆ ಜೋಡಿ ಕೊಡಗಳಿದ್ದವು. ಕೇರಿಯಲ್ಲಿ ನಾವು ಸ್ವಲ್ಪ ಬಲ ಉಳ್ಳವರು. ಹೀಗಾಗಿ ನನ್ನ ಹೆಗಲ ಮೇಲೆ ಇದ್ದದ್ದು ಕಂಚಿನ ಕೊಡಗಳು. ಅವೇನು ಕೊಂಡು ತಂದ ಕೊಡಗಳಲ್ಲಾ ಕದ್ದು ತಂದ ಕೊಡಗಳೂ ಅಲ್ಲಾ. ಅಜ್ಜಿ ಬೇರೆಯವರಿಂದ ಅಡವಿಟ್ಟುಕೊಂಡ ಕೊಡಗಳು. ಅಡವಿಟ್ಟವರಾದರೂ ಯಾರು? ಅವರೂ ನಮ್ಮ ಜನಗಳೇ ಆಗಿದ್ದರು. ಇನ್ನುಳಿದ ಕೆಲವರು ಕಂಚಿನ ಕೊಡಗಳನ್ನು ತಂದಿದ್ದರು. ಅಜ್ಜಿಯ ಸ್ವಭಾವವೇ ಬೇರೆ. ಹೊಟ್ಟೆ ಬಾಯಿ ಕಟ್ಟಿ ಗಂಟು ಹಾಕಿ ಇಡುವವಳು. ಇದೇ ಹಣ ಅಡವಿಟ್ಟುಕೊಳ್ಳಲು ಉಪಯೋಗಿಸುತ್ತಿದ್ದಳು. ಇದಕ್ಕಾಗಿ ಚಿಕ್ಕಪ್ಪ "ಜಗಳ ಮಾಡಿದ ಪ್ರಸಂಗಗಳೂ ಸಾಕಷ್ಟು ಹೊಟ್ಟೆ ಕಟ್ಟಿ ಅದ್ಯಾಕ ಮಾಡಬೇಕು? ಎಂದರೆ "ಬಾಳೆ ಮಾಡ್ತಿರಾ? ನೀವೇನು ಬಾಳೆ ಮಾಡ್ತೀರಿ? ತಲೆ ಮ್ಯಾಲೆ ಮೂರು ಬಗಸಿಮಣ್ಣೆ ಹಾಕ್ಕೊಂಡು ಹೋಗೋದ ಏನ ತಿಂದರು ಏನ ಅನೈತಿ ಹೊಟ್ಯಾಗ ಹೇಲ ಅಕ್ಕದ ಬಂಗಾರ ಆಗಂಗಿಲ್ಲ" ಎನ್ನುತ್ತಿದ್ದಳು. ಇವೆಲ್ಲಾ ತೆರೆಯ ಮರೆಯಲ್ಲಿ ನಡೆಯುತ್ತಿದ್ದವು. ನಮ್ಮೊಂದಿಗೆ ನೀರಿಗೆ ಬರುವವರಲ್ಲಿ ಮಣ್ಣಿನ ಕೊಡಗಳು ಇದ್ದವು. ನೀರಿಗೆ ಹೊರಟ ಸಮಯದಲ್ಲಿ ಸಾಕಿದ ನಾಯಿಗಳು ಹಿಂದೆ ಬೆನ್ನು ಹತ್ತಿ ಬರುವುದು ಅವುಗಳನ್ನು ಮರಳಿ ಓಡಿಸುವುದು ಸಾಮಾನ್ಯವಾದ ದೃಶ್ಯ. ಆವತ್ತು "ಹಂಡ್ಯಾ" ನಮ್ಮ ಬೆನ್ನ ಹತ್ತಿ ಬರುತ್ತಿದ್ದ. ನನ್ನ ಸ್ನೇಹಿತ ಅದನ್ನು ಹೊಡೆದು ಓಡಿಸಿ ಬಂದ. ಸ್ವಲ್ಪ ದಾರಿ ಕ್ರಮಿಸಿ ಮರಳಿ ನೋಡಿದರೆ, ಮತ್ತೆ ಹಿಂದೆ ಬರುತ್ತಿತ್ತು.